ಬೆಳಗಾವಿ, ಅ.12 www.bengaluruwire.com: ಜಿಲ್ಲೆಯ ಎಂ.ಕೆ ಹುಬ್ಬಳ್ಳಿ ಸಮೀಪ ಭರ್ಜರಿ ಕಾರ್ಯಾಚರಣೆ ನಡೆಸಿರುವ ಅಬಕಾರಿ ಇಲಾಖೆ ಅಧಿಕಾರಿಗಳು, ಅಕ್ರಮವಾಗಿ ಸಾಗಾಟ ಮಾಡುತ್ತಿದ್ದ ಬರೋಬ್ಬರಿ 24,000 ಲೀಟರ್ ಮದ್ಯಸಾರ ಹಾಗೂ ಸಾಗಾಟಕ್ಕೆ ಬಳಸಿದ್ದ 12 ಚಕ್ರದ ಬೃಹತ್ ಟ್ಯಾಂಕರ್ ವಾಹನವನ್ನು ಜಪ್ತಿ ಮಾಡಿದ್ದಾರೆ.
ವಶಪಡಿಸಿಕೊಳ್ಳಲಾದ ಮದ್ಯಸಾರ ಮತ್ತು ವಾಹನದ ಒಟ್ಟು ಮೌಲ್ಯ ₹32,40,000 ಎಂದು ಅಂದಾಜಿಸಲಾಗಿದೆ.
ರಾಜ್ಯ ಹೆದ್ದಾರಿಯಲ್ಲಿ ನಡುರಾತ್ರಿ ಕಾರ್ಯಾಚರಣೆ: ಅಬಕಾರಿ ಹೆಚ್ಚುವರಿ ಆಯುಕ್ತರು (ಕೇಂದ್ರ ಸ್ಥಾನ, ಬೆಳಗಾವಿ) ಹಾಗೂ ಬೆಳಗಾವಿ ವಿಭಾಗದ ಅಬಕಾರಿ ಜಂಟಿ ಆಯುಕ್ತರಾದ ಎಫ್.ಎಚ್. ಚಲವಾದಿ ಅವರ ನಿರ್ದೇಶನದಲ್ಲಿ ಈ ದಾಳಿ ನಡೆದಿದೆ. ಬೆಳಗಾವಿ ದಕ್ಷಿಣ ಜಿಲ್ಲೆಯ ಅಬಕಾರಿ ಉಪ ಆಯುಕ್ತ ಜಗದೀಶ್ ಕುಲಕರ್ಣಿ ಮತ್ತು ರಾಮದುರ್ಗ ಉಪ ವಿಭಾಗದ ಅಬಕಾರಿ ಉಪ ಅಧೀಕ್ಷಕ ಎಸ್.ಎಚ್. ಪಾಟೀಲ್ ಅವರ ಮಾರ್ಗದರ್ಶನದಲ್ಲಿ ಬೈಲಹೊಂಗಲ ವಲಯದ ಅಧಿಕಾರಿಗಳು ಹಾಗೂ ಸಿಬ್ಬಂದಿ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.
ಅ.10 ರಂದು ನಸುಕಿನ ಜಾವ 12:25 ರ ಸುಮಾರಿಗೆ ಹೊಳಿಹೊಸೂರು ಗ್ರಾಮದಿಂದ ಎಂ.ಕೆ ಹುಬ್ಬಳ್ಳಿ ಪಟ್ಟಣಕ್ಕೆ ಸಂಪರ್ಕಿಸುವ ರಾಜ್ಯ ಹೆದ್ದಾರಿಯಲ್ಲಿ ಅಧಿಕಾರಿಗಳು ರಸ್ತೆಗಾವಲು (ಪ್ಯಾಟ್ರೋಲಿಂಗ್) ನಡೆಸುತ್ತಿದ್ದರು. ಈ ವೇಳೆ ಅನುಮಾನಾಸ್ಪದವಾಗಿ ಬಂದ ‘ಭಾರತ್ ಬೆಂಜ್’ ಸಂಸ್ಥೆಯ 12 ಚಕ್ರದ ಟ್ಯಾಂಕರ್ (ಸಂಖ್ಯೆ: KA-25-AA-3750) ಅನ್ನು ತಡೆದು ತಪಾಸಣೆ ನಡೆಸಿದಾಗ, ಯಾವುದೇ ಪರವಾನಗಿ ಇಲ್ಲದೆ ಅಕ್ರಮವಾಗಿ ಸಾಗಿಸುತ್ತಿದ್ದ 24 ಸಾವಿರ ಲೀಟರ್ ಮದ್ಯಸಾರ ಪತ್ತೆಯಾಗಿದೆ.

ಚಾಲಕನಿಗೆ ಬಿಎನ್‌ಎಸ್‌ಎಸ್ ನೋಟಿಸ್, ಮಾಲೀಕರ ವಿರುದ್ಧ ಎಫ್‌ಐಆರ್:
ಟ್ಯಾಂಕರ್ ಚಾಲಕ, ವಿಜಯಪುರ ಜಿಲ್ಲೆಯ ಬೋಳಚಿಕ್ಕಲಕಿ ನಿವಾಸಿ ಬಂದೇನವಾಜ ನಬಿ ಸಾಬ್ ತಿಗಣಿಬಿದರಿ ಎಂಬಾತನಿಗೆ ಬಿಎನ್‌ಎಸ್‌ಎಸ್ ಕಾಯ್ದೆ 2023 ರ ಕಲಂ 35(3) ಅಡಿಯಲ್ಲಿ ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ನೀಡಲಾಗಿದೆ. ವಾಹನ ಮಾಲೀಕರು ಹಾಗೂ ಚಾಲಕನ ವಿರುದ್ಧ ಅಬಕಾರಿ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಳ್ಳಲಾಗಿದ್ದು, ಸಂಬಂಧಪಟ್ಟ ನ್ಯಾಯಾಲಯಕ್ಕೆ ಪ್ರಥಮ ವರ್ತಮಾನ ವರದಿ (ಎಫ್‌ಐಆರ್) ಸಲ್ಲಿಸಿ ಮುಂದಿನ ತನಿಖೆ ಕೈಗೊಳ್ಳಲಾಗಿದೆ.



















