ಬೆಂಗಳೂರು, ಆ.12 www.bengaluruwire.com: ರಾಜಧಾನಿ ಬೆಂಗಳೂರಿನಲ್ಲಿ ಆಹಾರದ ಗುಣಮಟ್ಟ ಮತ್ತು ಸುರಕ್ಷತೆಯನ್ನು ಖಾತ್ರಿಪಡಿಸುವ ನಿಟ್ಟಿನಲ್ಲಿ ಆಹಾರ ಸುರಕ್ಷತೆ ಮತ್ತು ಔಷಧ ಆಡಳಿತ ಇಲಾಖೆಯುನಗರದ ಪ್ರಮುಖ ಇ-ಕಾಮರ್ಸ್ ಸಂಸ್ಥೆಗಳಾದ ‘ಜೊಮ್ಯಾಟೊ ಹೈಪರ್‌ಪ್ಯೂರ್’ (Zomato Hyperpure), ‘ಜೆಪ್ಟೊ’ (Zepto) ಹಾಗೂ ಮೂರು ಇಂದಿರಾ ಕ್ಯಾಂಟೀನ್ ಅಡುಗೆ ಘಟಕಗಳ ಮೇಲೆ ದಾಳಿ ನಡೆಸಿದೆ. ಈ ಸಂದರ್ಭದಲ್ಲಿ ಗಂಭೀರ ಲೋಪದೋಷಗಳು ಪತ್ತೆಯಾಗಿವೆ.
Zomato Hyperpure ನಲ್ಲಿ ಲೋಪಗಳ ಮಹಾಪೂರ:
ಸಕಲವಾರ ನಗರದಲ್ಲಿರುವ ಜೊಮ್ಯಾಟೊ ಹೈಪರ್‌ಪ್ಯೂರ್ ಘಟಕದ ಮೇಲೆ ನಡೆದ ತಪಾಸಣೆಯಲ್ಲಿ, ಪರವಾನಿಗೆ ಇಲ್ಲದ ಚಿಕನ್ (146 ಕೆಜಿ), ಅವಧಿ ಮುಗಿದ ಅಥವಾ ಸರಿಯಾದ ಪರವಾನಿಗೆ ಇಲ್ಲದ ಬೆಳ್ಳುಳ್ಳಿ (40 ಕೆಜಿ) ಸೇರಿದಂತೆ ಅಕ್ಕಿ, ಡ್ರೈ ಫ್ರೂಟ್ಸ್ ಮತ್ತು ಮಸಾಲಾ ಪದಾರ್ಥಗಳಲ್ಲಿ ‘ಮಿಸ್‌ಬ್ರ್ಯಾಂಡಿಂಗ್’ ಪತ್ತೆಯಾಗಿದೆ. ಒಟ್ಟು 40 ಮಾದರಿಗಳನ್ನು ಸಂಗ್ರಹಿಸಿ ಪ್ರಯೋಗಾಲಯಕ್ಕೆ ಕಳುಹಿಸಲಾಗಿದ್ದು, ಸಂಸ್ಥೆಗೆ ನೋಟಿಸ್ ಜಾರಿಗೊಳಿಸಲಾಗಿದೆ.
Zepto ಗೋದಾಮಿಗೆ ಬೀಗ:

ಹೊಸಕೋಟೆಯ ಜೆಪ್ಟೊ ವೇರ್‌ಹೌಸ್‌ನಲ್ಲಿ ನಡೆಸಿದ ದಾಳಿಯಲ್ಲಿ ಅನೈರ್ಮಲ್ಯಕರ ಸಂಗ್ರಹಣಾ ಪರಿಸ್ಥಿತಿ ಮತ್ತು ಮಿಸ್‌ಬ್ರ್ಯಾಂಡಿಂಗ್ ಕಂಡುಬಂದ ಹಿನ್ನೆಲೆಯಲ್ಲಿ, ತಕ್ಷಣವೇ ಗೋದಾಮಿಗೆ ಆಹಾರ ಸುರಕ್ಷತಾ ಇಲಾಖೆ ಅಧಿಕಾರಿಗಳು ಬೀಗ ಮುದ್ರೆ ಹಾಕಿದ್ದಾರೆ.
ಇಂದಿರಾ ಕ್ಯಾಂಟೀನ್ ಅಡುಗೆ ಘಟಕಗಳಿಗೂ ತಪ್ಪದ ಬಿಸಿ:
ಗೊಟ್ಟಿಗೆರೆ, ಲಿಂಗರಾಜಪುರ ಮತ್ತು ಸಿಂಗಸಂದ್ರದಲ್ಲಿರುವ ಇಂದಿರಾ ಕ್ಯಾಂಟೀನ್ ಕೇಂದ್ರೀಯ ಅಡುಗೆ ಘಟಕಗಳಲ್ಲಿ ಆಹಾರ ನಿರ್ವಹಣೆ ಸರಿಯಾಗಿಲ್ಲದ ಕಾರಣ ನೋಟಿಸ್ ನೀಡಲಾಗಿದೆ. ಮುಖ್ಯವಾಗಿ ಗೊಟ್ಟಿಗೆರೆ ಘಟಕದ ಗೋದಾಮನ್ನು ಮುಚ್ಚಲಾಗಿದೆ. ಇಲಾಖೆಯು ಎಲ್ಲೆಡೆಯೂ ಕಟ್ಟುನಿಟ್ಟಿನ ಕ್ರಮಕ್ಕೆ ಮುಂದಾಗಿದ್ದು, ನ್ಯಾಯ ನಿರ್ಣಾಯಾಧಿಕಾರಿಗಳ (Adjudicating Officer) ನ್ಯಾಯಾಲಯದಲ್ಲಿ ಪ್ರಕರಣ ದಾಖಲಿಸಲು ಶಿಫಾರಸು ಮಾಡಲಾಗಿದೆ.
”ಆಹಾರ ಸುರಕ್ಷತಾ ನಿಯಮಗಳನ್ನು ಉಲ್ಲಂಘಿಸುವ ಯಾವುದೇ ಉದ್ದಿಮೆದಾರರ ವಿರುದ್ಧ ಕಾನೂನು ಪ್ರಕಾರ ಕಠಿಣ ಕ್ರಮ ಕೈಗೊಳ್ಳಲಾಗುವುದು” ಎಂದು ಆಹಾರ ಸುರಕ್ಷತೆ ಮತ್ತು ಔಷಧ ಆಡಳಿತ ಇಲಾಖೆಯ ಆಯುಕ್ತರಾದ ಶ್ರೀನಿವಾಸ್ ಎಚ್ಚರಿಕೆ ನೀಡಿದ್ದಾರೆ.



















