ಬೆಂಗಳೂರು, ಆ.01 www.bengaluruwire.com:ರಾಜಧಾನಿ ಬೆಂಗಳೂರನ್ನು ಸ್ವಚ್ಛ, ಸುಂದರ ಹಾಗೂ ವಾಸಯೋಗ್ಯ ನಗರವನ್ನಾಗಿ ಮಾಡಲು ಗ್ರೇಟರ್ ಬೆಂಗಳೂರು ಪ್ರಾಧಿಕಾರ (GBA) ಮತ್ತು ಸರ್ಕಾರದ ವಿವಿಧ ಇಲಾಖೆಗಳ ಸಹಯೋಗದಲ್ಲಿ ‘ಜಸ್ಟ್ ಕ್ಲೀನ್ ಬೆಂಗಳೂರು’ ಘೋಷವಾಕ್ಯದೊಂದಿಗೆ ‘ತ್ಯಾಜ್ಯದಿಂದ ಸ್ವಾತಂತ್ರ್ಯ’ (Freedom from Waste) ಎಂಬ ಮಹತ್ವಾಕಾಂಕ್ಷಿ ಅಭಿಯಾನಕ್ಕೆ ಇಂದಿನಿಂದ ಅಧಿಕೃತ ಚಾಲನೆ ಸಿಕ್ಕಿದೆ.
ಬಳ್ಳಾರಿ ರಸ್ತೆಯ ಹೆಬ್ಬಾಳ ಜಂಕ್ಷನ್ (ಎಸ್ಟೀಮ್ ಮಾಲ್ ಹತ್ತಿರ) ನಡೆದ ವಿಶೇಷ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಸ್ವತಃ ಘನತ್ಯಾಜ್ಯವಿದ್ದ ಮಂಕರಿಯನ್ನು ಹೊತ್ತು ಸ್ವಚ್ಛತಾ ಅಭಿಯಾನಕ್ಕೆ ಚಾಲನೆ ನೀಡಿದರು. ಕೇಂದ್ರ ಸಣ್ಣ, ಅತಿಸಣ್ಣ ಮತ್ತು ಮಧ್ಯಮ ಕೈಗಾರಿಕೆ, ಕಾರ್ಮಿಕ ರಾಜ್ಯ ಸಚಿವರಾದ ಶೋಭಾ ಕರಂದ್ಲಾಜೆ ಹಾಗೂ ಗ್ರೇಟರ್ ಬೆಂಗಳೂರು ಅಭಿವೃದ್ಧಿ ಸಚಿವ ಕೃಷ್ಣ ಬೈರೇಗೌಡ ಅವರು ಜಂಟಿಯಾಗಿ ಈ ಅಭಿಯಾನಕ್ಕೆ ಚಾಲನೆ ನೀಡಿದರು. ಆಗಸ್ಟ್ 1 ರಿಂದ ಆಗಸ್ಟ್ 30 ರವರೆಗೆ ತಿಂಗಳಿಡೀ ಈ ಬೃಹತ್ ಸ್ವಚ್ಛತಾ ಜನಾಂದೋಲನ ನಡೆಯಲಿದೆ.

ಅಭಿಯಾನದ ಪ್ರಮುಖ ಮುಖ್ಯಾಂಶಗಳು:
ಏನೇನು ತೆರವುಗೊಳ್ಳಲಿದೆ?:

ನಗರದ ರಸ್ತೆ ಬದಿಗಳಲ್ಲಿ ಬಿದ್ದಿರುವ ಕಟ್ಟಡ ಭಗ್ನಾವಶೇಷ (C&D Waste), ಮರದ ಕೊಂಬೆಗಳು, ವಿದ್ಯುತ್ ಕಂಬಗಳು, ಪೈಪುಗಳು ಹಾಗೂ ಇತರ ಅನಗತ್ಯ ಸಾಮಗ್ರಿಗಳನ್ನು ಸಾಮೂಹಿಕವಾಗಿ ತೆರವುಗೊಳಿಸಲಾಗುವುದು.
‘Clearit’ ತಂತ್ರಾಂಶ:
ಬೆಂಗಳೂರು ಘನತ್ಯಾಜ್ಯ ನಿರ್ವಹಣಾ ನಿಯಮಿತ (BSWML) ಅಭಿವೃದ್ಧಿಪಡಿಸಿರುವ Clearit’ ಆಪ್ ಮೂಲಕ ತ್ಯಾಜ್ಯ ವಿಲೇವಾರಿ ವಾಹನಗಳ ನೋಂದಣಿ, ತ್ಯಾಜ್ಯದ ಪ್ರಮಾಣ ಹಾಗೂ ವಿಲೇವಾರಿಯ ಮೇಲ್ವಿಚಾರಣೆ ನಡೆಸಲಾಗುತ್ತದೆ.
ಬೃಹತ್ ಕಾರ್ಯಾಚರಣೆ:
ನಗರದಾದ್ಯಂತ ಸುಮಾರು 22,730 ಮೆಟ್ರಿಕ್ ಟನ್ ಕಟ್ಟಡ ಮತ್ತು ಭಗ್ನಾವಶೇಷ ಬಿದ್ದಿರುವ 1,616 ಸಾರ್ವಜನಿಕ ಸ್ಥಳಗಳನ್ನು ಗುರುತಿಸಲಾಗಿದ್ದು, 70 ಟಿಪ್ಪರ್ ವಾಹನಗಳನ್ನು ನಿಯೋಜಿಸಲಾಗಿದೆ.
ವಿಲೇವಾರಿ ಸ್ಥಳಗಳು:
ಸಂಗ್ರಹವಾದ ಇನರ್ಟ್ (Inert) ತ್ಯಾಜ್ಯವನ್ನು ವಿಲೇವಾರಿ ಮಾಡಲು ಯರಪ್ಪನಹಳ್ಳಿ, ಮಾರೇನಹಳ್ಳಿ, ವೆಂಕಟಾಪುರ, ವಿಟ್ಟಸಂದ್ರ ಹಾಗೂ ಕಲ್ಲುಬಾಳು ಪ್ರದೇಶಗಳನ್ನು ನಿಗದಿಪಡಿಸಲಾಗಿದೆ.
ಖಾಲಿ ನಿವೇಶನ ಮಾಲೀಕರಿಗೆ ಬಿಗ್ ಅಲರ್ಟ್: ಆ.15 ರ ಗಡುವು:
ಖಾಸಗಿ ಖಾಲಿ ನಿವೇಶನಗಳ ಮಾಲೀಕರು ತಮ್ಮ ಜಾಗದಲ್ಲಿರುವ ತ್ಯಾಜ್ಯ, ಡೆಬ್ರಿಸ್ ಹಾಗೂ ಗಿಡಗಂಟಿಗಳನ್ನು ಆಗಸ್ಟ್ 15 ರೊಳಗೆ ಕಡ್ಡಾಯವಾಗಿ ತೆರವುಗೊಳಿಸಬೇಕೆಂದು ಜಿಬಿಎ ಸೂಚಿಸಿದೆ.
ದಂಡದ ಬಿಸಿ:
ನಿಗದಿತ ಅವಧಿಯೊಳಗೆ ಖಾಲಿ ನಿವೇಶನ ಸ್ವಚ್ಛಗೊಳಿಸದಿದ್ದರೆ ನಗರ ಪಾಲಿಕೆಯೇ ತೆರವುಗೊಳಿಸಿ, ಆ ವೆಚ್ಚವನ್ನು ಮಾಲೀಕರಿಂದ ವಸೂಲಿ ಮಾಡಲಿದೆ. ಜೊತೆಗೆ, ಮೊದಲ ಉಲ್ಲಂಘನೆಗೆ ₹25,000 ಹಾಗೂ ನಂತರದ ಉಲ್ಲಂಘನೆಗಳಿಗೆ ₹50,000 ದಿಂದ ₹1,00,000 ವರೆಗೆ ಭಾರಿ ದಂಡ ವಿಧಿಸಲಾಗುವುದು.
ವಾಟ್ಸ್ ಆಪ್ ಮೂಲಕ ದೂರು ನೀಡಿ (WhatsApp Chatbot):
ನಿಮ್ಮ ಸುತ್ತಮುತ್ತಲಿನ ಖಾಲಿ ನಿವೇಶನಗಳನ್ನು ಆಗಸ್ಟ್ 15 ರೊಳಗೆ ಸ್ವಚ್ಛಗೊಳಿಸದಿದ್ದರೆ, ಸಾರ್ವಜನಿಕರು ಆ ಸ್ಥಳದ ಛಾಯಾಚಿತ್ರವನ್ನು GPS ಕೋ-ಆರ್ಡಿನೇಟ್ಸ್ (GPS Co-ordinates) ನೊಂದಿಗೆ +91 9448197197 ವಾಟ್ಸ್ ಆಪ್ ಚಾಟ್-ಬಾಟ್ ಸಂಖ್ಯೆಗೆ ಕಳುಹಿಸಿ ದೂರು ನೀಡಬಹುದು. ದೂರು ನೀಡಿದ ನಾಗರಿಕರ ಮಾಹಿತಿಯನ್ನು ಸಂಪೂರ್ಣ ಗೌಪ್ಯವಾಗಿಡಲಾಗುತ್ತದೆ.
ಕಾರ್ಯಕ್ರಮದಲ್ಲಿ ಇಂಧನ ಸಚಿವರಾದ ಕೆ.ಜೆ.ಜಾರ್ಜ್, ಶಾಸಕರಾದ ಎಸ್. ಆರ್. ವಿಶ್ವನಾಥ್, ಎ .ಸಿ.ಶ್ರೀನಿವಾಸ್, ಮಾನ್ಯ ಅಪರ ಮುಖ್ಯ ಕಾರ್ಯದರ್ಶಿಗಳಾದ ತುಷಾರ್ ಗಿರಿ ನಾಥ್, ಮುಖ್ಯ ಆಯುಕ್ತರಾದ ಮಹೇಶ್ವರ್ ರಾವ್, ಬೆಂಗಳೂರು ಘನತ್ಯಾಜ್ಯ ನಿರ್ವಹಣಾ ಕಂಪನಿಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಕರೀಗೌಡ, ಬೆಂಗಳೂರು ಉತ್ತರ ನಗರ ಪಾಲಿಕೆಯ ಆಯುಕ್ತರಾದ ಪೊಮ್ಮಲ ಸುನೀಲ್ ಕುಮಾರ್ ಸೇರಿದಂತೆ ಇನ್ನಿತರೆ ಗಣ್ಯರು ಹಾಗೂ ಅಧಿಕಾರಿಗಳು ಉಪಸ್ಥಿತರಿದ್ದರು.




















