ಬೆಂಗಳೂರು, ಆ.11 www.bengaluruwire.com: ಭಾರತದ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಕೇವಲ ಅಹಿಂಸಾ ಮಾರ್ಗವಷ್ಟೇ ಅಲ್ಲದೆ, ಪ್ರಾಣವನ್ನೇ ಪಣಕ್ಕಿಟ್ಟ ಅನೇಕ ಅಜ್ಞಾತ ಕ್ರಾಂತಿಕಾರಿಗಳ ಕೊಡುಗೆಯೂ ಅಪಾರವಾಗಿದೆ. ಇಂತಹ 33 ಅನಾಮಿಕ ಸ್ವಾತಂತ್ರ್ಯ ಹೋರಾಟಗಾರರ ಸಾಹಸಗಾಥೆಗಳನ್ನು ಪರಿಚಯಿಸುವ ರಾಷ್ಟ್ರೋತ್ಥಾನ ಸಾಹಿತ್ಯದ ನೂತನ ಪುಸ್ತಕ ‘ಕ್ರಾಂತಿಯ ಕಿಡಿಗಳು’ ಇಂದು (ಆಗಸ್ಟ್ 11) ನಗರದಲ್ಲಿ ಅದ್ಧೂರಿಯಾಗಿ ಲೋಕಾರ್ಪಣೆಗೊಂಡಿತು.
ಚಾಮರಾಜಪೇಟೆಯ ಕೇಶವಕೃಪಾದಲ್ಲಿ ಆಯೋಜಿಸಲಾಗಿದ್ದ ವಿಶೇಷ ಕಾರ್ಯಕ್ರಮದಲ್ಲಿ ಪುಸ್ತಕವನ್ನು ಬಿಡುಗಡೆಗೊಳಿಸಿ ಮಾತನಾಡಿದ ರಾಷ್ಟ್ರೀಯ ಸ್ವಯಂಸೇವಕ ಸಂಘದ (RSS) ಸಹ ಸರಕಾರ್ಯವಾಹರಾದ ಮುಕುಂದ.ಸಿ.ಆರ್ ಅವರು, ಇತಿಹಾಸದ ಪುಟಗಳಲ್ಲಿ ಮರೆಯಾದ ವೀರರ ತ್ಯಾಗವನ್ನು ಸ್ಮರಿಸಿದರು.
ಕೇವಲ ಅಹಿಂಸೆಯಿಂದ ಮಾತ್ರ ಸ್ವಾತಂತ್ರ್ಯ ಒಲಿದಿಲ್ಲ:
”ಅಹಿಂಸೆ ಹಾಗೂ ಅಹಿಂಸಾ ಸತ್ಯಾಗ್ರಹಗಳಿಂದ ಮಾತ್ರವೇ ನಮ್ಮ ದೇಶಕ್ಕೆ ಸ್ವಾತಂತ್ರ್ಯ ಲಭಿಸಿದೆ ಎಂಬ ಭಾವನೆ ಹಲವರಲ್ಲಿದೆ. ಆದರೆ, ಅದೆಷ್ಟೋ ಕ್ರಾಂತಿಕಾರಿಗಳ ಕೆಚ್ಚೆದೆಯ ಸಶಸ್ತ್ರ ಹೋರಾಟವು ಈ ನಿಟ್ಟಿನಲ್ಲಿ ನಿರ್ಣಾಯಕ ಪಾತ್ರ ವಹಿಸಿದೆ” ಎಂದು ಮುಕುಂದ.ಸಿ.ಆರ್ ಅಭಿಪ್ರಾಯಪಟ್ಟರು.


ಸ್ವಾತಂತ್ರ್ಯ ಹೋರಾಟದ ವಿವಿಧ ಮಗ್ಗಲುಗಳನ್ನು ವಿಶ್ಲೇಷಿಸಿದ ಅವರು, “ಒಂದು ವರ್ಗ ಬ್ರಿಟಿಷರಲ್ಲಿ ಸ್ವಾತಂತ್ರ್ಯಕ್ಕಾಗಿ ಪ್ರಾರ್ಥನೆ ಮಾಡಿದರೆ, ಮತ್ತೊಂದು ವರ್ಗ ಸ್ವಾತಂತ್ರ್ಯವನ್ನು ಹಕ್ಕಾಗಿ ಪ್ರತಿಪಾದಿಸಿತು. ಸಮಾಜ ಸುಧಾರಣೆಯ ಮೂಲಕವೂ ಹೋರಾಟಗಳು ನಡೆದವು. ಆದರೆ, ಬ್ರಿಟಿಷರಿಗೆ ಅವರದ್ದೇ ಭಾಷೆಯಲ್ಲಿ, ಅಂದರೆ ಬಂದೂಕು ಮತ್ತು ಮದ್ದು–ಗುಂಡುಗಳ ಮೂಲಕ ತಕ್ಕ ಉತ್ತರ ನೀಡಿದ್ದು ಕ್ರಾಂತಿಕಾರಿಗಳ ವರ್ಗ.
ಮೊದಲ ಸ್ವಾತಂತ್ರ್ಯ ಸಂಗ್ರಾಮದಿಂದಲೂ ಇಂತಹ ಕ್ರಾಂತಿಕಾರಿ ಹೋರಾಟಗಳು ನಡೆದುಕೊಂಡು ಬಂದಿದ್ದು, ಮುಂಬರುವ ಸ್ವಾತಂತ್ರ್ಯೋತ್ಸವದ ಸಂದರ್ಭದಲ್ಲಿ ಇಂತಹ ಅಜ್ಞಾತ ವೀರರ ಬಗ್ಗೆ ತಿಳಿದುಕೊಳ್ಳಲು ಈ ಪುಸ್ತಕ ಅತ್ಯಂತ ಉಪಯುಕ್ತವಾಗಿದೆ” ಎಂದರು.
50 ವರ್ಷ ಅಂಡಮಾನ್ ಜೈಲುವಾಸ ಅನುಭವಿಸಿದ ಮುಸಾಯ್ ಸಿಂಗ್:
ಕಾರ್ಯಕ್ರಮದಲ್ಲಿ ಮಾತನಾಡಿದ ‘ಕ್ರಾಂತಿಯ ಕಿಡಿಗಳು’ ಪುಸ್ತಕದ ಲೇಖಕರಾದ ದು. ಗು. ಲಕ್ಷ್ಮಣ್, ಪುಸ್ತಕದಲ್ಲಿ ಅಡಗಿರುವ ಕೆಲವು ರೋಚಕ ಹಾಗೂ ಹೃದಯವಿದ್ರಾವಕ ಕಥೆಗಳನ್ನು ಹಂಚಿಕೊಂಡರು.
ಮುಸಾಯ್ ಸಿಂಗ್ ಕಥೆ: “1857ರಲ್ಲೇ ಬಂಧನಕ್ಕೊಳಗಾಗಿ ಬರೋಬ್ಬರಿ 50 ವರ್ಷಗಳ ಕಾಲ ಅಂಡಮಾನ್ ಜೈಲಿನಲ್ಲಿ ಕಠಿಣ ಶಿಕ್ಷೆ ಅನುಭವಿಸಿದ ಮುಸಾಯ್ ಸಿಂಗ್ ಹೆಸರು ಬಹುಶಃ ಯಾರಿಗೂ ತಿಳಿದಿಲ್ಲ. ಸಾವರ್ಕರ್ ಅವರು 13 ವರ್ಷಗಳ ಶಿಕ್ಷೆ ಅನುಭವಿಸಿ ಹಿಂತಿರುಗಿದ ಬಗ್ಗೆ ನಾವು ಕೇಳಿದ್ದೇವೆ. ಆದರೆ, 50 ವರ್ಷ ಶಿಕ್ಷೆ ಅನುಭವಿಸಿದ ಮುಸಾಯ್ ಸಿಂಗ್ ಕಥೆ ಎಲ್ಲೂ ದಾಖಲಾಗಿಲ್ಲ. ಈತನ ಫೋಟೋ ಕೂಡ ಲಭ್ಯವಿಲ್ಲದಿದ್ದರೂ, ಪುಸ್ತಕದಲ್ಲಿ ಆತನ ಹೋರಾಟದ ಸಮಗ್ರ ವಿವರವಿದೆ.”
ಹೇಮೂ ಕಲಾನಿ ಮತ್ತು ಮುರ್ಮು ಸಹೋದರರು: “ತನ್ನ 19ನೇ ವಯಸ್ಸಿನಲ್ಲಿಯೇ ದೇಶಕ್ಕಾಗಿ ಗಲ್ಲಿಗೇರಿದ ಆರ್‌ಎಸ್‌ಎಸ್‌ನ ಸ್ವಯಂಸೇವಕ ಹೇಮೂ ಕಲಾನಿ ಹಾಗೂ ಕಾಡಿನ ಜನರನ್ನು ಒಟ್ಟುಗೂಡಿಸಿ ಬ್ರಿಟಿಷರ ವಿರುದ್ಧ ಸಿಡಿದೆದ್ದು ನೇಣಿಗೆ ಕೊರಳೊಡ್ಡಿದ ವನವಾಸಿ ಮುರ್ಮು ಸಹೋದರರಂತಹ 33 ಅಜ್ಞಾತ ವೀರರ ಕಥೆಗಳನ್ನು ಈ ಪುಸ್ತಕ ಒಳಗೊಂಡಿದೆ” ಎಂದು ಲೇಖಕರು ವಿವರಿಸಿದರು.
ಈ ಅರ್ಥಪೂರ್ಣ ಕಾರ್ಯಕ್ರಮದಲ್ಲಿ ರಾಷ್ಟ್ರೋತ್ಥಾನ ಪರಿಷತ್‌ನ ಅಧ್ಯಕ್ಷರಾದ ಎಂ.ಪಿ. ಕುಮಾರ್, ಕಾರ್ಯದರ್ಶಿಗಳಾದ ನಾ. ದಿನೇಶ್ ಹೆಗ್ಡೆ, ಖಜಾಂಜಿ ಕೆ. ಎಸ್. ನಾರಾಯಣ್ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.




















