ವಿಜಯಪುರ, ಆ.04 www.bengaluruwire.com : ವಿಜಯಪುರ ಜಿಲ್ಲೆಯ ತಿಕೋಟ ತಾಲೂಕಿನ ಹೊನವಾಡ ಗ್ರಾಮಪಂಚಾಯತಿ ಬಳಿ ಇಂದು ಬೆಳಗ್ಗೆ ಲಘು ಭೂಕಂಪನ ಸಂಭವಿಸಿದೆ. ರಿಕ್ಟರ್ ಮಾಪಕದಲ್ಲಿ 2.6 ತೀವ್ರತೆ ದಾಖಲಾಗಿದ್ದು, ಯಾವುದೇ ಪ್ರಾಣಹಾನಿ ಅಥವಾ ಆಸ್ತಿಪಾಸ್ತಿ ಹಾನಿ ಸಂಭವಿಸಿಲ್ಲ ಎಂದು ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಮೇಲ್ವಿಚಾರಣಾ ಕೇಂದ್ರ (KSNDMC) ಸ್ಪಷ್ಟಪಡಿಸಿದೆ.
ಸೋಮವಾರ ಬೆಳಗ್ಗೆ 11:41ಕ್ಕೆ ಭೂಕಂಪನದ ಅನುಭವವಾಗಿದ್ದು, ಭೂಕಂಪನದ ಕೇಂದ್ರಬಿಂದು (epicenter) ಹೊನವಾಡ ಗ್ರಾಮಪಂಚಾಯತಿಯ ಪೂರ್ವ ದಿಕ್ಕಿಗೆ 2.9 ಕಿಲೋಮೀಟರ್ ದೂರದಲ್ಲಿತ್ತು. ಭೂಮಿಯ ಆಳ 10 ಕಿಲೋಮೀಟರ್ ಇತ್ತು ಎಂದು ವರದಿ ತಿಳಿಸಿದೆ.
ಭೂಕಂಪನದ ತೀವ್ರತೆ ಅತ್ಯಂತ ಕಡಿಮೆ ಇದ್ದು, ಕೇಂದ್ರಬಿಂದುವಿನಿಂದ 20-30 ಕಿಲೋಮೀಟರ್ ದೂರದವರೆಗೆ ಸ್ವಲ್ಪ ಕಂಪನದ ಅನುಭವವಾಗಿದೆ. ಈ ಪ್ರದೇಶವು ಸೀಸ್ಮಿಕ್ ವಲಯ-3ರ ವ್ಯಾಪ್ತಿಗೆ ಬರುತ್ತಿದ್ದು, ಇಲ್ಲಿ ಇಂತಹ ಸಣ್ಣ ಪ್ರಮಾಣದ ಭೂಕಂಪನಗಳು ಸಾಮಾನ್ಯ. ಸಾರ್ವಜನಿಕರು ಆತಂಕ ಪಡುವ ಅಗತ್ಯವಿಲ್ಲ ಎಂದು ಕೆಎಸ್ಎನ್ ಡಿಎಂಸಿ ತಿಳಿಸಿದೆ.
ಇದಕ್ಕೂ ಮೊದಲು ವಿಜಯಪುರ ಜಿಲ್ಲೆಯ ಬಸವನ ಬಾಗೇವಾಡಿ ತಾಲೂಕಿನ ಮಂಗೋಲಿ ಗ್ರಾಮಪಂಚಾಯತಿಯ ಬಳಿಯೂ 2.9 ಕಿಲೋಮೀಟರ್ ಈಶಾನ್ಯದಲ್ಲಿ ಭೂಕಂಪನದ ಅನುಭವವಾಗಿತ್ತು.






















