ಬೆಂಗಳೂರು, ಅ.06 www.bengaluruwire.com: ರಾಜ್ಯದಲ್ಲಿ ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆ (SIR) ಪ್ರಕ್ರಿಯೆ ವಿಚಾರದಲ್ಲಿ ಆಡಳಿತರೂಢ ಕಾಂಗ್ರೆಸ್ ಸರ್ಕಾರ ಹಾಗೂ ಬಿಜೆಪಿ, ಜಿಡಿಎಸ್ ನಡುವಿನ ಮುಸುಕಿನ ಗುದ್ದಾಟ ಮತ್ತೊಂದು ಹಂತ ತಲುಪಿದೆ.
ಕಾಂಗ್ರೆಸ್ ಪಕ್ಷ ಎಸ್ ಐಆರ್ ಪ್ರಕ್ರಿಯೆಯಲ್ಲಿ ಅಕ್ರಮವಾಗಿ ಹಸ್ತಕ್ಷೇಪ ಮಾಡುತ್ತಿದೆ ಹಾಗೂ ಕಾನೂನುಬದ್ಧವಾಗಿ ಆಕ್ಷೇಪಣೆ ಸಲ್ಲಿಸಿದ ಕಾರ್ಯಕರ್ತರ ಮೇಲೆ ಸುಳ್ಳು ಎಫ್‌ಐಆರ್‌ಗಳನ್ನು ದಾಖಲಿಸಿ ಬೆದರಿಸುತ್ತಿದೆ ಎಂದು ಆರೋಪಿಸಿ ಪ್ರತಿಪಕ್ಷಗಳಾದ ಬಿಜೆಪಿ ಮತ್ತು ಜೆಡಿಎಸ್‌ನ ಎನ್‌ಡಿಎ (NDA) ನಿಯೋಗ ಇಂದು ರಾಜಭವನದಲ್ಲಿ ಗೌರವಾನ್ವಿತ ರಾಜ್ಯಪಾಲರನ್ನು ಭೇಟಿ ಮಾಡಿ ಲಿಖಿತ ದೂರು ಸಲ್ಲಿಸಿದೆ.
ಕೇಂದ್ರ ಸಚಿವರಾದ ಹೆಚ್.ಡಿ. ಕುಮಾರಸ್ವಾಮಿ, ಶೋಭಾ ಕರಂದ್ಲಾಜೆ, ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್. ಅಶೋಕ್, ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ, ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಸುರೇಶ್ ಬಾಬು ಹಾಗೂ ಪರಿಷತ್ ಸದಸ್ಯ ಎಸ್.ಎಲ್. ಭೋಜೇಗೌಡ ಅವರನ್ನೊಳಗೊಂಡ ನಿಯೋಗವು ರಾಜ್ಯಪಾಲರಿಗೆ ಮನವಿ ಪತ್ರ ಸಲ್ಲಿಸಿ ತಕ್ಷಣ ಮಧ್ಯಪ್ರವೇಶಿಸುವಂತೆ ಕೋರಿತು. ಈ ಸಂದರ್ಭದಲ್ಲಿ ಎನ್‌ಡಿಎ ಮೈತ್ರಿಕೂಟದ ಸಂಸದರು, ಶಾಸಕರು ಮತ್ತು ಮುಖಂಡರು ಹಾಜರಿದ್ದರು.
ಫಾರ್ಮ್-7 ಕಾನೂನುಬದ್ಧ ಹಕ್ಕು: ನಿಯೋಗದ ವಾದ:

ರಾಜ್ಯಪಾಲರಿಗೆ ಸಲ್ಲಿಸಲಾದ ದೂರಿನಲ್ಲಿ, ಮತದಾರರ ಪಟ್ಟಿ ಪರಿಷ್ಕರಣೆಯು (SIR) ನಿಖರ ಮತ್ತು ಪಾರದರ್ಶಕ ಮತದಾರರ ಪಟ್ಟಿಯನ್ನು ರೂಪಿಸುವ ಸಾಂವಿಧಾನಿಕ ಪ್ರಕ್ರಿಯೆಯಾಗಿದೆ ಎಂದು ಉಲ್ಲೇಖಿಸಲಾಗಿದೆ.
ನಿಯಮ 13(2)ರ ಪ್ರಕಾರ ಮತದಾರರ ಪಟ್ಟಿಯಲ್ಲಿ ಅನರ್ಹರ ಹೆಸರುಗಳನ್ನು ತೆಗೆದುಹಾಕಲು ‘ಫಾರ್ಮ್-7’ ಮೂಲಕ ಆಕ್ಷೇಪಣೆ ಸಲ್ಲಿಸುವುದು ಪ್ರತಿಯೊಬ್ಬ ಮತದಾರನ ಶಾಸನಬದ್ಧ ಹಕ್ಕಾಗಿದೆ. ಚುನಾವಣಾ ಆಯೋಗದ ನಿಯಮಾವಳಿಗಳ ಪ್ರಕಾರ ಬೃಹತ್ ಪ್ರಮಾಣದಲ್ಲಿ (Bulk) ಫಾರ್ಮ್-7 ಸಲ್ಲಿಕೆ ಮಾಡಲು ಮುಕ್ತ ಅವಕಾಶವಿದ್ದು, ಬೂತ್ ಮಟ್ಟದ ಏಜೆಂಟರು (BLA) ಇವುಗಳನ್ನು ಸಲ್ಲಿಸಬಹುದಾಗಿದೆ ಎಂದು ನಿಯೋಗ ಸ್ಪಷ್ಟಪಡಿಸಿದೆ.
ಪೊಲೀಸ್ ದುರ್ಬಳಕೆ ಮತ್ತು 6 ಕಡೆ ಎಫ್‌ಐಆರ್ ಆರೋಪ:
ಆಡಳಿತಾರೂಢ ಕಾಂಗ್ರೆಸ್ ಪಕ್ಷ ಮತ್ತು ಕೆಪಿಸಿಸಿ ಮುಖಂಡರು ಚುನಾವಣಾ ಆಯೋಗದ ಸ್ವತಂತ್ರ ಕಾರ್ಯವೈಖರಿಗೆ ಅಡ್ಡಿಪಡಿಸುತ್ತಿದ್ದಾರೆ ಎಂದು ಎನ್‌ಡಿಎ ಗಂಭೀರ ಆರೋಪ ಮಾಡಿದೆ. ಫಾರ್ಮ್-7 ಸಲ್ಲಿಸಿದ ಬಿಜೆಪಿ ಕಾರ್ಯಕರ್ತರು ಮತ್ತು ಸಾರ್ವಜನಿಕರ ವಿರುದ್ಧ ರಾಜಕೀಯ ದ್ವೇಷದಿಂದ ಸುಳ್ಳು ಕ್ರಿಮಿನಲ್ ಪ್ರಕರಣಗಳನ್ನು ದಾಖಲಿಸಲಾಗುತ್ತಿದೆ.
ಬೀದರ್‌ನ ಭಾಲ್ಕಿ, ಬೆಳಗಾವಿ ಮಾರುಕಟ್ಟೆ ಠಾಣೆ, ಬೆಂಗಳೂರಿನ ವೈಯಾಲಿಕಾವಲ್, ಬಳ್ಳಾರಿ ಹಾಗೂ ಮೈಸೂರಿನ ನರಸಿಂಹರಾಜ ಠಾಣೆಗಳು ಸೇರಿದಂತೆ ರಾಜ್ಯದ 6 ಕಡೆ ಭಾರತೀಯ ನ್ಯಾಯ ಸಂಹಿತೆ (BNS) ಅಡಿಯಲ್ಲಿ ವಂಚನೆ, ಬೆದರಿಕೆ ಮುಂತಾದ ಗಂಭೀರ ಸೆಕ್ಷನ್‌ಗಳನ್ನು ಬಳಸಿ ಎಫ್‌ಐಆರ್ ದಾಖಲಿಸಿರುವುದನ್ನು ನಿಯೋಗವು ರಾಜ್ಯಪಾಲರ ಗಮನಕ್ಕೆ ತಂದಿದೆ.
ಚುನಾವಣಾ ಆಯೋಗದ ಕಚೇರಿ ಮುಂದೆ ಸಿಎಂ ಪ್ರತಿಭಟನೆಗೆ ಆಕ್ಷೇಪ:
ಮುಖ್ಯಮಂತ್ರಿಗಳು ಹಾಗೂ ಸಚಿವರು ಚುನಾವಣಾ ಆಯೋಗದ ಕಚೇರಿ ಆವರಣದಲ್ಲೇ ಪ್ರತಿಭಟನೆ ನಡೆಸಿ, ಅಧಿಕಾರಿಗಳ ಮೇಲೆ ಪ್ರಭಾವ ಬೀರಲು ಯತ್ನಿಸಿದ್ದಾರೆ ಎಂದು ನಿಯೋಗ ಆಕ್ಷೇಪ ವ್ಯಕ್ತಪಡಿಸಿದೆ. ಇದು ಹೈಕೋರ್ಟ್ ಆದೇಶಗಳ ಸ್ಪಷ್ಟ ಉಲ್ಲಂಘನೆಯಾಗಿದ್ದು, ಚುನಾವಣಾ ಆಯೋಗದ ಮೇಲೆ ಒತ್ತಡ ಹೇರಿ ಸುತ್ತೋಲೆ ಹೊರಡಿಸುವಂತೆ ಮಾಡಲಾಗಿದೆ ಎಂದು ದೂರಲಾಗಿದೆ.
ರಾಜ್ಯಪಾಲರಿಗೆ ಎನ್‌ಡಿಎ ನಿಯೋಗದ ಪ್ರಮುಖ ಮನವಿಗಳು:
* ಫಾರ್ಮ್-7 ಸಲ್ಲಿಸುವ ಸಾರ್ವಜನಿಕರು ಮತ್ತು ಕಾರ್ಯಕರ್ತರ ಹಕ್ಕುಗಳನ್ನು ರಕ್ಷಿಸಲು ರಾಜ್ಯ ಸರ್ಕಾರಕ್ಕೆ ಕಟ್ಟುನಿಟ್ಟಿನ ನಿರ್ದೇಶನ ನೀಡಬೇಕು.
* ಬಿಎನ್‌ಎಸ್ ಕಾಯ್ದೆಯಡಿ ರಾಜಕೀಯ ಪ್ರೇರಿತವಾಗಿ ದಾಖಲಿಸಲಾಗಿರುವ ಸುಳ್ಳು ಎಫ್‌ಐಆರ್‌ಗಳು ಮತ್ತು ಕಿರುಕುಳವನ್ನು ಕೂಡಲೇ ತಡೆಯಬೇಕು.
* ಮತದಾರರ ಪಟ್ಟಿ ಪರಿಷ್ಕರಣೆ ಪ್ರಕ್ರಿಯೆಯು ಮುಕ್ತ, ನಿಷ್ಪಕ್ಷಪಾತ ಹಾಗೂ ಪಾರದರ್ಶಕವಾಗಿ ನಡೆಯುವಂತೆ ಸೂಕ್ತ ಕ್ರಮ ವಹಿಸಬೇಕು.

















