ಬೆಂಗಳೂರು, ಆ.10 www.bengaluruwire.com: ರಾಜಧಾನಿ ಬೆಂಗಳೂರಿನಲ್ಲಿ ಖಾಲಿ ನಿವೇಶನ (Site) ಹೊಂದಿರುವ ಮಾಲೀಕರಿಗೆ ‘ಗ್ರೇಟರ್ ಬೆಂಗಳೂರು ಪ್ರಾಧಿಕಾರ’ (GBA) ಕಟ್ಟುನಿಟ್ಟಿನ ಕೊನೆಯ ಎಚ್ಚರಿಕೆ ನೀಡಿದೆ.
ನಿಮ್ಮ ಖಾಲಿ ಜಾಗದಲ್ಲಿ ಕಸ, ಗಿಡ-ಗಂಟಿಗಳು ಬೆಳೆದು ಗಬ್ಬೆದ್ದು ನಾರುತ್ತಿದ್ದರೆ ತಕ್ಷಣವೇ ಅದನ್ನು ಸ್ವಚ್ಛಗೊಳಿಸಿ. ಇಲ್ಲವಾದಲ್ಲಿ, ನೀವೇ ಬೆಚ್ಚಿಬೀಳುವಂತಹ ದಂಡವನ್ನು ಕಟ್ಟಬೇಕಾಗುತ್ತದೆ
ಹೌದು, ನಗರವನ್ನು ಸ್ವಚ್ಛ ಹಾಗೂ ಸುಂದರವಾಗಿಸುವ ನಿಟ್ಟಿನಲ್ಲಿ ಆಗಸ್ಟ್–2026ರ ತಿಂಗಳಲ್ಲಿ “ತ್ಯಾಜ್ಯದಿಂದ ಸ್ವಾತಂತ್ರ್ಯ” ಎಂಬ ವಿಶೇಷ ಅಭಿಯಾನವನ್ನು ಜಿಬಿಎ ಹಮ್ಮಿಕೊಂಡಿದೆ. ಈ ಬಗ್ಗೆ ಮಾಹಿತಿ ನೀಡಿರುವ ಮುಖ್ಯ ಆಯುಕ್ತರಾದ ಮಹೇಶ್ವರ್ ರಾವ್, ಖಾಲಿ ನಿವೇಶನಗಳನ್ನು ಸ್ವಚ್ಛವಾಗಿಟ್ಟುಕೊಳ್ಳುವುದು ಮಾಲೀಕರ ಕಡ್ಡಾಯ ಜವಾಬ್ದಾರಿಯಾಗಿದೆ ಎಂದು ಸ್ಪಷ್ಟಪಡಿಸಿದ್ದಾರೆ.

ಆಗಸ್ಟ್ 15 ಡೆಡ್‌ಲೈನ್:

ನಗರದ ಎಲ್ಲಾ ಖಾಲಿ ನಿವೇಶನಗಳ ಮಾಲೀಕರು ಆಗಸ್ಟ್ 15, 2026ರ ಒಳಗಾಗಿ ತಮ್ಮ ಸೈಟ್‌ಗಳನ್ನು ಕ್ಲೀನ್ ಮಾಡಿಸಿ, ಅಲ್ಲಿರುವ ಕಸ, ಮಣ್ಣು ಹಾಗೂ ಇತರೆ ತ್ಯಾಜ್ಯಗಳನ್ನು ನಗರ ಪಾಲಿಕೆ ಗುರುತಿಸಿರುವ 5 ನಿಗದಿತ ಸ್ಥಳಗಳಲ್ಲಿ ವಿಲೇವಾರಿ ಮಾಡಬೇಕು. ಸ್ವಚ್ಛತೆಗಾಗಿ ಆಯಾ ನಗರ ಪಾಲಿಕೆಗಳು ಅಧಿಸೂಚಿಸಿದ ಸೇವಾದಾರರ ನೆರವನ್ನು ಸಹ ಪಡೆಯಬಹುದು.
ಸ್ವಚ್ಛಗೊಳಿಸದಿದ್ದರೆ ಏನಾಗುತ್ತೆ?:
ಡೆಡ್‌ಲೈನ್ ಮುಗಿದ ಮೇಲೂ ನಿವೇಶನವನ್ನು ಕ್ಲೀನ್ ಮಾಡದಿದ್ದರೆ, ನಗರ ಪಾಲಿಕೆಯ ವತಿಯಿಂದಲೇ ತ್ಯಾಜ್ಯ ಹಾಗೂ ಡೆಬ್ರಿಸ್ (Debris) ಅನ್ನು ತೆರವುಗೊಳಿಸಲಾಗುತ್ತದೆ. ಆದರೆ, ಇದಕ್ಕೆ ತಗಲುವ ಸ್ವಚ್ಛತಾ ವೆಚ್ಚ ಮತ್ತು ಸಾಗಾಣಿಕೆ ವೆಚ್ಚವನ್ನು ಸಂಬಂಧಪಟ್ಟ ಮಾಲೀಕರಿಂದಲೇ ವಸೂಲಿ ಮಾಡಲಾಗುತ್ತದೆ. ಘನತ್ಯಾಜ್ಯ ನಿರ್ವಹಣಾ ಉಪವಿಧಿಗಳು–2020 ಹಾಗೂ ಗ್ರೇಟರ್ ಬೆಂಗಳೂರು ಪ್ರಾಧಿಕಾರ ಅಧಿನಿಯಮ, 2024ರ ಅನ್ವಯ ಈ ದಂಡದ ಮೊತ್ತವನ್ನು ನಿಮ್ಮ ‘ಆಸ್ತಿ ತೆರಿಗೆ’ಯೊಂದಿಗೆ (Property Tax) ಸೇರಿಸಿ ವಸೂಲಿ ಮಾಡಲಾಗುತ್ತದೆ.
ದಂಡದ ಮೊತ್ತದ ಲೆಕ್ಕಾಚಾರ ಇಲ್ಲಿದೆ:
ನಿವೇಶನದ ಅಳತೆಗೆ ಅನುಗುಣವಾಗಿ ದಂಡದ ಮೊತ್ತವನ್ನು ನಿಗದಿಪಡಿಸಲಾಗಿದೆ. (0.45 ಮೀ. ಆಳದ ಸ್ವಚ್ಛತೆಗೆ)
20×30 (600 ಚ.ಅಡಿ) ನಿವೇಶನ:
ತಡೆಗೋಡೆ ಇಲ್ಲದಿದ್ದರೆ: ರೂ. 6,700
ತಡೆಗೋಡೆ ಇದ್ದರೆ: ರೂ. 7,700
ತ್ಯಾಜ್ಯ ಸಾಗಾಣಿಕೆ ವೆಚ್ಚ: ರೂ. 19,200
30×40 (1,200 ಚ.ಅಡಿ) ನಿವೇಶನ:
ತಡೆಗೋಡೆ ಇಲ್ಲದಿದ್ದರೆ: ರೂ. 13,400
ತಡೆಗೋಡೆ ಇದ್ದರೆ: ರೂ. 14,400
ತ್ಯಾಜ್ಯ ಸಾಗಾಣಿಕೆ ವೆಚ್ಚ: ರೂ. 38,400
30×50 (1,500 ಚ.ಅಡಿ) ನಿವೇಶನ:
ತಡೆಗೋಡೆ ಇಲ್ಲದಿದ್ದರೆ: ರೂ. 16,750
ತಡೆಗೋಡೆ ಇದ್ದರೆ: ರೂ. 17,750
ತ್ಯಾಜ್ಯ ಸಾಗಾಣಿಕೆ ವೆಚ್ಚ: ರೂ. 48,000
40×60 (2,400 ಚ.ಅಡಿ) ನಿವೇಶನ:
ತಡೆಗೋಡೆ ಇಲ್ಲದಿದ್ದರೆ: ರೂ. 26,800
ತಡೆಗೋಡೆ ಇದ್ದರೆ: ರೂ. 27,800
ತ್ಯಾಜ್ಯ ಸಾಗಾಣಿಕೆ ವೆಚ್ಚ: ರೂ. 76,800
50×80 (4,000 ಚ.ಅಡಿ) ನಿವೇಶನ:
ತಡೆಗೋಡೆ ಇಲ್ಲದಿದ್ದರೆ: ರೂ. 46,700
ತಡೆಗೋಡೆ ಇದ್ದರೆ: ರೂ. 47,700
ತ್ಯಾಜ್ಯ ಸಾಗಾಣಿಕೆ ವೆಚ್ಚ: ರೂ. 1,28,000
ಇದಕ್ಕಿಂತ ದೊಡ್ಡ ಅಳತೆಯ ನಿವೇಶನಗಳಿಗೆ ವಿಸ್ತೀರ್ಣಕ್ಕೆ ತಕ್ಕಂತೆ ಆಸ್ತಿ ತೆರಿಗೆಯೊಂದಿಗೆ ವೆಚ್ಚವನ್ನು ವಿಧಿಸಲಾಗುತ್ತದೆ. ಸಾರ್ವಜನಿಕ ಆರೋಗ್ಯದ ಹಿತದೃಷ್ಟಿಯಿಂದ ಮಾಲೀಕರು ಸಹಕರಿಸುವಂತೆ ಜಿಬಿಎ ಮನವಿ ಮಾಡಿದೆ.






















