ಬೆಂಗಳೂರು, ಜು.22 www.bengaluruwire.com: ಜಾಗತಿಕ ಮಟ್ಟದಲ್ಲಿ ತೀವ್ರಗೊಳ್ಳುತ್ತಿರುವ ‘ಎಲ್ ನಿನೋ’ (El Niño) ಹವಾಮಾನ ವೈಪರೀತ್ಯದ ಪರಿಣಾಮವಾಗಿ ಉಂಟಾಗಬಹುದಾದ ತೀವ್ರ ತಾಪಮಾನ ಏರಿಕೆ ಹಾಗೂ ಬರದ ಪರಿಸ್ಥಿತಿಯನ್ನು ಸಮರ್ಥವಾಗಿ ಎದುರಿಸಲು ಕರ್ನಾಟಕ ಸರ್ಕಾರವು ಸಮಗ್ರ ಮತ್ತು ದೂರದೃಷ್ಟಿಯ ಬೃಹತ್ ಕಾರ್ಯತಂತ್ರವನ್ನು ಸಿದ್ಧಪಡಿಸಿದೆ.
ಮುಂಬರುವ ದಿನಗಳಲ್ಲಿ ಎದುರಾಗಬಹುದಾದ ಜಲಕ್ಷಾಮವನ್ನು ತಡೆಯಲು ಸರ್ಕಾರ ಈಗಿನಿಂದಲೇ ಕಟ್ಟುನಿಟ್ಟಿನ ಕ್ರಮಗಳಿಗೆ ಮುಂದಾಗಿದೆ.
ಏನಿದು ಎಲ್ ನಿನೋ? ಕರುನಾಡಿಗೆ ಯಾಕೆ ಆತಂಕ?:
ದಕ್ಷಿಣ ಪೆಸಿಫಿಕ್ ಮಹಾಸಾಗರದ ಕೇಂದ್ರ ಮತ್ತು ಪೂರ್ವ ಭಾಗಗಳಲ್ಲಿ ಸಮುದ್ರದ ಮೇಲ್ಮೈ ನೀರು ಸಾಮಾನ್ಯಕ್ಕಿಂತ ಹೆಚ್ಚು ಕಾಯುವ ವಿದ್ಯಮಾನವೇ ‘ಎಲ್ ನಿನೋ’. ಇದರಿಂದ ಜಾಗತಿಕ ಗಾಳಿಯ ಮಾದರಿ ಹಾಗೂ ಮಳೆಯ ಪ್ರಮಾಣದಲ್ಲಿ ತೀವ್ರ ಏರುಪೇರಾಗುತ್ತದೆ.

ಕಳೆದ 150 ವರ್ಷಗಳಲ್ಲೇ ಅತ್ಯಂತ ಪ್ರಬಲ ಎಲ್ ನಿನೋ ಆವರಿಸುವ ಸಾಧ್ಯತೆಯಿದೆ ಎಂದು ತಜ್ಞರು ಎಚ್ಚರಿಸಿದ್ದಾರೆ. ಭಾರತೀಯ ರಾಷ್ಟ್ರೀಯ ಸಾಗರ ಮಾಹಿತಿ ಸೇವೆಗಳ ಕೇಂದ್ರದ (INCOIS) ವರದಿ ಪ್ರಕಾರ, ಈ ಹವಾಮಾನ ವೈಪರೀತ್ಯವು 2027ರ ಮೇ ತಿಂಗಳವರೆಗೆ ಮುಂದುವರಿಯುವ ಸಾಧ್ಯತೆಯಿದೆ. ಇದರ ನೇರ ಪರಿಣಾಮವಾಗಿ ಕರ್ನಾಟಕದಲ್ಲಿ ನೈಋತ್ಯ ಮುಂಗಾರು ಮಳೆ ಕ್ಷೀಣಿಸಿ, ತೀವ್ರ ತಾಪಮಾನ ಮತ್ತು ಬರದ ಛಾಯೆ ಆವರಿಸುವ ಭೀತಿ ಎದುರಾಗಿದೆ.
ಸರ್ಕಾರದ ಪ್ರಮುಖ ರಕ್ಷಣಾತ್ಮಕ ಕಾರ್ಯಕ್ರಮಗಳು:
ಮುಂಬರುವ ವಿಪತ್ತನ್ನು ತಡೆಯಲು ರಾಜ್ಯ ಸರ್ಕಾರವು ಹಲವು ಮಹತ್ವದ ಯೋಜನೆಗಳನ್ನು ಜಾರಿಗೆ ತರುತ್ತಿದೆ.
ಬೋರ್‌ವೆಲ್ ಮರುಪೂರಣ ಮತ್ತು ಡಿಜಿಟಲೀಕರಣ: ರಾಜ್ಯದಲ್ಲಿರುವ ಸುಮಾರು 37 ಲಕ್ಷ ಬೋರ್‌ವೆಲ್‌ಗಳ ಸಮಗ್ರ ಮಾಹಿತಿಯನ್ನು KSRSAC ನ K-GIS ಪೋರ್ಟಲ್‌ನಲ್ಲಿ ಡಿಜಿಟಲ್ ನೋಂದಣಿ ಮಾಡಲಾಗುತ್ತಿದೆ. ಬೋರ್‌ವೆಲ್‌ಗಳ ತಾಂತ್ರಿಕ ಪರಿಶೀಲನೆ, ರಿಪೇರಿ ಮತ್ತು ಮರುಪೂರಣಕ್ಕಾಗಿ (Recharge) ವಿಶೇಷ ತರಬೇತಿ ನೀಡಲಾಗುತ್ತಿದ್ದು, ಪ್ರತಿ 15 ದಿನಗಳಿಗೊಮ್ಮೆ ಪ್ರಗತಿ ಪರಿಶೀಲನೆ ನಡೆಯಲಿದೆ.
ಹೊಸ ಬೋರ್‌ವೆಲ್‌ಗಳಿಗೆ ಬ್ರೇಕ್: ಅಂತರ್ಜಲ ತೀವ್ರವಾಗಿ ಕುಸಿದಿರುವ (ಅತಿ ಹೆಚ್ಚು ಬಳಕೆಯಾದ) ವಲಯಗಳಲ್ಲಿ ಹೊಸದಾಗಿ ಬೋರ್‌ವೆಲ್ ಕೊರೆಯುವುದನ್ನು ಸಂಪೂರ್ಣವಾಗಿ ನಿರ್ಬಂಧಿಸಲಾಗಿದೆ.
ಜಲ ಆಯವ್ಯಯ (Water Budgeting): ಸ್ಥಳೀಯ ಸಂಸ್ಥೆಗಳ ಮಟ್ಟದಲ್ಲಿ ನೀರಿನ ಸಮರ್ಪಕ ನಿರ್ವಹಣೆಗಾಗಿ ‘ವಾಟರ್ ಬಜೆಟಿಂಗ್’ ಜಾರಿಗೆ ತರಲಾಗುತ್ತಿದೆ.
ತ್ಯಾಜ್ಯ ನೀರು ಮರುಬಳಕೆ: ಸಂಸ್ಕರಿಸಿದ ತ್ಯಾಜ್ಯ ನೀರನ್ನು ಕೈಗಾರಿಕೆಗಳು, ಉದ್ಯಾನವನಗಳು ಹಾಗೂ ನಿರ್ಮಾಣ ಕಾಮಗಾರಿಗಳಿಗೆ ಬಳಸುವ ವ್ಯವಸ್ಥೆಯನ್ನು ಕಡ್ಡಾಯಗೊಳಿಸಲಾಗುತ್ತಿದೆ.
ರೈತರಿಗೆ ಸರ್ಕಾರದ ಸಲಹೆ: ಬರನಿರೋಧಕ ಬೆಳೆಗಳಿಗೆ ಒತ್ತು:
ಮಳೆಯ ಕೊರತೆಯಿಂದ ಕೃಷಿ ನಷ್ಟವನ್ನು ತಪ್ಪಿಸಲು, ಕಡಿಮೆ ನೀರು ಬೇಡುವ ಹಾಗೂ ತೀವ್ರ ಶಾಖವನ್ನು ತಡೆಯಬಲ್ಲ ಬೆಳೆಗಳನ್ನು ಬೆಳೆಯಲು ಕೃಷಿ ಇಲಾಖೆ ರೈತರಿಗೆ ಉತ್ತೇಜನ ನೀಡುತ್ತಿದೆ.
ಸಿರಿಧಾನ್ಯಗಳು: ರಾಗಿ, ಜೋಳ, ಶೇಂಗಾ (ಕೇವಲ 250–400 ಮಿ.ಮೀ. ಮಳೆಯಲ್ಲಿ ಬೆಳೆಯಬಲ್ಲವು).
ದ್ವಿದಳ ಧಾನ್ಯಗಳು: ಕಡಲೆ, ತೊಗರಿ, ಅಲಸಂದಿ (ಆಳಕ್ಕೆ ಬೇರು ಬಿಟ್ಟು ತೇವಾಂಶ ಹೀರುವ ಜೊತೆಗೆ ಮಣ್ಣಿನ ಸಾರ ಹೆಚ್ಚಿಸುತ್ತವೆ).
ಎಣ್ಣೆಕಾಳುಗಳು: ಸೂರ್ಯಕಾಂತಿ, ಎಳ್ಳು, ಹುಚ್ಚೆಳ್ಳು (ಒಣ ಹವಾಮಾನವನ್ನು ಸಮರ್ಥವಾಗಿ ತಡೆಯಬಲ್ಲವು).
ಸಾರ್ವಜನಿಕರಿಗೆ ಮುಖ್ಯ ಕಾರ್ಯದರ್ಶಿಗಳ ಕರೆ
: “ಹವಾಮಾನ ವೈಪರೀತ್ಯದ ಈ ಕಠಿಣ ಪರಿಸ್ಥಿತಿಯನ್ನು ಯಶಸ್ವಿಯಾಗಿ ಎದುರಿಸಲು ಪ್ರತಿಯೊಬ್ಬ ನಾಗರಿಕರೂ ನೀರಿನ ಮಿತಬಳಕೆ ಮಾಡಬೇಕು. ಇಂಧನ ಬಳಕೆಯನ್ನು ಮಿತಿಗೊಳಿಸಿ, ಸರ್ಕಾರದ ಈ ಬೃಹತ್ ಜಲ ಸಂರಕ್ಷಣಾ ಅಭಿಯಾನಕ್ಕೆ ಸಂಪೂರ್ಣ ಸಹಕಾರ ನೀಡಬೇಕು” ಎಂದು ಸರ್ಕಾರದ ಮುಖ್ಯ ಕಾರ್ಯದರ್ಶಿ ಡಾ. ಶಾಲಿನಿ ರಜನೀಶ್ ಅವರು ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ. (Image Credit: NASA)



















