ಬೆಂಗಳೂರು, ಮೇ.13 www.bengaluruwire.com: ರಾಜ್ಯ ವಾಣಿಜ್ಯ ತೆರಿಗೆ ಇಲಾಖೆಯು ರಾಜಧಾನಿಯಲ್ಲಿ ಕಾರ್ಯಾಚರಿಸುತ್ತಿದ್ದ ಬೃಹತ್ ನಕಲಿ ಇನ್‌ಪುಟ್ ಟ್ಯಾಕ್ಸ್ ಕ್ರೆಡಿಟ್ (ITC) ಜಾಲವನ್ನು ಭೇದಿಸುವಲ್ಲಿ ಯಶಸ್ವಿಯಾಗಿದೆ.
ಸುಮಾರು ₹2,384 ಕೋಟಿ ಮೊತ್ತದ ನಕಲಿ ವಹಿವಾಟು ನಡೆಸಿ ಸರ್ಕಾರದ ಬೊಕ್ಕಸಕ್ಕೆ ₹420 ಕೋಟಿಗೂ ಅಧಿಕ ನಷ್ಟ ಉಂಟುಮಾಡಿದ ಆರೋಪದ ಮೇಲೆ ಇಬ್ಬರನ್ನು ಬಂಧಿಸಲಾಗಿದೆ.
ಸುಸಂಘಟಿತ ಜಾಲದ ಪತ್ತೆ:
ವಾಣಿಜ್ಯ ತೆರಿಗೆ ಇಲಾಖೆಯ ಜಾರಿ ವಿಭಾಗ (ದಕ್ಷಿಣ ವಲಯ) ಹಾಗೂ ಸೇವಾ ವಿಶ್ಲೇಷಣೆ ಮತ್ತು ಗುಪ್ತಚರ ವಿಭಾಗದ ಅಧಿಕಾರಿಗಳು ನಡೆಸಿದ ಜಂಟಿ ಕಾರ್ಯಾಚರಣೆಯಲ್ಲಿ ಈ ಹಗರಣ ಬೆಳಕಿಗೆ ಬಂದಿದೆ. ಟಂಗ್‌ಸ್ಟನ್ ಕಾರ್ಬೈಡ್ ಸ್ಕ್ರಾಪ್ ಮತ್ತು ಇ-ವೇಸ್ಟ್ ವಹಿವಾಟಿನ ಹೆಸರಿನಲ್ಲಿ ಯಾವುದೇ ಸರಕು ಸರಬರಾಜು ಮಾಡದೆ ಕೇವಲ ಕಾಗದದ ಮೇಲೆ ಬಿಲ್‌ಗಳನ್ನು ಸೃಷ್ಟಿಸಿ ಅಕ್ರಮವಾಗಿ ಐಟಿಸಿ ಪಡೆಯಲಾಗುತ್ತಿತ್ತು.

ಬಂಧಿತರು ಯಾರು?:
ನಾಯಕಂಡಹಳ್ಳಿಯ M/s. SKS Traders ಮಾಲೀಕ ಸಲೀಮುಲ್ಲಾ ಬೇಗ್ (59) ಮತ್ತು M/s. KH E-Waste Recycler ನ ಹಸೇನ್ ಬೇಗ್ (35) ಬಂಧಿತ ಆರೋಪಿಗಳು. ಸಲೀಮುಲ್ಲಾ ಬೇಗ್ 72 ನಕಲಿ ಸಂಸ್ಥೆಗಳ ಮೂಲಕ ₹382 ಕೋಟಿ ಹಾಗೂ ಹಸೇನ್ ಬೇಗ್ 55 ನಕಲಿ ಸಂಸ್ಥೆಗಳ ಮೂಲಕ ₹38 ಕೋಟಿ ತೆರಿಗೆ ವಂಚನೆ ಮಾಡಿರುವುದು ತನಿಖೆಯಲ್ಲಿ ದೃಢಪಟ್ಟಿದೆ.
ಅಸಹಜ ವಹಿವಾಟು:
M/s. SKS Traders ಸಂಸ್ಥೆಯ ವಹಿವಾಟು ಕೇವಲ ಮೂರು ವರ್ಷಗಳಲ್ಲಿ ₹50 ಕೋಟಿಯಿಂದ ₹945 ಕೋಟಿಗೆ ಏರಿಕೆಯಾಗಿತ್ತು. ಯಾವುದೇ ಮೂಲಸೌಕರ್ಯ ಅಥವಾ ಸಾರಿಗೆ ವ್ಯವಸ್ಥೆ ಇಲ್ಲದೆ ಇಷ್ಟೊಂದು ದೊಡ್ಡ ಮಟ್ಟದ ವಹಿವಾಟು ನಡೆಸಿರುವುದು ಅಧಿಕಾರಿಗಳ ಸಂಶಯಕ್ಕೆ ಕಾರಣವಾಗಿತ್ತು. ತನಿಖೆಯ ವೇಳೆ ಒಟ್ಟು 127 ನಕಲಿ ಸಂಸ್ಥೆಗಳ ಅಸ್ತಿತ್ವ ಪತ್ತೆಯಾಗಿದೆ.
ತಂತ್ರಜ್ಞಾನದ ಬಳಕೆ:
ಆಧುನಿಕ ಡೇಟಾ ಅನಾಲಿಟಿಕ್ಸ್, ನೆಟ್‌ವರ್ಕ್ ಮ್ಯಾಪಿಂಗ್ ಮತ್ತು ಇ-ವೇ ಬಿಲ್ ವಿಶ್ಲೇಷಣೆಯ ಮೂಲಕ ಇಲಾಖೆಯು ಈ ಬೇನಾಮಿ ಜಾಲವನ್ನು ಪತ್ತೆಹಚ್ಚಿದೆ. ಹೆಚ್ಚುವರಿ ಆಯುಕ್ತರಾದ ಕನಿಷ್ಕ ಮತ್ತು ಹೆಚ್ಚುವರಿ ಆಯುಕ್ತರಾದ ಅಪರ್ಣಾ ಅವರ ನೇತೃತ್ವದಲ್ಲಿ ಈ ಕಾರ್ಯಾಚರಣೆ ನಡೆದಿದೆ. ವಂಚನೆಗೆ ಸಂಬಂಧಿಸಿದಂತೆ ಆಸ್ತಿ ಜಪ್ತಿ ಮತ್ತು ಇತರ ಸಹಚರರ ಪತ್ತೆ ಕಾರ್ಯ ಮುಂದುವರಿದಿದೆ.


















