ಬೆಂಗಳೂರು, ನ.11 www.bengaluruwire.com : ರಾಜ್ಯದಲ್ಲಿ ಪೊಲೀಸ್ ಸಬ್ ಇನ್ಸ್ ಪೆಕ್ಟರ್ (PSI) ನೇಮಕಾತಿ ಅಕ್ರಮ ಪ್ರಕರಣದ ಆರೋಪ ಎದುರಿಸುತ್ತಿರುವ ಐಪಿಎಲ್ ಅಧಿಕಾರಿ ಅಮೃತ್ ಪಾಲ್ ಸೇರಿದಂತೆ ಹಲವು ಸರ್ಕಾರಿ ಅಧಿಕಾರಿಗಳು ಮತ್ತು ಖಾಸಗಿ ವ್ಯಕ್ತಿಗಳಿಗೆ ಸೇರಿದ ಬೆಂಗಳೂರು ಹಾಗೂ ಪಾಟಿಯಾಲದಲ್ಲಿರುವ 11 ಸ್ಥಳಗಳಲ್ಲಿ ಜಾರಿ ನಿರ್ದೇಶನಾಲಯ (ED)ದ ಅಧಿಕಾರಿಗಳು ನ.10ರಂದು ವ್ಯಾಪಕ ಶೋಧ ಕಾರ್ಯ ನಡೆಸಿದ್ದಾರೆ. ಈ ಸಂದರ್ಭದಲ್ಲಿ ಪ್ರಕರಣಕ್ಕೆ ಸಂಬಂಧಿಸಿದಂತೆ ಮಹತ್ವದ ದಾಖಲೆಗಳು ಹಾಗೂ ಎಲೆಕ್ಟ್ರಾನಿಕ್ ಗ್ಯಾಜೆಟ್ ಗಳನ್ನು ವಶಪಡಿಸಿಕೊಂಡಿದ್ದಾರೆ.
ಪಿಎಸ್ ಐ 545 ಹುದ್ದೆಯ ನೇಮಕಾತಿ ಸಂಬಂಧ ಕರ್ನಾಟಕ ಪೊಲೀಸ್ ಇಲಾಖೆಯು 2021ರ ಇಸವಿಯಲ್ಲಿ ಪರೀಕ್ಷೆಯನ್ನು ನಡೆಸಿತ್ತು. ಆದರೆ ಪಿಎಸ್ಐ ನೇಮಕಾತಿ ಪರೀಕ್ಷೆಯ ಫಲಿತಾಂಶಗಳು ಪ್ರಕಟಗೊಂಡ ನಂತರ ಈ ಪರೀಕ್ಷೆಯಲ್ಲಿ ವಂಚನೆ, ಭ್ರಷ್ಟಾಚಾರ ನಡೆದಿರುವ ಬಗ್ಗೆ ಸಾಕಷ್ಟು ದೂರುಗಳು ಕೇಳಿಬಂದಿದ್ದವು. ಅಲ್ಲದೆ ಇದಕ್ಕೆ ಇಂಬು ನೀಡುವಂತೆ ಸಾಕಷ್ಟು ಸಾಕ್ಷ್ಯಗಳು ಲಭ್ಯವಾದ ಹಿನ್ನಲೆಯಲ್ಲಿ ರಾಜ್ಯ ಸರ್ಕಾರವೂ ಈ ಪ್ರಕರಣದ ಕುರಿತಂತೆ ತನಿಖೆ ನಡೆಸಲು ಆದೇಶಿಸಿತ್ತು.

ತನಿಖೆ ಕೈಗೊಂಡ ಪೊಲೀಸರು ಅಕ್ರಮದಲ್ಲಿ ಭಾಗಿಯಾದ ಅಭ್ಯರ್ಥಿಗಳು, ಮಧ್ಯವರ್ತಿಗಳು ಮತ್ತು ಪೊಲೀಸ್ ಅಧಿಕಾರಿಗಳ ವಿರುದ್ಧ ಎಫ್ ಐಆರ್ ಗಳನ್ನು ದಾಖಲಿಸಿದೆ. ಬೆಂಗಳೂರು ಮತ್ತು ಕಲಬುರುಗಿಯಲ್ಲಿ ನಡೆದಿದ್ದ ಪಿಎಸ್ ಐ ನೇಮಕಾತಿ ಅಕ್ರಮದ ಪ್ರಕರಣವನ್ನು ನಂತರ ಸಿಐಡಿಗೆ ವಹಿಸಲಾಗಿತ್ತು. ಈ ಅವ್ಯವಹಾರ ಸಂಬಂಧ ನೇಮಕಾತಿ ಅಕ್ರಮದಲ್ಲಿ ಭಾಗಿಯಾಗಿದ್ದ ಆರೋಪದ ಮೇಲೆ ಹಿರಿಯ ಪೊಲೀಸ್ ಅಧಿಕಾರಿ ಅಮೃತ ಪೌಲ್ ಸೇರಿದಂತೆ 100 ಜನರನ್ನು ಬಂಧಿಸಲಾಗಿತ್ತು.
ಸಿಐಡಿ ತನಿಖೆ ವೇಳೆ ಪರೀಕ್ಷೆ ನಡೆಸಿದ ನಂತರ ಬೆಂಗಳೂರಿನ ಸಿಐಡಿ ಕೇಂದ್ರ ಕಚೇರಿಯಿರುವ ಕಾರ್ಲಟನ್ ಹೌಸ್ ನಲ್ಲಿರುವ ನೇಮಕಾತಿ ಸೆಲ್ ನ ಸ್ಟ್ರಾಂಗ್ ರೂಮ್ ನಲ್ಲಿನ ಸಿಸಿಟಿವಿಯನ್ನು ಬಂದ್ ಮಾಡಿ, ಆ ಹಾಳೆಗಳನ್ನು ಇರಿಸಿದ್ದ ಒಎಂಆರ್ (OMR) ಶೀಟ್ ತಿದ್ದಿರುವುದು ಕಂಡುಬಂದಿದೆ. ಒಎಂಆರ್ ಶೀಟ್ ಗಳನ್ನು ತಿದ್ದಲು ಇಬ್ಬರು ಶಸ್ತ್ರಸಜ್ಜಿತ ಹೆಡ್ ಕಾನ್ ಸ್ಟೇಬಲ್ ಗಳು ಸ್ಟ್ರಾಂಗ್ ರೂಮ್ ಪ್ರವೇಶಿಸಿರುವುದು ಕಂಡು ಬಂದಿದೆ. ನಂತರ ಪೊಲೀಸ್ ಅಧಿಕಾರಿಗಳು ಅಭ್ಯರ್ಥಿಗಳಿಗೆ ನೇಮಕಾತಿಯಲ್ಲಿ ಅನುಕೂಲವಾಗಲು ಅಕ್ರಮವಾಗಿ ವಿವಿಧ ಮಾರ್ಗಗಳಿಂದ ಹಣ ವಸೂಲಿ ಮಾಡಿರುವುದು ಪತ್ತೆಯಾಗಿತ್ತು.

ಈ 100 ಜನ ಆರೋಪಿಗಳ ವಿರುದ್ಧ ದಾಖಲಿಸಿದ ಎಫ್ ಐಆರ್ ಆಧಾರದ ಮೇಲೆ ಜಾರಿ ನಿರ್ದೇಶನಾಲಯವು ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆ (PMLA)ಯಡಿ ಆಗಸ್ಟ್ 8ರಂದು ಇಸಿಐಆರ್ ದಾಖಲಿಸಿಕೊಂಡಿತ್ತು. ಅದರ ಮುಂದುವರೆದ ಭಾಗವಾಗಿ ಗುರುವಾರ ಆರೋಪಿಗಳಿಗೆ ಸಂಬಂಧಿಸಿದ 11 ಸ್ಥಳಗಳಲ್ಲಿ ಶೋಧ ಕಾರ್ಯಾಚರಣೆಯನ್ನು ಕೈಗೊಂಡಿದೆ ಎಂದು ಇಡಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.






















