ಬೆಂಗಳೂರು, ಏ.08 www.bengaluruwire.com: ಸಿಲಿಕಾನ್ ಸಿಟಿಯ ಪ್ರಮುಖ ಸಂಪರ್ಕ ಕೊಂಡಿಯಾದ ಬನ್ನೇರುಘಟ್ಟ ಮುಖ್ಯರಸ್ತೆಯ ವಾಹನ ಸವಾರರ ದಶಕಗಳ ಸಂಕಟಕ್ಕೆ ಕೊನೆಗೂ ಮುಕ್ತಿ ಸಿಗುವ ಲಕ್ಷಣಗಳು ಕಾಣಿಸುತ್ತಿವೆ.
ಹೊಸೂರು ರಸ್ತೆಯಿಂದ ಕಾಳೇನ ಅಗ್ರಹಾರದವರೆಗಿನ ಬನ್ನೇರುಘಟ್ಟ ರಸ್ತೆಯನ್ನು ‘ಬಿ-ಸ್ಮೈಲ್’ (BSMILE) ಯೋಜನೆಯಡಿ ಸಮಗ್ರವಾಗಿ ಅಭಿವೃದ್ಧಿಪಡಿಸಲು ಬೆಂಗಳೂರು ದಕ್ಷಿಣ ನಗರ ಪಾಲಿಕೆ ಸಜ್ಜಾಗಿದೆ.
ತುರ್ತು ಡಾಂಬರೀಕರಣಕ್ಕೆ ಆಯುಕ್ತರ ಸೂಚನೆ:
ಬೆಂಗಳೂರು ದಕ್ಷಿಣ ನಗರ ಪಾಲಿಕೆ ಆಯುಕ್ತ ಕೆ.ಎನ್. ರಮೇಶ್ ಅವರು ಇಂದು ಸ್ಥಳೀಯ ಅಧಿಕಾರಿಗಳೊಂದಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಬಿಎಂಆರ್‌ಸಿಎಲ್ (BMRCL) ಸಂಸ್ಥೆಯು ಡೈರಿ ಸರ್ಕಲ್‌ನಿಂದ ಕಾಳೇನ ಅಗ್ರಹಾರದವರೆಗಿನ ರಸ್ತೆಯನ್ನು ಪಾಲಿಕೆಗೆ ಹಸ್ತಾಂತರಿಸಿದ್ದು, ಇದಕ್ಕಾಗಿ 12.50 ಕೋಟಿ ರೂಪಾಯಿಗಳನ್ನು ನೀಡಿದೆ. ಸಮಗ್ರ ಅಭಿವೃದ್ಧಿ ಕಾಮಗಾರಿ ಟೆಂಡರ್ ಪ್ರಕ್ರಿಯೆ ಮುಗಿಯುವವರೆಗೆ ಕಾಯದೆ, ಸಾರ್ವಜನಿಕರ ಹಿತದೃಷ್ಟಿಯಿಂದ ಕೂಡಲೇ ಹಾಳಾದ ರಸ್ತೆಗಳಿಗೆ ‘ಓವರ್‌ಲೇ’ (ಮೇಲ್ಪದರ) ಡಾಂಬರೀಕರಣ ಮಾಡುವಂತೆ ಆಯುಕ್ತರು ಕಟ್ಟುನಿಟ್ಟಿನ ಆದೇಶ ನೀಡಿದ್ದಾರೆ.

ಡೈರಿ ಸರ್ಕಲ್ ನಿಂದ ಕಾಳೇನ ಅಗ್ರಹಾರದವರೆಗೂ ಬಿಡ್ಲ್ಯುಎಸ್ ಎಸ್ ಬಿ (BWSSB) ಹಾಗೂ ಬಿಎಂಆರ್‌ಸಿಎಲ್ ಕಾಮಗಾರಿಗಳಿಂದ ಬನ್ನೇರುಘಟ್ಟ ರಸ್ತೆ ಹಾಳಾಗಿದ್ದು, ಕಾಮಗಾರಿ ಪೂರ್ಣಗೊಂಡಿರುವ ಕಡೆಗಳಲ್ಲಿ ರಸ್ತೆ ಪುನಶ್ಚೇತನಗೊಳಿಸದೆ ಇರುವುದರಿಂದ ಧೂಳು ಹೆಚ್ಚಿನ ಮಟ್ಟದಲ್ಲಿ ಹರಡುತ್ತಿರುವುದನ್ನು ಮನಗಂಡ ಆಯುಕ್ತರು ತುರ್ತಾಗಿ ಬಿಡ್ಲ್ಯುಎಸ್ ಎಸ್ ಬಿ ಇಲಾಖೆಯ ಅಧಿಕಾರಿಗಳನ್ನು ಸಂಪರ್ಕಿಸಿ ರಸ್ತೆ ಸರಿಪಡಿಸಿ ಡಾಂಬರೀಕರಣ ಮಾಡುವಂತೆ ಪಾಲಿಕೆಯ ಅಧಿಕಾರಿಗಳಿಗೆ ಸೂಚಿಸಿದರು.
ವೇಗಾ ಸಿಟಿ ಜಂಕ್ಷನ್ ಇನ್ನು ಸಿಗ್ನಲ್ ಮುಕ್ತ:
ಸದಾ ಟ್ರಾಫಿಕ್ ಜಾಮ್‌ನಿಂದ ಕೂಡಿರುವ ವೇಗಾ ಸಿಟಿ ಮಾಲ್ ಜಂಕ್ಷನ್ ಅನ್ನು ಸಿಗ್ನಲ್ ಮುಕ್ತಗೊಳಿಸಲು ಪಾಲಿಕೆ ಯೋಜನೆ ರೂಪಿಸಿದೆ. ಇಲ್ಲಿ ಅಂಡರ್‌ಪಾಸ್ ಅಥವಾ ಫ್ಲೈ ಓವರ್ ನಿರ್ಮಾಣ ಮಾಡುವ ಕುರಿತು ಡಿಪಿಆರ್ (DPR) ಸಿದ್ಧಪಡಿಸಲು ಸೂಚಿಸಲಾಗಿದೆ. ಇದರೊಂದಿಗೆ ಐಐಎಂಬಿ ಮುಂಭಾಗದ ರಾಜಕಾಲುವೆ ಹೂಳು ತೆರವು ಹಾಗೂ ಅಪೋಲೋ ಆಸ್ಪತ್ರೆ ಬಳಿಯ ಖಾಲಿ ಜಾಗದಲ್ಲಿ ವಾಣಿಜ್ಯ ಸಂಕೀರ್ಣ ಮತ್ತು ಪಾರ್ಕಿಂಗ್ ವ್ಯವಸ್ಥೆ ಕಲ್ಪಿಸುವ ಮೂಲಕ ಪಾಲಿಕೆಯ ಆದಾಯ ಹೆಚ್ಚಿಸಲು ಕ್ರಮ ಕೈಗೊಳ್ಳಲಾಗುತ್ತಿದೆ.
ಅನಧಿಕೃತ ಜಾಹೀರಾತುಗಳ ವಿರುದ್ಧ ‘ಪೂರ್ವ’ ಪಾಲಿಕೆ ಸಮರ:

ಇನ್ನೊಂದೆಡೆ, ಬೆಂಗಳೂರು ಪೂರ್ವ ನಗರ ಪಾಲಿಕೆ ವ್ಯಾಪ್ತಿಯಲ್ಲಿ ನಗರದ ಸೌಂದರ್ಯ ಹಾಳುಗೆಡವುತ್ತಿರುವ ಅನಧಿಕೃತ ಫ್ಲೆಕ್ಸ್ ಮತ್ತು ಬ್ಯಾನರ್‌ಗಳ ವಿರುದ್ಧ ಆಯುಕ್ತ ಡಿ.ಎಸ್. ರಮೇಶ್ ಸಮರ ಸಾರಿದ್ದಾರೆ. ಏಪ್ರಿಲ್ 5 ರಿಂದ 13 ರವರೆಗೆ ವಿಶೇಷ ಅಭಿಯಾನ ಹಮ್ಮಿಕೊಳ್ಳಲಾಗಿದ್ದು, ಕೆ.ಆರ್. ಪುರಂ ಮತ್ತು ಮಹದೇವಪುರ ವಲಯಗಳಲ್ಲಿ ಈಗಾಗಲೇ 1872ಕ್ಕೂ ಹೆಚ್ಚು ಅನಧಿಕೃತ ಫಲಕಗಳನ್ನು ತೆರವುಗೊಳಿಸಲಾಗಿದೆ. ನಿಯಮ ಉಲ್ಲಂಘಿಸುವವರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸುವುದಾಗಿ ಅಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ.























