ಬೆಂಗಳೂರು,ಅ.07 www.bengaluruwire.com: ಆದಾಯಕ್ಕಿಂತ ಹೆಚ್ಚು ಅಕ್ರಮ ಆಸ್ತಿ ಸಂಪಾದಿಸಿದ ಆರೋಪ ಎದುರಿಸುತ್ತಿದ್ದ ಅರಣ್ಯ ಇಲಾಖೆಯ ಅಧಿಕಾರಿಗೆ ಬೆಂಗಳೂರಿನ 79ನೇ ಸಿಟಿ ಸಿವಿಲ್ ಮತ್ತು ಸೆಷನ್ಸ್ ನ್ಯಾಯಾಲಯವು ಮೂರು ವರ್ಷಗಳ ಸಾದಾ ಶಿಕ್ಷೆ ಹಾಗೂ ₹1.38 ಕೋಟಿ ಭಾರಿ ದಂಡ ವಿಧಿಸಿ ಆದೇಶ ಹೊರಡಿಸಿದೆ.
ಅರಣ್ಯ ಇಲಾಖೆಯ ಯೋಜನಾ ಶಾಖೆಯ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ (ಎಸಿಎಫ್) ಎಂ.ಎಸ್. ರವಿಕುಮಾರ್ ಅವರೇ ಶಿಕ್ಷೆಗೆ ಗುರಿಯಾದವರು. ನ್ಯಾಯಾಲಯ ವಿಧಿಸಿದ ದಂಡ ಪಾವತಿಸಲು ತಪ್ಪಿದರೆ ಹೆಚ್ಚುವರಿಯಾಗಿ ಮತ್ತೊಂದು ವರ್ಷ ಸಾದಾ ಸಜೆ ಅನುಭವಿಸಬೇಕಾಗುತ್ತದೆ ಎಂದು ನ್ಯಾಯಾಲಯ ಎಚ್ಚರಿಸಿದೆ.
ಪ್ರಕರಣದ ಹಿನ್ನೆಲೆ:
ಮಲ್ಲೇಶ್ವರಂನ ಅರಣ್ಯ ಭವನದಲ್ಲಿ ಕಾರ್ಯನಿರ್ವಹಿಸುತ್ತಿದ್ದ ಎಂ.ಎಸ್. ರವಿಕುಮಾರ್ ಅವರು ತಮ್ಮ ಆದಾಯದ ಮೂಲಗಳಿಗಿಂತ ಹೆಚ್ಚಿನ ಅಕ್ರಮ ಆಸ್ತಿ ಹೊಂದಿರುವ ಬಗ್ಗೆ ಕರ್ನಾಟಕ ಲೋಕಾಯುಕ್ತ ಪೊಲೀಸ್ ಠಾಣೆಯಲ್ಲಿ 2014ರಲ್ಲಿ ಭ್ರಷ್ಟಾಚಾರ ಪ್ರತಿಬಂಧ ಕಾಯ್ದೆಯಡಿ (ಮೊಕದ್ದಮೆ ಸಂಖ್ಯೆ: 25/2014) ಪ್ರಕರಣ ದಾಖಲಾಗಿತ್ತು.

ಅಂದಿನ ಪೊಲೀಸ್ ಇನ್‌ಸ್ಪೆಕ್ಟರ್ ಕುಮಾರಸ್ವಾಮಿ ಬಿ.ಜೆ. ಅವರು ಪ್ರಾಥಮಿಕ ತನಿಖೆ ಕೈಗೊಂಡಿದ್ದರು. ನಂತರ ಪೊಲೀಸ್ ನಿರೀಕ್ಷಕರಾದ ಮಹೇಶ್ ಎನ್.ವಿ. ಅವರು ತನಿಖೆ ಮುಂದುವರಿಸಿ, ಆರೋಪಿ ರವಿಕುಮಾರ್ ತಮ್ಮ ಒಟ್ಟು ಆದಾಯಕ್ಕಿಂತ ₹1,35,29,714.37 (ಶೇ. 45.27 ರಷ್ಟು) ಅಕ್ರಮ ಆಸ್ತಿ ಹೊಂದಿರುವುದನ್ನು ದೃಢಪಡಿಸಿ ಲೋಕಾಯುಕ್ತ ವಿಶೇಷ ನ್ಯಾಯಾಲಯಕ್ಕೆ ದೋಷಾರೋಪಣ ಪಟ್ಟಿ ಸಲ್ಲಿಸಿದ್ದರು. ತನಿಖೆಗೆ ತನಿಖಾ ಸಹಾಯಕರಾಗಿ ವನಜಾಕ್ಷಿ ಆರ್. (ಮ.ಹೆಚ್.ಸಿ) ಸಹಕರಿಸಿದ್ದರು.
ನ್ಯಾಯಾಲಯದ ಅಂತಿಮ ತೀರ್ಪು: ಪ್ರಕರಣದ ವಿಚಾರಣೆ ನಡೆಸಿದ ಬೆಂಗಳೂರಿನ ಘನ 79ನೇ ಸಿಟಿ ಸಿವಿಲ್ ಮತ್ತು ಸೆಷನ್ಸ್ ನ್ಯಾಯಾಲಯದ (ಸಿಸಿಹೆಚ್-24) ಗೌರವಾನ್ವಿತ ನ್ಯಾಯಾಧೀಶರಾದ ಸಿ.ಎಂ. ಪುಷ್ಪಲತಾ ಅವರು, ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಅಂತಿಮ ತೀರ್ಪು ಪ್ರಕಟಿಸಿದ್ದಾರೆ.
ಸರ್ಕಾರಿ ಅಭಿಯೋಜಕರಾದ ಬದರಿನಾಥ್ ಅವರು ಸರ್ಕಾರದ ಪರವಾಗಿ ಪ್ರಬಲ ಸಾಕ್ಷ್ಯಾಧಾರಗಳೊಂದಿಗೆ ವಾದ ಮಂಡಿಸಿದ್ದರು. ನ್ಯಾಯಾಲಯ ಪ್ರಕ್ರಿಯೆಯ ವಿಚಾರಣಾ ಹಂತದಲ್ಲಿ ಕೃಷ್ಣಮೂರ್ತಿ ಎ.ಎಸ್.ಐ ಮತ್ತು ಚಂದ್ರಶೇಖರ್ ಹೆಚ್.ಸಿ ಸಹಕರಿಸಿದ್ದರು.

















