ಬೆಂಗಳೂರು, ಆ.01 www.bengaluruwire.com: ತ್ಯಾಜ್ಯ ವಿಲೇವಾರಿಯನ್ನು ಪರಿಣಾಮಕಾರಿಯಾಗಿ ನಿಭಾಯಿಸಲು ಪಾಲಿಕೆಗಳೇ ಟಿಪ್ಪರ್‌ಗಳನ್ನು ಖರೀದಿಸಿ, ಕನಿಷ್ಠ ಎರಡು ವಾರ್ಡ್‌ಗಳಲ್ಲಿ ಪ್ರಾಯೋಗಿಕವಾಗಿ ತ್ಯಾಜ್ಯ ವಿಲೇವಾರಿ ಯೋಜನೆಯನ್ನು ಆರಂಭಿಸುವಂತೆ ಲೋಕಾಯುಕ್ತ ನ್ಯಾಯಮೂರ್ತಿ ಬಿ.ಎಸ್.ಪಾಟೀಲ ಅವರು, ಗ್ರೇಟರ್ ಬೆಂಗಳೂರು ಪ್ರಾಧಿಕಾರದ ವ್ಯಾಪ್ತಿಯ ಐದು ನಗರ ಪಾಲಿಕೆಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.
ಬೆಂಗಳೂರು ನಗರದಲ್ಲಿ ಅವೈಜ್ಞಾನಿಕ ತ್ಯಾಜ್ಯ ವಿಲೇವಾರಿ ಕುರಿತು ಸಾರ್ವಜನಿಕರ ದೂರುಗಳು ಹೆಚ್ಚಾದ ಹಿನ್ನೆಲೆಯಲ್ಲಿ ಸ್ವಯಂ ಪ್ರೇರಿತ ದೂರು ದಾಖಲಿಸಿಕೊಂಡಿರುವ ಅವರು ಈ ಆದೇಶ ನೀಡಿದ್ದಾರೆ.
ಶುಕ್ರವಾರ ಐದು ನಗರ ಪಾಲಿಕೆಗಳ ಆಯುಕ್ತರು ಮತ್ತು ಬಿ.ಎಸ್.ಡಬ್ಲ್ಯೂ.ಎಂ.ಎಲ್ (BSWML) ಮುಖ್ಯ ಕಾರ್ಯನಿರ್ವಹಣಾಧಿಕಾರಿ ಅವರೊಂದಿಗೆ ಲೋಕಾಯುಕ್ತರು ವಿಚಾರಣೆ ನಡೆಸಿದ್ದರು. ಈ ವೇಳೆ, ಟಿಪ್ಪರ್ ಖರೀದಿಸಿ, ಹೊರಗುತ್ತಿಗೆ ಅಥವಾ ತಾತ್ಕಾಲಿಕ ಆಧಾರದ ಮೇಲೆ ಚಾಲಕರು ಹಾಗೂ ಸಹಾಯಕರನ್ನು ನೇಮಿಸಿಕೊಳ್ಳಬೇಕು ಎಂದು ಸ್ಪಷ್ಟ ಮಾರ್ಗಸೂಚಿ ನೀಡಲಾಗಿತ್ತು.
ಲೋಕಾಯುಕ್ತರ ಪ್ರಮುಖ ಮಾರ್ಗಸೂಚಿಗಳು:

ಪ್ರಸ್ತುತ ಇರುವ ಕಸದ ವಾಹನಗಳಿಗೆ ಕಡ್ಡಾಯವಾಗಿ ಜಿಪಿಎಸ್ ಅಳವಡಿಸಬೇಕು ಮತ್ತು ಜಿಪಿಎಸ್ ಸೌಲಭ್ಯವಿಲ್ಲದ ಹಳೆಯ ವಾಹನಗಳ ಬಳಕೆಯನ್ನು ತಕ್ಷಣವೇ ನಿಲ್ಲಿಸಬೇಕು.
ಕಿರಿಯ ಆರೋಗ್ಯ ಪರಿವೀಕ್ಷಕರು, ಮೇಲ್ವಿಚಾರಕರು ಹಾಗೂ ಮಾರ್ಷಲ್‌ಗಳು ಕಸದ ಕಪ್ಪು ಚುಕ್ಕೆಗಳು ಹಾಗೂ ಮುಕ್ತ ನಿವೇಶನಗಳಿಂದ ಕಸ ತೆರವುಗೊಳಿಸುವುದನ್ನು ಖುದ್ದಾಗಿ ಮೇಲ್ವಿಚಾರಣೆ ಮಾಡಬೇಕು. ತಮ್ಮ ಕರ್ತವ್ಯ ನಿರ್ವಹಣೆಯಲ್ಲಿ ವಿಫಲರಾದರೆ, ಈ ಅಧಿಕಾರಿಗಳನ್ನೇ ಕರ್ತವ್ಯ ಲೋಪಕ್ಕೆ ಹೊಣೆಗಾರರನ್ನಾಗಿ ಮಾಡಲಾಗುವುದು.
ಪೌರಕಾರ್ಮಿಕರು ಕೇವಲ ಮುಖ್ಯ ರಸ್ತೆಗಳಲ್ಲಿ ಮಾತ್ರವಲ್ಲದೆ, ವಸತಿ ಪ್ರದೇಶಗಳು ಹಾಗೂ ಅಡ್ಡ ರಸ್ತೆಗಳಲ್ಲೂ ಕಸ ಗುಡಿಸುವಂತೆ ಸಹಾಯಕ ಪ್ರಧಾನ ವ್ಯವಸ್ಥಾಪಕರು ನಿಗಾ ವಹಿಸಬೇಕು.
ಆಗಸ್ಟ್ 15ರೊಳಗೆ ಬ್ಲಾಕ್ ಸ್ಪಾಟ್ ತೆರವಿಗೆ ಗಡುವು:
ಜುಲೈ 29 ರಂದು ನಡೆದ ವಿಚಾರಣೆಯಲ್ಲಿ ಪಾಲಿಕೆ ಆಯುಕ್ತರು ಪ್ರಗತಿ ವರದಿ ಸಲ್ಲಿಸಿದ್ದಾರೆ:
ಪೂರ್ವ ನಗರ ಪಾಲಿಕೆ: ಒಟ್ಟು 168 ಬ್ಲಾಕ್ ಸ್ಪಾಟ್ ಗಳ ಪೈಕಿ 50 ಅನ್ನು ಆಗಸ್ಟ್ 15, 2026 ರೊಳಗೆ ತೆರವುಗೊಳಿಸುವುದಾಗಿ ಆಯುಕ್ತ ರಮೇಶ್ ಭರವಸೆ ನೀಡಿದ್ದಾರೆ.
ಪಶ್ಚಿಮ ನಗರ ಪಾಲಿಕೆ: ಒಟ್ಟು 385 ಬ್ಲಾಕ್ ಸ್ಪಾಟ್ಗಳ ಪೈಕಿ 155 ಅನ್ನು ಈಗಾಗಲೇ ತೆರವುಗೊಳಿಸಿದ್ದು, ಉಳಿದಿರುವವುಗಳಲ್ಲಿ 150 ಬ್ಲಾಕ್ ಸ್ಪಾಟ್ಗಳನ್ನು ಆಗಸ್ಟ್ 15ರೊಳಗೆ ಮುಕ್ತಗೊಳಿಸುವುದಾಗಿ ಆಯುಕ್ತ ರಾಜೇಂದ್ರ ತಿಳಿಸಿದ್ದಾರೆ.
ಉತ್ತರ ನಗರ ಪಾಲಿಕೆ: ಒಟ್ಟು 268 ಬ್ಲಾಕ್ ಸ್ಪಾಟ್ಗಳ ಪೈಕಿ 171 ಅನ್ನು ಈಗಾಗಲೇ ತೆರವು ಮಾಡಿದ್ದು, ಇನ್ನುಳಿದವುಗಳಲ್ಲಿ ಕನಿಷ್ಠ 50 ಬ್ಲಾಕ್ ಸ್ಪಾಟ್ಗಳನ್ನು ಆಗಸ್ಟ್ 15ರ ಗಡುವಿನೊಳಗೆ ತೆರವು ಮಾಡಲಾಗುವುದು ಎಂದು ಆಯುಕ್ತ ಸುನೀಲ್ ಕುಮಾರ್ ಹೇಳಿಕೆ ನೀಡಿದ್ದಾರೆ.
ಜಿಪಿಎಸ್ ಅಳವಡಿಕೆ ಮತ್ತು ಬೃಹತ್ ತ್ಯಾಜ್ಯ ಉತ್ಪಾದಕರ ಸಮೀಕ್ಷೆ:
ಬಿಎಸ್ ಡಬ್ಲ್ಯೂಎಂಎಲ್ ಸಿಒಒ ರಮಾದೇವಿ ಅವರು, ಇಂಟೆಲ್ (Intel) ಕಂಪನಿಯ ನೆರವಿನೊಂದಿಗೆ ಕಸದ ವಾಹನಗಳಿಗೆ ಜಿಪಿಎಸ್ ಅಳವಡಿಸಲಾಗುತ್ತಿದೆ. ಆಗಸ್ಟ್ 15 ರೊಳಗೆ ಸಿ.ವಿ.ರಾಮನ್ ನಗರ ಮತ್ತು ಶಾಂತಿನಗರದಲ್ಲಿ 500 ವಾಹನಗಳಿಗೆ ಜಿಪಿಎಸ್ ಅಳವಡಿಸುವ ಗುರಿ ಹೊಂದಲಾಗಿದೆ. ಅಲ್ಲದೆ, ಸಮೀಕ್ಷೆಯ ಮೂಲಕ 5837 ಬೃಹತ್ ತ್ಯಾಜ್ಯ ಉತ್ಪಾದಕರನ್ನು ಗುರುತಿಸಲಾಗಿದ್ದು, 5 ಪಾಲಿಕೆಗಳಾದ್ಯಂತ 1000 ತ್ಯಾಜ್ಯ ಸಂಸ್ಕಾರಕಗಳನ್ನು ಸಕ್ರಿಯಗೊಳಿಸುವ ಭರವಸೆಯನ್ನು ಪ್ರಾಧಿಕಾರದ ಮುಂದೆ ನೀಡಿದ್ದಾರೆ.





















