ಬೆಂಗಳೂರು, ಫೆ.2, www.bengaluruwire.com : ರಾಜ್ಯದಲ್ಲಿ ಮುಂಬರುವ ಸಾರ್ವತ್ರಿಕ ಚುನಾವಣೆಗೆ ರಾಜಧಾನಿ ಬೆಂಗಳೂರು ತೆರೆಮರೆಯಲ್ಲಿ ಚುರುಕಿನಿಂದ ಪೂರ್ವಸಿದ್ಧತೆ ನಡೆಸುತ್ತಿದೆ. ಇದಕ್ಕೆ ಸಾಕ್ಷಿಯೆಂಬಂತೆ ಗುರುವಾರ, ಚುನಾವಣಾ ಆಯೋಗ (Election Commission) ದ ನಿರ್ದೇಶನದಂತೆ ಬೆಂಗಳೂರು ನಗರ ಜಿಲ್ಲೆಯ ವ್ಯಾಪ್ತಿಗೆ ಬರುವ 7 ವಿಧಾನಸಭಾ ಕ್ಷೇತ್ರಗಳ ವಿದ್ಯುನ್ಮಾನ ಮತಯಂತ್ರಗಳು ಮತ್ತು ವಿವಿಪ್ಯಾಟ್ ಗಳ ಉಗ್ರಾಣಕ್ಕಾಗಿ ಪಿಲ್ಲಹಳ್ಳಿ ಗ್ರಾಮದಲ್ಲಿ ನಿರ್ಮಾಣವಾಗಿರುವ ಸುಸಜ್ಜಿತ ಕಟ್ಟಡ ಉದ್ಘಾಟನೆಯಾಗಿದೆ.
ಬೆಂಗಳೂರು ಉತ್ತರ ತಾಲೂಕು, ದಾಸನಪುರ ಹೋಬಳಿ, ಪಿಲ್ಲಹಳ್ಳಿ ಗ್ರಾಮದ ಸರ್ವೆ ನಂಬರ್ 77ರಲ್ಲಿ ಎಕರೆ ಪ್ರದೇಶದಲ್ಲಿ 5.10 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣವಾಗಿರುವ ಕಟ್ಟಡವನ್ನು ಜಿಲ್ಲಾ ಚುನಾವಣಾ ಅಧಿಕಾರಿ ಹಾಗೂ ಮುಖ್ಯ ಆಯುಕ್ತರಾದ ತುಷಾರ್ ಗಿರಿನಾಥ್ ಉದ್ಘಾಟಿಸಿದರು.
ಇದೇ ಸಂದರ್ಭದಲ್ಲಿ ಮಾತನಾಡಿದ ಅವರು, 2023ರ ರಾಜ್ಯ ವಿಧಾನಸಭಾ ಚುನಾವಣೆಗೆ ಸಂಬಂಧಿಸಿದಂತೆ ಬೆಂಗಳೂರು ನಗರ ಜಿಲ್ಲೆಯ ವ್ಯಾಪ್ತಿಗೆ ಬರುವ 7 ವಿಧಾನಸಭಾ ಕ್ಷೇತ್ರಗಳ ವಿದ್ಯುನ್ಮಾನ ಮತಯಂತ್ರಗಳು(Electronic voting machine) ಮತ್ತು ವಿವಿಪ್ಯಾಟ್ (Voter-verified paper audit trail) ಗಳ ಉಗ್ರಾಣಕ್ಕಾಗಿ ಪಿಲ್ಲಹಳ್ಳಿ ಗ್ರಾಮದಲ್ಲಿ ಹೊಸದಾಗಿ ಬೆಂಗಳೂರು ನಗರ ಜಿಲ್ಲೆಯ ಉಗ್ರಾಣವನ್ನು ಸ್ಥಾಪಿಸಲಾಗಿದೆ ಎಂದರು.

ಇವಿಎಂ ಹಾಗೂ ವಿವಿಪ್ಯಾಟ್ ಗಳಿಗೆಂದೇ ಪ್ರತ್ಯೇಕ ಉಗ್ರಾಣ :

ಜಿಲ್ಲಾ ಚುನಾವಣಾ ಅಧಿಕಾರಿ-ಬೆಂಗಳೂರು ರವರ ವ್ಯಾಪ್ತಿಯಲ್ಲಿ ಬೆಂಗಳೂರು ನಗರ, ಕೇಂದ್ರ, ಉತ್ತರ ಹಾಗೂ ದಕ್ಷಿಣ ವಲಯಗಳಲ್ಲಿ 4 ಅಪರ ಜಿಲ್ಲಾ ಚುನಾವಣಾ ಅಧಿಕಾರಿಗಳು ಇರಲಿದ್ದಾರೆ. ಈ ಹಿಂದೆ ನಗರದಲ್ಲೇ ಉಗ್ರಾಣಗಳ ವ್ಯವಸ್ಥೆಯಿತ್ತು. ಭಾರತ ಚುನಾವಣಾ ಆಯೋಗದ ಮಾರ್ಗಸೂಚಿ ಹಾಗೂ ನಿರ್ದೇಶನದಂತೆ ಇವಿಎಂ ಹಾಗೂ ವಿವಿಪ್ಯಾಟ್ ಗಳ ಉಗ್ರಾಣಗಳನ್ನು ಪ್ರತ್ಯೇಕವಾಗಿ ಸ್ಥಾಪಿಸಲಾಗುತ್ತಿದ್ದು, ಅದರ ಸಲುವಾಗಿ ಮೊದಲ ಹಂತದಲ್ಲಿ ಬೆಂಗಳೂರು ನಗರ ಜಿಲ್ಲೆ ವ್ಯಾಪ್ತಿಯ ಉಗ್ರಾಣವನ್ನು ಸ್ಥಾಪಿಸಲಾಗಿದೆ. ಇದಲ್ಲದೆ ಇದೇ ಸ್ಥಳದಲ್ಲಿ ಬೆಂಗಳೂರು ಉತ್ತರ ಹಾಗೂ ಬೆಂಗಳೂರು ದಕ್ಷಿಣದ ಉಗ್ರಾಣಗಳ ಕಟ್ಟಡ ನಿರ್ಮಾಣ ಕಾಮಗಾರಿಯು ಪ್ರಗತಿಯಲ್ಲಿದ್ದು, ಮುಂದಿನ ಲೋಕಸಭಾ ಚುನಾವಣೆಯ ವೇಳೆಗೆ ಉಗ್ರಾಣಗಳ ಕಟ್ಟಡ ಕಾಮಗಾರಿಯನ್ನು ಪೂರ್ಣಗೊಳಿಸಿ ಸೇವೆಗೆ ಬಳಸಿಕೊಳ್ಳಲಾಗುವುದೆಂದು ತಿಳಿಸಿದರು.
ಮುಂಬರುವ ಸಾರ್ವತ್ರಿಕ ಚುನಾವಣೆಯ ಸಂಬಂಧ ಈಗಾಗಲೇ ಇವಿಎಂ ಗಳು ಬಂದಿದ್ದು, ಉಗ್ರಾಣದಲ್ಲಿ ಶೇಖರಿಸಿಡಲಾಗಿದೆ. ವಿವಿಪ್ಯಾಟ್ ಗಳು ಬರಬೇಕಿದ್ದು, ಅವು ಬಂದ ನಂತರ ರಾಜಕೀಯ ಪಕ್ಷಗಳ ಪ್ರತಿನಿಧಿಗಳ ಸಮ್ಮುಖದಲ್ಲಿ ಫೆ.10 ರಿಂದ 19 ರೊಳಗಾಗಿ ದಿನಾಂಕವನ್ನು ನಿಗದಿಪಡಿಸಿಕೊಂಡು ಮೊದಲ ಹಂತದ ಪರಿಶೀಲನೆ (First Level Checking) ಮಾಡಲಾಗುವುದು ಎಂದು ಹೇಳಿದರು.
ಬೆಂಗಳೂರು ನಗರದಲ್ಲಿ 3083 ಮತಗಟ್ಟೆಗಳಿರಲಿದೆ :
ಬೆಂಗಳೂರು ನಗರ ಅಪರ ಜಿಲ್ಲಾ ಚುನಾವಣಾಧಿಕಾರಿ ಮತ್ತು ಜಿಲ್ಲಾಧಿಕಾರಿಯಾದ ಕೆ.ಎ.ದಯಾನಂದ್ ರವರು ಮಾತನಾಡಿ, ಬೆಂಗಳೂರು ನಗರ ಜಿಲ್ಲೆ ವ್ಯಾಪ್ತಿಗೆ 7 ವಿಧಾನ ಸಭಾ ಕ್ಷೇತ್ರಗಳು ಬರಲಿದ್ದು, ಒಟ್ಟು 3083 ಮತಗಟ್ಟೆಗಳು ಬರಲಿವೆ. ಈ ಪೈಕಿ ಶೇ. 125 ಇವಿಎಂ ಈಗಾಗಲೇ ಸ್ವೀಕೃತವಾಗಿದ್ದು, ಉಗ್ರಾಣದಲ್ಲಿ ಶೇಖರಿಸಿಡಲಾಗಿದೆ. ಶೇ. 135 ವಿವಿಪ್ಯಾಟ್ ಸ್ವೀಕೃತವಾಗಬೇಕಿದ್ದು, ಇದೇ 6ನೇ ತಾರೀಖು ಬರಲಿವೆ. ಈ ವೇಳೆಗೆ ಉಗ್ರಾಣದ ಸುತ್ತಲೂ ಕಾಂಪೌಂಡ್ ಗೋಡೆ ನಿರ್ಮಿಸಲಾಗಿದೆ. ಇದೇ ಸ್ಥಳದಲ್ಲಿ ಫಸ್ಟ್ ಲೆವೆಲ್ ಚೆಕ್ಕಿಂಗ್ ಮಾಡಲಾಗುವುದು ಎಂದು ತಿಳಿಸಿದರು.
ಬೆಂಗಳೂರು ನಗರ ವ್ಯಾಪ್ತಿಗೆ ಯಲಹಂಕ, ಯಶವಂತಪುರ, ಬ್ಯಾಟರಾಯನಪುರ, ಮಹದೇವಪುರ, ದಾಸರಹಳ್ಳಿ, ಆನೇಕಲ್ ಹಾಗೂ ಬೆಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರಗಳು ಬರಲಿವೆ. ಉಗ್ರಾಣದ ಸ್ಥಳದಲ್ಲಿ ಅಗತ್ಯ ಸಿಸಿ ಟಿವಿ, ಪೊಲೀಸ್ ಭದ್ರತಾ ಸಿಬ್ಬಂದಿಯ ವ್ಯವಸ್ಥೆ ಕಲ್ಪಿಸಲಾಗುತ್ತದೆ. ಈಗಾಗಲೇ ಬಂದಿರುವ ಇವಿಎಂಗಳನ್ನು ಹಳೆಯ ಉಗ್ರಾಣದಲ್ಲಿ ಶೇಖರಿಸಿಟ್ಟಿದ್ದು, ಅದನ್ನು ಇಲ್ಲಿಗೆ ಸ್ಥಳಾಂತರಿಸಲಾಗುವುದು ಎಂದು ಹೇಳಿದರು.
ಈ ವೇಳೆ ಅಪರ ಜಿಲ್ಲಾಧಿಕಾರಿಯಾದ ಕೃಷ್ಣಮೂರ್ತಿ, ನಿರ್ಮಿತಿ ಕೇಂದ್ರದ ಯೋಜನಾ ನಿರ್ದೇಶಕರಾದ ರಾಜೀವ್ ಹಾಗೂ ಇನ್ನಿತರೆ ಅಧಿಕಾರಿಗಳು ಉಪಸ್ಥಿತರಿದ್ದರು.

ಬೆಂಗಳೂರು ನಗರ ಜಿಲ್ಲೆಯ ಉಗ್ರಾಣ ಕಟ್ಟಡದ ವಿವರ: ಕಟ್ಟಡದ ವಿಸ್ತೀರ್ಣ: 8731.74ಚ.ಮೀ, ಕಟ್ಟಡದ ಒಟ್ಟು ವೆಚ್ಚ: 5.10 ಕೋಟಿ ರೂ.
ತಳಮಹಡಿಯಲ್ಲೇನೆನಿದೆ?:
5 ಸ್ಟ್ರಾಂಗ್ ರೂಮ್ಸ್ ಗಳಿವೆ, ಮೊದಲ ಹಂತದ ತಪಾಸಣಾ ಕೊಠಡಿ, ಸಂಗ್ರಹಣಾ ಕೊಠಡಿ
ನೆಲಮಹಡಿಯಲ್ಲೇನಿರಲಿದೆ? :
4 ಸ್ಟ್ರಾಂಗ್ ರೂಮ್ಸ್ ಗಳು, ಮೊದಲ ಹಂತದ ತಪಾಸಣಾ ಕೊಠಡಿ, ವಿದ್ಯುತ್ ಕೊಠಡಿ, ರೆಕಾರ್ಡ್ ರೂಂ, ಕಛೇರಿ ಕೊಠಡಿ, ಲಿಫ್ಟ್ ವ್ಯವಸ್ಥೆ(ಕೆಲಸ ಪ್ರಗತಿಯಲ್ಲಿದೆ), ಶೌಚಾಲಯ, ರ‍್ಯಾಂಪ್ ವ್ಯವಸ್ಥೆ, ಪೊಲೀಸ್ ಭದ್ರತೆ ಹಾಗೂ ಸಿಸಿ ಕ್ಯಾಮೆರಾ ಕೊಠಡಿಯಿದೆ.
ಚುನಾವಣೆ ಪ್ರಕ್ರಿಯೆ ಮುನ್ನ ಮತ್ತು ನಂತರ ಸ್ಟ್ರಾಂಗ್ ರೂಮ್ ಪ್ರಾಮುಖ್ಯತೆ :
ಮತದಾನದ ಸಂಪೂರ್ಣ ಪ್ರಕ್ರಿಯೆ ಮತ್ತು ನಂತರದ ಇವಿಎಂಗಳನ್ನು ಸ್ಟ್ರಾಂಗ್ ರೂಂಗಳಲ್ಲಿ ಸಂಪೂರ್ಣ ರೀತಿಯಲ್ಲಿ ಸಂರಕ್ಷಿಸಿಡಲಾಗುತ್ತದೆ. ಭಾರತ ಚುನಾವಣಾ ಆಯೋಗದ ಮಾರ್ಗಸೂಚಿಗಳ ಪ್ರಕಾರ, ಕೇಂದ್ರ ಅರೆಸೇನಾ ಪಡೆಗಳು ಮತ್ತು ರಾಜ್ಯ ಪೊಲೀಸರ ತುಕಡಿಯಿಂದ ಸರಿಯಾದ ಬೆಂಗಾವಲಿನಡಿಯಲ್ಲಿ ಇವಿಎಂಗಳನ್ನು ಸ್ವಾಗತ ಕೇಂದ್ರಗಳಿಗೆ ಹಿಂತಿರುಗಿಸಲಾಗುತ್ತದೆ. ನಿರ್ದಿಷ್ಟ ಮತಗಟ್ಟೆಯ ಸಂಪೂರ್ಣ ನಿಯಂತ್ರಣ ಘಟಕಗಳು (CU), ಬ್ಯಾಲೆಟ್ ಯೂನಿಟ್‌ಗಳು (BU) ಮತ್ತು ವೋಟರ್ ವೆರಿಫೈಡ್ ಪೇಪರ್ ಆಡಿಟ್ ಟ್ರಯಲ್ (VVPAT) ಅನ್ನು ಒಂದೇ ಸ್ಟ್ರಾಂಗ್ ರೂಮ್‌ನಲ್ಲಿ ಇಡಬೇಕು.
ಅಭ್ಯರ್ಥಿಗಳು ಅಥವಾ ಅವರ ಏಜೆಂಟ್‌ಗಳು ಮತ್ತು ವೀಕ್ಷಕರ ಸಮ್ಮುಖದಲ್ಲಿ ಕೊಠಡಿಯನ್ನು ಡಬಲ್ ಲಾಕ್‌ನಲ್ಲಿ ಮುಚ್ಚಲಾಗುತ್ತದೆ. ಬಳಕೆಯಾಗದ ವಿವಿಪಿಎಟಿಗಳು ಮತ್ತು ಬಳಕೆಯಾಗದ ಇವಿಎಂಗಳನ್ನು ಪ್ರತ್ಯೇಕ ಸ್ಟ್ರಾಂಗ್ ರೂಂನಲ್ಲಿ ಸಂಗ್ರಹಿಸಿಡಲಾಗುತ್ತದೆ. ಇವಿಎಂಗಳ ಸಾಗಣೆ ಮತ್ತು ಶೇಖರಣೆಯ ಸಮಯದಲ್ಲಿ ದಿನಾಂಕ ಮತ್ತು ಸಮಯದ ರೆಕಾರ್ಡಿಂಗ್‌ನೊಂದಿಗೆ ವೀಡಿಯೊ ಮತ್ತು ಡಿಜಿಟಲ್ ಫೋಟೋಗ್ರಫಿಯನ್ನು ಮಾಡಬೇಕು ಎಂದು ಚುನಾವಣಾ ಆಯೋಗ ಹೇಳುತ್ತದೆ.
ಬೆಂಗಳೂರಿನ ಇವಿಎಂ ಮತ್ತು ವಿವಿಪ್ಯಾಟ್ ಗಳ ಉಗ್ರಾಣಗಳ ಮಾಹಿತಿ :
ಬೆಂಗಳೂರು ಉತ್ತರ ಮತ್ತು ಬೆಂಗಳೂರು ದಕ್ಷಿಣ: ವಲಯ ಜಂಟಿ ಆಯುಕ್ತರ ಕಛೇರಿ(ದಕ್ಷಿಣ), 2ನೇ ಬ್ಲಾಕ್, ಜಯನಗರ.
ಬೆಂಗಳೂರು ಕೇಂದ್ರ: ಅಂಬೇಡ್ಕರ್ ಕ್ರೀಡಾಂಗಣ, ಬಸವೇಶ್ವರ ನಗರ.
ಬೆಂಗಳೂರು ನಗರ ಜಿಲ್ಲೆ: ಪಿಲ್ಲಹಳ್ಳಿ ಗ್ರಾಮ, ದಾಸನಪುರ ಹೋಬಳಿ, ಬೆಂಗಳೂರು ಉತ್ತರ ತಾಲೂಕು.






















