ಬೆಂಗಳೂರು, ಅ.07 www.bengaluruwire.com: ಸಾಮಾನ್ಯವಾಗಿ ಸರ್ಕಾರಿ ಕಚೇರಿಗಳು ಅಂದರೆ ಕಡತಗಳ ವಿಲೇವಾರಿ, ಗಂಭೀರ ಮುಖಭಾವದ ಅಧಿಕಾರಿಗಳು ಮತ್ತು ಜನರ ದೂರು-ದುಮ್ಮಾನಗಳ ಗದ್ದಲವೇ ನೆನಪಾಗುವುದು ಸಹಜ.
ಆದರೆ, ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ (ಬಿಡಿಎ) ಕೇಂದ್ರ ಕಚೇರಿಯಲ್ಲಿ ಬುಧವಾರ ನಡೆದ ಘಟನೆ ಇಡೀ ವಾತಾವರಣವನ್ನೇ ಬದಲಿಸಿತು. ಕಣ್ಣಿಗೆ ಕಾಣದ ಲೋಕದಲ್ಲಿದ್ದರೂ ಕನಸುಗಳಿಗೆ ಕೊರತೆಯಿಲ್ಲ ಎಂಬುದನ್ನು ಸಾರುವಂತೆ, ದೃಷ್ಟಿಹೀನ ಬಾಲಕನೊಬ್ಬ ಬಿಡಿಎ ಅಧ್ಯಕ್ಷರ ಅಧಿಕೃತ ಕುರ್ಚಿಯ ಮೇಲೆ ಕುಳಿತು ಎಲ್ಲರ ಮುಖದಲ್ಲೂ ಮಂದಹಾಸ ಮೂಡಿಸಿದನು.
ಸಮಾಜದ ಮುಖ್ಯವಾಹಿನಿಯಿಂದ ವಂಚಿತರಾಗಬಾರದು ಎಂಬ ಆಶಯದೊಂದಿಗೆ, ನಗರದ ‘ಜ್ಯೋತಿ ಸೇವಾ ಸ್ಕೂಲ್ ಫಾರ್ ಬ್ಲೈಂಡ್’ ಶಾಲೆಯ 65 ಮುಗ್ಧ ಮಕ್ಕಳನ್ನು ಬಿಡಿಎ ಕಚೇರಿಗೆ ವಿಶೇಷ ಅತಿಥಿಗಳಾಗಿ ಆಹ್ವಾನಿಸಲಾಗಿತ್ತು.
ಕುರ್ಚಿಯಲ್ಲಿ ಅರಳಿದ ಮುಗ್ಧ ನಗೆ: ರಾಹುಲ್ ‘ಒಂದು ದಿನದ ಅಧ್ಯಕ್ಷ’:

ಈ ಭೇಟಿಯ ಅತ್ಯಂತ ಭಾವುಕ ಕ್ಷಣ ಎದುರಾಗಿದ್ದು ಬಿಡಿಎ ಅಧ್ಯಕ್ಷ ಎನ್.ಎ. ಹ್ಯಾರಿಸ್ ಅವರ ಕೊಠಡಿಯಲ್ಲಿ. ಕಾರ್ಯನಿಮಿತ್ತ ಬೀದರ್ ಗೆ ತೆರೆಳಿದ್ದ ಅಧ್ಯಕ್ಷ ಹ್ಯಾರಿಸ್ ವಿಡಿಯೋ ಕಾನ್ಫರೆನ್ಸ್ ಮೂಲಕ ತಮ್ಮ ಅಧಿಕೃತ ಕುರ್ಚಿಯಲ್ಲಿ, ರಾಹುಲ್ ಎಂಬ ದೃಷ್ಟಿಹೀನ ಬಾಲಕನನ್ನು ತಮ್ಮ ಕುರ್ಚಿಯ ಮೇಲೆ ಕೂರಿಸಲು ಅಧಿಕಾರಿಗಳಿಗೆ ಸೂಚಿಸಿದರು. ಸಾಂಕೇತಿಕವಾಗಿ ಆತನನ್ನು “ಒಂದು ದಿನದ ಬಿಡಿಎ ಅಧ್ಯಕ್ಷ”ನನ್ನಾಗಿ ಘೋಷಿಸಿದರು.
ಅಧ್ಯಕ್ಷರ ಆಸನದಲ್ಲಿ ಕುಳಿತ ರಾಹುಲ್ ಮುಖದಲ್ಲಿ ಅರಳಿದ ನಗೆ ಸಭಾಂಗಣದಲ್ಲಿದ್ದ ಪ್ರತಿಯೊಬ್ಬರ ಕಣ್ಣಂಚನ್ನು ತೇವಗೊಳಿಸಿತು. “ಯಾರೂ ಧೃತಿಗೆಡಬೇಡಿ. ಸಮಾಜದಲ್ಲಿ ನೀವೂ ಎಲ್ಲರಂತೆ ಸಮಾನರು. ನಿಮ್ಮ ಬೆನ್ನಿಗೆ ನಾವಿದ್ದೇವೆ, ಸರ್ಕಾರವಿದೆ. ದೃಢ ಸಂಕಲ್ಪದಿಂದ ವಿದ್ಯಾಭ್ಯಾಸ ಮುಂದುವರಿಸಿ ಉನ್ನತ ಸ್ಥಾನಗಳನ್ನು ಅಲಂಕರಿಸಿ” ಎಂದು ಎನ್.ಎ. ಹ್ಯಾರಿಸ್ ವಿಡಿಯೋ ಸಂವಾದದ ಮೂಲಕ ಮಕ್ಕಳಿಗೆ ಕಿವಿಮಾತು ಹೇಳಿದರು.
ಮಕ್ಕಳ ಕನಸುಗಳಿಗೆ ಬಿಡಿಎ ಬೆಂಬಲ:
ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಬಿಡಿಎ ಆಯುಕ್ತರಾದ ಮೇಜರ್ ಮಣಿವಣ್ಣನ್. ಪಿ. ಅವರು ಮಾತನಾಡಿ, “ಈ ಭೇಟಿಯ ಮೂಲ ಉದ್ದೇಶ ಮಕ್ಕಳಲ್ಲಿ ಆತ್ಮಸ್ಥೈರ್ಯ ಮತ್ತು ಕನಸುಗಳನ್ನು ಚಿಗುರಿಸುವುದು. ಇದು ಕೇವಲ ಒಂದು ದಿನದ ಭೇಟಿಗೆ ಸೀಮಿತವಾಗುವುದಿಲ್ಲ. ಮುಂದಿನ ದಿನಗಳಲ್ಲಿ ಈ ಮಕ್ಕಳ ಶಿಕ್ಷಣ ಹಾಗೂ ಉಜ್ವಲ ಭವಿಷ್ಯಕ್ಕೆ ಬಿಡಿಎ ವತಿಯಿಂದ ಸಂಪೂರ್ಣ ಸಹಕಾರ ನೀಡಲಾಗುವುದು” ಎಂದು ಭರವಸೆ ನೀಡಿದರು.
“ನಾವು ಎಂದೂ ಸರ್ಕಾರಿ ಕಚೇರಿ ಹೇಗಿರುತ್ತದೆ ಎಂದು ನೋಡಿರಲಿಲ್ಲ, ಆಡಳಿತದ ಕಲ್ಪನೆಯೂ ಇರಲಿಲ್ಲ. ಆದರೆ ಇಂದು ನಮಗೂ ದೊಡ್ಡ ಅಧಿಕಾರಿಗಳಾಗಿ ಸಮಾಜಕ್ಕೆ ಸೇವೆ ಸಲ್ಲಿಸುವ ವಿಶ್ವಾಸ ಮೂಡಿದೆ” ಎಂದು ಮಕ್ಕಳು ತಮ್ಮ ಸಂತಸ ಹಂಚಿಕೊಂಡರು. ಅಧಿಕಾರಿಗಳು ಮಕ್ಕಳೊಂದಿಗೆ ಬೆರೆತು, ಪ್ರೀತಿ ಮತ್ತು ಸಮಾನತೆಯ ಸಂದೇಶ ಸಾರುವ ಮೂಲಕ ದಿನವನ್ನು ಅರ್ಥಪೂರ್ಣವಾಗಿಸಿದರು. Video News: https://www.instagram.com/reel/DeMtChzsCDl/?stkn=NnpiZGZ4Ynh1Z3dp

















