ಬೆಂಗಳೂರು/ಬೆಳಗಾವಿ, ಏ.07 www.bengaluruwire.com: ಸಾಮಾನ್ಯವಾಗಿ ಮಗು ಜನಿಸಿದಾಗ ಮನೆಯಲ್ಲಿ ಸಂಭ್ರಮವಿರುತ್ತದೆ. ಆದರೆ, ಬೆಳಗಾವಿ ಜಿಲ್ಲೆಯ ಸವದತ್ತಿ ತಾಲ್ಲೂಕಿನ ಹೂಲಿ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಹೆಣ್ಣು ಮಗು ಜನಿಸಿದರೆ ಆ ಸಂಭ್ರಮ ಪಂಚಾಯತಿ ಮಟ್ಟದಲ್ಲೂ ಮೊಳಗುತ್ತೆ.
ಹೆಣ್ಣು ಮಕ್ಕಳ ಭವಿಷ್ಯಕ್ಕೆ ಭದ್ರ ಬುನಾದಿ ಹಾಕಲು ಈ ಪಂಚಾಯತಿ ಜಾರಿಗೆ ತಂದಿರುವ “ಕುಮಾರಿ ಸಮೃದ್ಧಿ” ಯೋಜನೆ ಈಗ ಇಡೀ ರಾಜ್ಯದ ಗಮನ ಸೆಳೆದಿದೆ.
ಏನಿದು ಯೋಜನೆ?:
ಗ್ರಾಮದಲ್ಲಿ ಜನಿಸುವ ಪ್ರತಿ ಹೆಣ್ಣು ಮಗುವಿನ ಹೆಸರಿನಲ್ಲಿ ಹೂಲಿ ಗ್ರಾಮ ಪಂಚಾಯತಿಯು ತನ್ನ ಸ್ವಂತ ಸಂಪನ್ಮೂಲದಿಂದ ₹5,500 ಮೊತ್ತವನ್ನು ಬ್ಯಾಂಕ್‌ನಲ್ಲಿ ಠೇವಣಿ ಇಡಲಿದೆ. ಹೆಣ್ಣು ಮಕ್ಕಳ ಶಿಕ್ಷಣ ಮತ್ತು ಆರ್ಥಿಕ ಸ್ವಾವಲಂಬನೆಗೆ ನೆರವಾಗುವುದು ಈ ಯೋಜನೆಯ ಮುಖ್ಯ ಉದ್ದೇಶ.

ಸಚಿವ ಪ್ರಿಯಾಂಕ್ ಖರ್ಗೆ ಶ್ಲಾಘನೆ:
ಗ್ರಾಮ ಪಂಚಾಯತಿಯ ಈ ಐತಿಹಾಸಿಕ ನಡೆಯನ್ನು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಪ್ರಿಯಾಂಕ್ ಖರ್ಗೆ ಮುಕ್ತಕಂಠದಿಂದ ಶ್ಲಾಘಿಸಿದ್ದಾರೆ. “ಪಂಚಾಯತಿಗಳು ಕೇವಲ ಮೂಲಸೌಕರ್ಯಕ್ಕೆ ಸೀಮಿತವಾಗದೆ, ಸಮಾಜದಲ್ಲಿ ಹೆಣ್ಣು ಮಕ್ಕಳ ಬಗ್ಗೆ ಇರುವ ಪೂರ್ವಗ್ರಹಗಳನ್ನು ತೊಡೆದುಹಾಕಲು ಇಂತಹ ವಿಶಿಷ್ಟ ಕಾರ್ಯಕ್ರಮ ಹಮ್ಮಿಕೊಳ್ಳುತ್ತಿರುವುದು ಹೆಮ್ಮೆಯ ವಿಷಯ. ಹೂಲಿ ಪಂಚಾಯತಿಯ ಈ ನಿರ್ಧಾರ ರಾಜ್ಯದ ಉಳಿದ ಪಂಚಾಯತಿಗಳಿಗೆ ಸ್ಫೂರ್ತಿಯಾಗಲಿ” ಎಂದು ಸಚಿವರು ಆಶಿಸಿದ್ದಾರೆ.
ಬದಲಾಗಲಿದೆ ಪೋಷಕರ ಮನೋಭಾವ:
ಹೆಣ್ಣು ಮಗು ಹುಟ್ಟಿದಾಗ ಆರ್ಥಿಕ ಹೊರೆಯಾಗಬಾರದು ಮತ್ತು ಅವರ ಭವಿಷ್ಯದ ಬಗ್ಗೆ ಪೋಷಕರಲ್ಲಿ ಆತ್ಮಸ್ಥೈರ್ಯ ತುಂಬಲು ಈ ಯೋಜನೆ ಸಹಕಾರಿಯಾಗಲಿದೆ. ಪಂಚಾಯತಿಗಳೇ ಸ್ವಯಂ ಸರ್ಕಾರಗಳಾಗಿ ಇಂತಹ ಸಾಮಾಜಿಕ ಕಳಕಳಿಯ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಿರುವುದು ಕರ್ನಾಟಕದ ಪಂಚಾಯತ್ ರಾಜ್ ಇತಿಹಾಸದಲ್ಲಿ ಹೊಸ ಮೈಲಿಗಲ್ಲು ಎನ್ನಲಾಗಿದೆ.






















