ಬೆಂಗಳೂರು, ಜು.22 www.bengaluruwire.com: ರಾಜ್ಯದಲ್ಲಿ ಈ ಬಾರಿ ನಿರೀಕ್ಷಿತ ಪ್ರಮಾಣದಲ್ಲಿ ಮಳೆಯಾಗದ ಕಾರಣ ಜಲ ವಿದ್ಯುತ್ ಉತ್ಪಾದನೆಯಲ್ಲಿ ಭಾರಿ ಕುಸಿತವಾಗಿದೆ. ಇದರ ಬೆನ್ನಲ್ಲೇ ಎಚ್ಚೆತ್ತುಕೊಂಡಿರುವ ಇಂಧನ ಇಲಾಖೆ ಹಾಗೂ ಕರ್ನಾಟಕ ವಿದ್ಯುತ್ ನಿಗಮ ನಿಯಮಿತ (ಕೆಪಿಸಿಎಲ್), ವಿದ್ಯುತ್ ಅಭಾವವನ್ನು ತಪ್ಪಿಸಲು ಶಾಖೋತ್ಪನ್ನ ಕೇಂದ್ರಗಳಲ್ಲಿ ವಿದ್ಯುತ್ ಉತ್ಪಾದನೆಯನ್ನು ಗಣನೀಯವಾಗಿ ಹೆಚ್ಚಿಸಿವೆ.
ಕಳೆದ ವರ್ಷ ಜುಲೈ ತಿಂಗಳಲ್ಲಿ ಪ್ರತಿನಿತ್ಯ ಸರಾಸರಿ ಕೇವಲ 54.47 ದಶಲಕ್ಷ ಯೂನಿಟ್ ಶಾಖೋತ್ಪನ್ನ ವಿದ್ಯುತ್ ಉತ್ಪಾದನೆ ಮಾಡಲಾಗಿತ್ತು. ಆದರೆ ಈ ವರ್ಷ ಪರಿಸ್ಥಿತಿ ಭಿನ್ನವಾಗಿದ್ದು, ಜುಲೈ ತಿಂಗಳಲ್ಲಿ ಸರಾಸರಿ 84.34 ದಶಲಕ್ಷ ಯೂನಿಟ್ ಶಾಖೋತ್ಪನ್ನ ವಿದ್ಯುತ್ ಅನ್ನು ಯಶಸ್ವಿಯಾಗಿ ಉತ್ಪಾದಿಸಲಾಗುತ್ತಿದೆ. ಮುಂದಿನ ದಿನಗಳಲ್ಲಿ ಈ ಪ್ರಮಾಣವನ್ನು ಪ್ರತಿನಿತ್ಯ 100 ದಶಲಕ್ಷ ಯೂನಿಟ್ಗೆ ಹೆಚ್ಚಿಸಲು ಸಕಲ ಸಿದ್ಧತೆಗಳನ್ನು ಮಾಡಿಕೊಳ್ಳಲಾಗುತ್ತಿದೆ.
ಮುಕ್ತ ಮಾರುಕಟ್ಟೆ ಹೊರೆ ತಪ್ಪಿಸಿದ ಕೆಪಿಸಿಎಲ್:
ಜಲಾಶಯಗಳಲ್ಲಿ ನೀರಿನ ಮಟ್ಟ ಕಡಿಮೆಯಿರುವಾಗ ಸಹಜವಾಗಿ ವಿದ್ಯುತ್ ಪೂರೈಕೆಗೆ ಸಮಸ್ಯೆಯಾಗುತ್ತದೆ. ಇಂತಹ ಸಂದರ್ಭದಲ್ಲಿ ಮುಕ್ತ ಮಾರುಕಟ್ಟೆಯಿಂದ ದುಬಾರಿ ಬೆಲೆಗೆ ವಿದ್ಯುತ್ ಖರೀದಿಸುವುದು ಅನಿವಾರ್ಯವಾಗುತ್ತದೆ. ಇದರಿಂದ ಸರ್ಕಾರದ ಬೊಕ್ಕಸದ ಮೇಲೆ ತೀವ್ರ ಆರ್ಥಿಕ ಹೊರೆ ಬೀಳುವುದನ್ನು ತಪ್ಪಿಸುವ ನಿಟ್ಟಿನಲ್ಲಿ, ರಾಜ್ಯದಲ್ಲೇ ಇರುವ ಶಾಖೋತ್ಪನ್ನ ಸ್ಥಾವರಗಳನ್ನು ಪೂರ್ಣ ಪ್ರಮಾಣದಲ್ಲಿ ಬಳಸಿಕೊಳ್ಳಲಾಗುತ್ತಿದೆ.

ವಿವಿಧ ಸ್ಥಾವರಗಳಲ್ಲಿನ ಉತ್ಪಾದನಾ ವಿವರ:
ರಾಜ್ಯದ ಮೂರು ಪ್ರಮುಖ ಶಾಖೋತ್ಪನ್ನ ವಿದ್ಯುತ್ ಸ್ಥಾವರಗಳಲ್ಲಿ ಉತ್ಪಾದನೆ ಗಣನೀಯವಾಗಿ ಏರಿಕೆಯಾಗಿದೆ.
ಬಳ್ಳಾರಿ ಶಾಖೋತ್ಪನ್ನ ವಿದ್ಯುತ್ ಸ್ಥಾವರ (BTPS): ಈ ಸ್ಥಾವರದಲ್ಲಿ ಪ್ರಸ್ತುತ ಅತಿ ಹೆಚ್ಚು ಅಂದರೆ 33.64 ದಶಲಕ್ಷ ಯೂನಿಟ್ ವಿದ್ಯುತ್ ಉತ್ಪಾದನೆಯಾಗುತ್ತಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ ಇಲ್ಲಿ ಸರಾಸರಿ 25.35 ದಶಲಕ್ಷ ಯೂನಿಟ್ ಉತ್ಪಾದನೆಯಾಗಿತ್ತು.
ಯರಮರಸ್ ಶಾಖೋತ್ಪನ್ನ ಸ್ಥಾವರ (YTPS): ಕಳೆದ ವರ್ಷ ಜುಲೈನಲ್ಲಿ 16 ದಶಲಕ್ಷ ಯೂನಿಟ್ ಉತ್ಪಾದನೆಯಾಗಿದ್ದ ಈ ಘಟಕದಲ್ಲಿ, ಈಗ ಸರಾಸರಿ 26.25 ದಶಲಕ್ಷ ಯೂನಿಟ್ ವಿದ್ಯುತ್ ಉತ್ಪಾದನೆ ಮಾಡಲಾಗುತ್ತಿದೆ.
ರಾಯಚೂರು ಶಾಖೋತ್ಪನ್ನ ವಿದ್ಯುತ್ ಸ್ಥಾವರ: (RTPS): ಕಳೆದ ವರ್ಷ ಜುಲೈ ತಿಂಗಳಲ್ಲಿ ಕೇವಲ 13.12 ದಶಲಕ್ಷ ಯೂನಿಟ್ ವಿದ್ಯುತ್ ಉತ್ಪಾದನೆಯಾಗಿದ್ದರೆ, ಈ ವರ್ಷ ಇದು 24.45 ದಶಲಕ್ಷ ಯೂನಿಟ್ಗೆ ಏರಿಕೆಯಾಗಿದೆ.
20 ದಿನಗಳಿಗೆ ಸಾಕಾಗುವಷ್ಟು ಕಲ್ಲಿದ್ದಲು ಸಂಗ್ರಹದ ಗುರಿ:
ಹೆಚ್ಚುವರಿ ವಿದ್ಯುತ್ ಉತ್ಪಾದನೆಗೆ ಅಡೆತಡೆಯಾಗದಂತೆ ಕಲ್ಲಿದ್ದಲು ಸಂಗ್ರಹವನ್ನು ಹೆಚ್ಚಿಸಲಾಗಿದೆ. ಕಳೆದ ವರ್ಷ ಈ ಸಮಯದಲ್ಲಿ ಕೇವಲ 12 ದಿನಗಳಿಗೆ ಬೇಕಾಗುವಷ್ಟು ಕಲ್ಲಿದ್ದಲು ಮಾತ್ರ ದಾಸ್ತಾನಿತ್ತು. ಆದರೆ, ಪ್ರಸ್ತುತ 15 ದಿನಗಳಿಗೆ ಸಾಕಾಗುವಷ್ಟು ಕಲ್ಲಿದ್ದಲು ಸಂಗ್ರಹವಿದೆ. ಇದನ್ನು 20 ದಿನಗಳಿಗೆ ಹೆಚ್ಚಿಸುವ ಗುರಿ ಹೊಂದಲಾಗಿದ್ದು, ಪ್ರತಿನಿತ್ಯ 17 ರಿಂದ 18 ರೇಕ್ ಕಲ್ಲಿದ್ದಲನ್ನು ನಿರಂತರವಾಗಿ ತರಿಸಿಕೊಳ್ಳಲಾಗುತ್ತಿದೆ.
ಸಚಿವರು ಹಾಗೂ ಅಧಿಕಾರಿಗಳ ಪ್ರತಿಕ್ರಿಯೆ:
“ಮಳೆ ಕೊರತೆಯಿಂದ ಜಲ ವಿದ್ಯುತ್ ಉತ್ಪಾದನೆ ಕುಂಠಿತವಾಗಿರುವ ಹಿನ್ನೆಲೆಯಲ್ಲಿ ಶಾಖೋತ್ಪನ್ನ ವಿದ್ಯುತ್ ಉತ್ಪಾದನೆ ಹೆಚ್ಚಿಸಲಾಗಿದೆ. ಶಾಖೋತ್ಪನ್ನ ವಿದ್ಯುತ್ ಸ್ಥಾವರಗಳನ್ನು ಸಮರ್ಪಕವಾಗಿ ನಿರ್ವಹಿಸುತ್ತಿರುವುದರ ಜತೆಗೆ ಹೆಚ್ಚುವರಿ ಕಲ್ಲಿದ್ದಲು ಸಂಗ್ರಹಿಸಲಾಗುತ್ತಿದೆ. ಸಮರ್ಪಕ ವಿದ್ಯುತ್ ಪೂರೈಕೆಗೆ ಎಲ್ಲಾ ಕ್ರಮ ವಹಿಸಲಾಗುತ್ತಿದೆ.”
– ಕೆ.ಜೆ.ಜಾರ್ಜ್, ಇಂಧನ ಮತ್ತು ಪ್ರವಾಸೋದ್ಯಮ ಸಚಿವರು
”ಮುಖ್ಯಮಂತ್ರಿಗಳು ಹಾಗೂ ಇಂಧನ ಸಚಿವರ ಸೂಚನೆಯಂತೆ ಜಲ ವಿದ್ಯುತ್ ಕೊರತೆಯನ್ನು ನೀಗಿಸಲು ಶಾಖೋತ್ಪನ್ನ ವಿದ್ಯುತ್ ಸ್ಥಾವರಗಳಲ್ಲಿ ಪ್ರತಿನಿತ್ಯ 100 ದಶಲಕ್ಷ ಯೂನಿಟ್ ವಿದ್ಯುತ್ ಉತ್ಪಾದಿಸಲು ಘಟಕಗಳನ್ನು ಶೇ. 100ರಷ್ಟು ಸನ್ನದ್ಧಗೊಳಿಸಲಾಗುತ್ತಿದೆ.”
– ರಾಜೇಂದ್ರ ಚೋಳನ್ ಪಿ., ವ್ಯವಸ್ಥಾಪಕ ನಿರ್ದೇಶಕರು, ಕೆಪಿಸಿಎಲ್


















