ಮಂತ್ರಾಲಯ, ಆ.01 www.bengaluruwire.com : ಕಲಿಯುಗ ಕಲ್ಪವೃಕ್ಷ ಕಾಮಧೇನು ಶ್ರೀ ರಾಘವೇಂದ್ರ ಸ್ವಾಮಿಗಳ 354ನೇ ಆರಾಧನಾ ಮಹೋತ್ಸವವು ಇದೇ ಆಗಸ್ಟ್ 8ರಿಂದ 14ರವರೆಗೆ ಮಂತ್ರಾಲಯದ ಶ್ರೀಕ್ಷೇತ್ರದಲ್ಲಿ ಅದ್ಧೂರಿಯಾಗಿ ನಡೆಯಲಿದೆ. ಮಠದ ಪೀಠಾಧಿಪತಿಗಳಾದ ಶ್ರೀ ಸುಬುಧೇಂದ್ರ ತೀರ್ಥ ಸ್ವಾಮೀಜಿಗಳ ದಿವ್ಯ ಸಾನಿಧ್ಯದಲ್ಲಿ ಈ ಭವ್ಯ ಕಾರ್ಯಕ್ರಮಗಳು ಜರುಗಲಿವೆ.
ಒಂದು ವಾರಗಳ ಕಾಲ ನಡೆಯಲಿರುವ ಈ ಮಹೋತ್ಸವದಲ್ಲಿ ನಿತ್ಯ ಬೆಳಿಗ್ಗೆ ಧಾರ್ಮಿಕ ಕಾರ್ಯಕ್ರಮಗಳು ಮತ್ತು ಸಂಜೆ ಸಾಂಸ್ಕೃತಿಕ ಕಾರ್ಯಕ್ರಮಗಳು ಆಯೋಜನೆಗೊಂಡಿವೆ. ಆಗಸ್ಟ್ 8ರಂದು ಸಂಜೆ 6 ಗಂಟೆಗೆ ಧ್ವಜಾರೋಹಣದೊಂದಿಗೆ ಉತ್ಸವಕ್ಕೆ ಅಧಿಕೃತ ಚಾಲನೆ ದೊರೆಯಲಿದೆ.
ಆಗಸ್ಟ್ 9ರಂದು ಬೆಳಿಗ್ಗೆ 8.15ಕ್ಕೆ ಶ್ರೀನಿವಾಸ ದೇವರ ವಸ್ತ್ರ ಸಮರ್ಪಣೆ ನಡೆಯಲಿದೆ. ಇದಾದ ಬಳಿಕ ರಾತ್ರಿ 8 ಗಂಟೆಗೆ ಶಾಖೋತ್ಸವ ಮತ್ತು ರಜತ ಮಂಟಪೋತ್ಸವ ಜರುಗಲಿದೆ.
ಆರಾಧನಾ ಮಹೋತ್ಸವದ ಪ್ರಮುಖ ದಿನಗಳಾದ ಆಗಸ್ಟ್ 10ರಂದು ಪೂರ್ವಾ ಆರಾಧನೆ, ಆಗಸ್ಟ್ 11ರಂದು ಮಧ್ಯಾರಾಧನೆ ಹಾಗೂ ಆಗಸ್ಟ್ 12ರಂದು ಉತ್ತರ ಆರಾಧನೆ ನಡೆಯಲಿವೆ. ಉತ್ತರ ಆರಾಧನೆಯ ದಿನದಂದು, ಶ್ರೀ ಮೂಲ ಬೃಂದಾವನಕ್ಕೆ ವಜ್ರಕವಚ ಸಮರ್ಪಣೆ ಮತ್ತು ಬೆಳಿಗ್ಗೆ 10 ಗಂಟೆಗೆ ಮಹಾರಥೋತ್ಸವವು ವೈಭವದಿಂದ ನಡೆಯಲಿದೆ.

ಆಗಸ್ಟ್ 13ರಂದು ಅಶ್ವ ವಾಹನೋತ್ಸವ ಹಾಗೂ ಶ್ರೀ ಸುಗುಣೇಂದ್ರ ತೀರ್ಥರ ಆರಾಧನೆ ನಡೆಯಲಿದ್ದು, ಉತ್ಸವದ ಕೊನೆಯ ದಿನವಾದ ಆಗಸ್ಟ್ 14ರಂದು ರಾತ್ರಿ 8 ಗಂಟೆಗೆ ಸಮಾರೋಪ ಸಮಾರಂಭದೊಂದಿಗೆ ಆರಾಧನಾ ಮಹೋತ್ಸವ ಸಂಪನ್ನಗೊಳ್ಳಲಿದೆ ಎಂದು ಮಂತ್ರಾಲಯ ಮಠದ ಪ್ರಕಟಣೆಯಲ್ಲಿ ತಿಳಿಸಲಾಗಿದೆ.





















