ಬೆಂಗಳೂರು, ಜು.31 www.bengaluruwire.com: ನಾಡಪ್ರಭು ಕೆಂಪೇಗೌಡ ಲೇಔಟ್ನಲ್ಲಿ (NPKL) ಭೂಮಿ ಕಳೆದುಕೊಂಡ ರೈತರಿಗೆ ಪರಿಹಾರ ರೂಪದಲ್ಲಿ ನಿವೇಶನ ಹಂಚಿಕೆ ಮಾಡಲು ಬಿಡಿಎ (BDA) ಅಧಿಕಾರಿಯೊಬ್ಬರು ಬರೋಬ್ಬರಿ ಪ್ರತಿ ಚದರ ಅಡಿಗೆ ₹550 ಲಂಚ ಕೇಳಿರುವ ಆಡಿಯೋ ಕ್ಲಿಪಿಂಗ್ ಸದ್ಯ ಭಾರಿ ವೈರಲ್ ಆಗುತ್ತಿದೆ.
ಬಿಡಿಎ ಪಶ್ಚಿಮ ವಲಯದ ಎಇಇ (AEE) ಅಶೋಕ್ ಭಾಗಿ ಎಂಬುವವರೇ ರೈತರೊಬ್ಬರ ಬಳಿ ಲಂಚದ ಹಣಕ್ಕೆ ಬೇಡಿಕೆ ಇಟ್ಟಿರುವ ಅಧಿಕಾರಿ ಎಂದು ಗುರುತಿಸಲಾಗಿದೆ. ತಮ್ಮ ಜಮೀನು ನೀಡಿ ಪರಿಹಾರಕ್ಕಾಗಿ ಕಾಯುತ್ತಿರುವ ರೈತರೊಂದಿಗೆ ಅವರು ಫೋನ್ನಲ್ಲಿ ಲಂಚದ ಚೌಕಾಸಿ ಮಾಡಿರುವ ಆಡಿಯೋ ಈಗ ಬಯಲಾಗಿದೆ.
ಭೂ ಪರಿಹಾರಕ್ಕೆ ಲಂಚದ ಬೇಡಿಕೆ:
ನಾಡಪ್ರಭು ಕೆಂಪೇಗೌಡ ಬಡಾವಣೆ ನಿರ್ಮಾಣಕ್ಕಾಗಿ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ) ಈಗಾಗಲೇ ಸಾವಿರಾರು ಎಕರೆ ಭೂಮಿಯನ್ನು ರೈತರಿಂದ ಸ್ವಾಧೀನಪಡಿಸಿಕೊಂಡು ಬಡಾವಣೆ ನಿರ್ಮಿಸಿದೆ. ಈ ಸಂಬಂಧ ಹಲವು ಭೂವಿವಾದಗಳು ವಿವಿಧ ನ್ಯಾಯಾಲಯಗಳಲ್ಲಿ ಇಂದಿಗೂ ವಿಚಾರಣೆಯ ಹಂತದಲ್ಲಿವೆ.

ಇದೇ ವೇಳೆ, ನ್ಯಾಯಯುತವಾಗಿ ಭೂಮಿ ನೀಡಿದ ರೈತರು ಹಾಗೂ ಭೂಮಾಲೀಕರಿಗೆ ಬಿಡಿಎ ಅಭಿವೃದ್ಧಿಪಡಿಸಿದ ಜಾಗವನ್ನೇ ಭೂ ಪರಿಹಾರವಾಗಿ (ಪ್ರೋತ್ಸಾಹದಾಯಕ ನಿವೇಶನ) ನೀಡಬೇಕಿದೆ. ಈ ಕುರಿತು ವರದಿ ನೀಡಲು ಎಇಇ ಅಶೋಕ್ ಭಾಗಿ ಅವರು ಪ್ರತಿ ಚದರ ಅಡಿಗೆ ₹550 ರಂತೆ ಲಂಚ ನೀಡಬೇಕು ಎಂದು ಬೇಡಿಕೆ ಇಟ್ಟಿರುವ ಆಘಾತಕಾರಿ ವಿಚಾರ ಆಡಿಯೋ ಮೂಲಕ ಜಗಜ್ಜಾಹೀರಾಗಿದೆ.
ಆಯುಕ್ತ ಮಣಿವಣ್ಣನ್ ಅವರಿಂದ ನೋಟಿಸ್ ಜಾರಿ:
ಈ ಲಂಚದ ಆಡಿಯೋ ಕ್ಲಿಪಿಂಗ್ ದೂರಿನ ರೂಪದಲ್ಲಿ ವಾಟ್ಸಾಪ್ ಮೂಲಕ ಬಿಡಿಎ ಆಯುಕ್ತರಾದ ಮಣಿವಣ್ಣನ್ ಅವರ ಕೈಸೇರಿದೆ. ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಆಯುಕ್ತರು, ಜುಲೈ 28 ರಂದು ಎಇಇ ಅಶೋಕ್ ಭಾಗಿ ಅವರಿಗೆ ಕಾರಣ ಕೇಳಿ ನೋಟಿಸ್ ಜಾರಿ ಮಾಡಿದ್ದಾರೆ.
ಈ ಕುರಿತ ಅಧಿಕೃತ ದಾಖಲೆಯು ಬೆಂಗಳೂರು ವೈರ್’ಗೆ ಲಭ್ಯವಾಗಿದ್ದು, ಈ ಅಧಿಕೃತ ನೋಟಿಸ್ ಪ್ರತಿಯ ಪ್ರಕಾರ, ಜು.28 ರಂದು ನೀಡಿರುವ ನೋಟಿಸ್ ನಲ್ಲಿ, “ಮುಂದಿನ ಮೂರು ದಿನಗಳ ಒಳಗೆ ಈ ಬಗ್ಗೆ ಲಿಖಿತ ಸಮಜಾಯಿಷಿ ನೀಡುಬೇಕು” ಎಂದು ಆಯುಕ್ತರು ಖಡಕ್ ಸೂಚನೆ ನೀಡಿದ್ದಾರೆ. “ತಪ್ಪಿದ್ದಲ್ಲಿ, ತಮ್ಮ ವಿರುದ್ಧ ಏಕಪಕ್ಷೀಯವಾಗಿ ಶಿಸ್ತು ಕ್ರಮ ಕೈಗೊಂಡು ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದಿಂದ ಬಿಡುಗಡೆಗೊಳಿಸಿ ಮಾತೃ ಇಲಾಖೆಗೆ ಹಿಂದಿರುಗಿಸಲಾಗುವುದು” ಎಂದು ಎಚ್ಚರಿಕೆ ನೀಡಲಾಗಿದೆ.
ಅಲ್ಲದೆ, ಲಿಖಿತ ಸಮಜಾಯಿಷಿ ಸಲ್ಲಿಸುವವರೆಗೂ ಯಾವುದೇ ರೀತಿಯ ತೆರವು ಕಾರ್ಯಾಚರಣೆಯನ್ನು ಕೈಗೊಳ್ಳದಂತೆಯೂ ಅಧಿಕಾರಿಗೆ ಸೂಚಿಸಲಾಗಿದೆ. ಲಭ್ಯವಾಗಿದೆ.




















