ಉಡುಪಿ, ಏ.08 www.bengaluruwire.com : “ಆಯಸ್ಸು ಗಟ್ಟಿಯಾಗಿದ್ದರೆ ಸಾವು ಕೂಡ ಹತ್ತಿರ ಸುಳಿಯಲಾರದು” ಎಂಬ ಮಾತಿಗೆ ಉಡುಪಿಯಲ್ಲಿ ನಡೆದ ಈ ಘಟನೆ ಜೀವಂತ ಸಾಕ್ಷಿಯಾಗಿದೆ. ಬರೋಬ್ಬರಿ ಮೂರು ದಿನಗಳ ಕಾಲ 20 ಅಡಿ ಆಳದ ಬಾವಿಯಲ್ಲಿ ಬಿದ್ದು, ಸಾವು-ಬದುಕಿನ ನಡುವೆ ಹೋರಾಡುತ್ತಿದ್ದ ವೃದ್ಧರೊಬ್ಬರು ಕೇವಲ ಒಂದು ಗ್ಯಾಸ್ ಸಿಲಿಂಡರ್‌ನ ‘ಓಟಿಪಿ’ (OTP) ಇಂದಾಗಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಉಡುಪಿಯ ಕಂಬಳಕಟ್ಟೆ ನಿವಾಸಿ 62 ವರ್ಷದ ಶ್ರೀನಿವಾಸ ಆಚಾರ್ಯ ಅವರು ಮನೆಯಲ್ಲಿ ಒಬ್ಬರೇ ವಾಸವಿದ್ದರು. ಮೂರು ದಿನಗಳ ಹಿಂದೆ ಬಾವಿಯಿಂದ ನೀರು ಸೇದಲೆಂದು ಹೋದಾಗ, ಆಕಸ್ಮಿಕವಾಗಿ ಹಗ್ಗ ತುಂಡಾಗಿ 20 ಅಡಿ ಆಳದ ಬಾವಿಗೆ ಬಿದ್ದಿದ್ದರು.
ಬಾವಿಯಲ್ಲಿ ನೀರಿದ್ದ ಕಾರಣ ಅವರಿಗೆ ಪೆಟ್ಟಾಗದಿದ್ದರೂ, ಮೇಲೆ ಬರಲು ಸಾಧ್ಯವಾಗಲಿಲ್ಲ. ಒಂಟಿಯಾಗಿ ವಾಸವಿದ್ದ ಕಾರಣ ಅವರು ಬಾವಿಗೆ ಬಿದ್ದ ವಿಷಯ ಯಾರಿಗೂ ತಿಳಿಯಲಿಲ್ಲ. ಅಸಹಾಯಕ ಸ್ಥಿತಿಯಲ್ಲಿದ್ದ ಆಚಾರ್ಯರು ಬಾವಿಯೊಳಗಿದ್ದ ಫುಟ್ ಬಾಲ್ ಪೈಪ್ ಮತ್ತು ಹಗ್ಗವನ್ನೇ ಆಸರೆಯಾಗಿ ಹಿಡಿದುಕೊಂಡು ಮೂರು ದಿನಗಳನ್ನು ಕಳೆದಿದ್ದರು.
ತಿರುವು ನೀಡಿದ ಗ್ಯಾಸ್ ಸಿಲಿಂಡರ್ ಬುಕಿಂಗ್:

ಶ್ರೀನಿವಾಸ ಆಚಾರ್ಯರು ಈ ಹಿಂದೆ ಗ್ಯಾಸ್ ಬುಕ್ ಮಾಡಿದ್ದರು. ಆದರೆ ವಿಳಂಬವಾಗಿದ್ದರಿಂದ ತಮ್ಮ ಪರಿಚಯಸ್ಥರಾದ ಗಣೇಶ್ ಎಂಬವರಿಂದ ಹೆಚ್ಚುವರಿ ಸಿಲಿಂಡರ್ ಪಡೆದಿದ್ದರು. ಇತ್ತ ಗಣೇಶ್ ಅವರು ತಮ್ಮ ಸಿಲಿಂಡರ್ ವಾಪಸ್ ಪಡೆಯಲು ಅಥವಾ ಆಚಾರ್ಯರಿಗೆ ಸಿಲಿಂಡರ್ ತಲುಪಿಸಲು ಗ್ಯಾಸ್ ಏಜೆನ್ಸಿಗೆ ಫೋನ್ ಮಾಡಿದ್ದರು. ಗ್ಯಾಸ್ ವಿತರಣಾ ಸಿಬ್ಬಂದಿ ಮನೆಗೆ ಬಂದಾಗ ಬಾಗಿಲು ಹಾಕಿದ್ದರಿಂದ ಅವರು ವಾಪಸ್ ಹೋಗಿದ್ದರು.
ಓಟಿಪಿಗಾಗಿ ಹುಡುಕಾಟ, ಬಾವಿಯಲ್ಲಿ ಪತ್ತೆ:
ಸಿಲಿಂಡರ್ ವಿತರಣೆ ಪೂರ್ಣಗೊಳ್ಳಲು ಮೊಬೈಲ್‌ಗೆ ಬರುವ ಓಟಿಪಿ ಅತ್ಯಗತ್ಯವಾಗಿತ್ತು. ಗಣೇಶ್ ಅವರು ಆಚಾರ್ಯರ ಮನೆಗೆ ಹೋದಾಗ ಅವರು ಇರಲಿಲ್ಲ. ಫೋನ್ ಕೂಡ ಸ್ವೀಕರಿಸುತ್ತಿರಲಿಲ್ಲ. ಓಟಿಪಿ ಇಲ್ಲದೆ ಸಿಲಿಂಡರ್ ಪಡೆಯಲು ಸಾಧ್ಯವಿಲ್ಲದ ಕಾರಣ ಮತ್ತು ಆಚಾರ್ಯರು ಎಲ್ಲಿ ಹೋದರೆಂದು ತಿಳಿಯದ ಕಾರಣ ಗಣೇಶ್ ಅವರಿಗೆ ಅನುಮಾನ ಮೂಡಿದೆ. ಕೂಡಲೇ ಸುತ್ತಮುತ್ತ ಹುಡುಕಾಟ ನಡೆಸಿದ ಅವರು, ಕೊನೆಗೆ ಬಾವಿಯೊಳಗೆ ಇಣುಕಿ ನೋಡಿದಾಗ ಆಚಾರ್ಯರು ಅಲ್ಲಿರುವುದು ಬೆಳಕಿಗೆ ಬಂದಿದೆ.
ಅಗ್ನಿಶಾಮಕ ದಳದ ಕಾರ್ಯಾಚರಣೆ:
ಕೂಡಲೇ ಸ್ಥಳೀಯರು ಅಗ್ನಿಶಾಮಕ ದಳಕ್ಕೆ ಮಾಹಿತಿ ನೀಡಿದರು. ಮೂರು ದಿನಗಳಿಂದ ಆಹಾರವಿಲ್ಲದೆ ನಿತ್ರಾಣಗೊಂಡಿದ್ದ ಆಚಾರ್ಯರಿಗೆ ಹಗ್ಗ ಹಿಡಿದು ಮೇಲೆ ಬರಲು ಶಕ್ತಿ ಇರಲಿಲ್ಲ. ಅಗ್ನಿಶಾಮಕ ಸಿಬ್ಬಂದಿ ಬಾವಿಯೊಳಗೆ ಇಳಿದು ಅವರನ್ನು ಸುರಕ್ಷಿತವಾಗಿ ಮೇಲೆಕ್ಕೆ ತಂದಿದ್ದಾರೆ. ಸದ್ಯ ಅವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ. ತಂತ್ರಜ್ಞಾನದ ಓಟಿಪಿ ಇಂದು ವ್ಯಕ್ತಿಯೊಬ್ಬರ ಜೀವ ಉಳಿಸುವಲ್ಲಿ ಪ್ರಮುಖ ಪಾತ್ರ ವಹಿಸಿರುವುದು ಎಲ್ಲರ ಆಶ್ಚರ್ಯಕ್ಕೆ ಕಾರಣವಾಗಿದೆ.























