ಬೆಂಗಳೂರು, ಮಾ.27 www.bengaluruwire.com: ನಗರದ ಆಡಳಿತಾತ್ಮಕ ಇತಿಹಾಸದಲ್ಲಿ ಹೊಸ ಅಧ್ಯಾಯ ಆರಂಭವಾಗಿದೆ. ಬಿಬಿಎಂಪಿಯನ್ನು ಮರುಸಂಘಟಿಸಿ ‘ಗ್ರೇಟರ್ ಬೆಂಗಳೂರು ಪ್ರಾಧಿಕಾರ’ (GBA) ರಚನೆಯಾದ ನಂತರ, ನೂತನವಾಗಿ ಅಸ್ತಿತ್ವಕ್ಕೆ ಬಂದಿರುವ ಬೆಂಗಳೂರು ಪೂರ್ವ ನಗರ ಪಾಲಿಕೆಯ ಮೊದಲ ಬಜೆಟ್ ಶುಕ್ರವಾರ ಮಂಡನೆಯಾಯಿತು.
ಜಿಬಿಎ ಮುಖ್ಯ ಆಯುಕ್ತ ಹಾಗೂ ಆಡಳಿತಾಧಿಕಾರಿ ಮಹೇಶ್ವರ್ ರಾವ್ ಅವರ ಉಪಸ್ಥಿತಿಯಲ್ಲಿ, ಪಾಲಿಕೆ ಆಯುಕ್ತ ಡಿ.ಎಸ್. ರಮೇಶ್ ಅವರು ಮಹದೇವಪುರದಲ್ಲಿ ₹3,889 ಕೋಟಿ ಮೊತ್ತದ ಜನಸ್ನೇಹಿ ಆಯವ್ಯಯವನ್ನು ಮಂಡಿಸಿದರು.
ಮನೆ ಖರೀದಿ ಹಾಗೂ ಶಿಕ್ಷಣಕ್ಕೆ ಬಂಪರ್ ಕೊಡುಗೆ:
ಸಮಾಜದ ದುರ್ಬಲ ವರ್ಗಗಳ ಏಳಿಗೆಗಾಗಿ ಬಜೆಟ್‌ನಲ್ಲಿ ಶೇ.7 ರಷ್ಟು (₹221 ಕೋಟಿ) ಅನುದಾನ ಮೀಸಲಿಡಲಾಗಿದೆ.

ವಸತಿ ಭಾಗ್ಯ: ಎಸ್‌ಸಿ, ಎಸ್‌ಟಿ ಹಾಗೂ ಅಲ್ಪಸಂಖ್ಯಾತ ವರ್ಗದವರಿಗೆ 1 ಕೊಠಡಿ, ಹಾಲು ಮತ್ತು ಅಡುಗೆಮನೆಯಿರುವ ಮನೆ ಖರೀದಿಸಲು ₹5 ಲಕ್ಷ ಸಹಾಯಧನ ಘೋಷಿಸಲಾಗಿದೆ.
ಡಿಜಿಟಲ್ ಶಿಕ್ಷಣ: 2026-27ನೇ ಸಾಲಿನ ವಿದ್ಯಾರ್ಥಿಗಳಿಗೆ ಉಚಿತ ಲ್ಯಾಪ್‌ಟಾಪ್ ವಿತರಣೆ ಹಾಗೂ ವಿದೇಶಿ ವಿದ್ಯಾಭ್ಯಾಸಕ್ಕೆ ವಿಶೇಷ ಪ್ರೋತ್ಸಾಹ ಧನ ನೀಡಲು ನಿರ್ಧರಿಸಲಾಗಿದೆ.
ಮೂಲಸೌಕರ್ಯ: ಟನಲ್ ಹಾಗೂ ಫ್ಲೈಓವರ್‌ಗಳಿಗೆ ಆದ್ಯತೆ:
ಪೂರ್ವ ಬೆಂಗಳೂರಿನ ಸಂಚಾರ ದಟ್ಟಣೆ ನಿಯಂತ್ರಿಸಲು ₹450 ಕೋಟಿ ವೆಚ್ಚದಲ್ಲಿ ರಸ್ತೆ, ಟನಲ್ ಹಾಗೂ ಫ್ಲೈಓವರ್‌ಗಳನ್ನು ನಿರ್ಮಿಸಲಾಗುವುದು. ರಸ್ತೆ ವಿಸ್ತರಣೆಗಾಗಿ 14 ಎಕರೆ ಭೂಸ್ವಾಧೀನ ಪ್ರಕ್ರಿಯೆಗೆ ₹510 ಕೋಟಿ ಮೀಸಲಿಡಲಾಗಿದೆ. ಅಲ್ಲದೆ, 100 ಕಿಮೀ ಉದ್ದದ ಸ್ಮಾರ್ಟ್ ಪಾದಚಾರಿ ಮಾರ್ಗ ನಿರ್ಮಾಣದ ಗುರಿ ಹೊಂದಲಾಗಿದೆ ಎಂದು ಪಾಲಿಕೆ ಆಯುಕ್ತ ಡಿ.ಎಸ್. ರಮೇಶ್ ತಮ್ಮ ಬಜೆಟ್ ಭಾಷಣದಲ್ಲಿ ತಿಳಿಸಿದರು.
ಮಹಿಳಾ ಸಬಲೀಕರಣ ಹಾಗೂ ಕಾರ್ಮಿಕರ ಕ್ಷೇಮ
ಇ-ಸ್ಕೂಟರ್ ಉಡುಗೊರೆ: ಉದ್ಯೋಗಸ್ಥ ಮಹಿಳೆಯರಿಗೆ ಸಂಚಾರ ಸುಗಮಗೊಳಿಸಲು ಉಚಿತ ಇ-ಸ್ಕೂಟರ್ ವಿತರಣೆ.
ಪೌರಕಾರ್ಮಿಕರ ಖಾಯಂ: 1330 ಪೌರಕಾರ್ಮಿಕರನ್ನು ಸೇವೆಯಲ್ಲಿ ಖಾಯಂಗೊಳಿಸುವ ಐತಿಹಾಸಿಕ ತೀರ್ಮಾನ ಕೈಗೊಳ್ಳಲಾಗಿದೆ.
ಆರೋಗ್ಯ ರಕ್ಷಣೆ: 1605 ಕಾರ್ಮಿಕರಿಗೆ ವಿಶೇಷ ಆರೋಗ್ಯ ವಿಮಾ ಯೋಜನೆ ಜಾರಿಗೆ ತರಲಾಗಿದೆ.
ಡಿಜಿಟಲ್ ಆಡಳಿತದತ್ತ ಹೆಜ್ಜೆ:
ಆಡಳಿತದಲ್ಲಿ ಪಾರದರ್ಶಕತೆ ತರಲು 4.5 ಲಕ್ಷ ಖಾತೆಗಳನ್ನು ಡಿಜಿಟಲೀಕರಣಗೊಳಿಸಲಾಗುತ್ತಿದೆ. ಇ-ಖಾತಾ, ಬ್ಲಾಕ್‌ಚೈನ್ ತಂತ್ರಜ್ಞಾನ ಮತ್ತು ಎಐ (AI) ಆಧಾರಿತ ಸಿಬ್ಬಂದಿ ಹಾಜರಾತಿ ವ್ಯವಸ್ಥೆಯನ್ನು ಜಾರಿಗೆ ತರಲಾಗುವುದು. ಆಸ್ತಿ ತೆರಿಗೆಯನ್ನು ಬಲಪಡಿಸುವ ಮೂಲಕ ₹150 ಕೋಟಿ ಹೆಚ್ಚುವರಿ ಆದಾಯದ ಗುರಿ ಹಾಕಿಕೊಳ್ಳಲಾಗಿದೆ.
“ಪೂರ್ವ ವಲಯವು ಅತ್ಯಂತ ವೇಗವಾಗಿ ಬೆಳೆಯುತ್ತಿದ್ದು, ಇಲ್ಲಿನ ಸಂಚಾರ ದಟ್ಟಣೆ ಮತ್ತು ಕೆರೆಗಳ ಪುನಶ್ಚೇತನಕ್ಕೆ ನಾವು ಹೆಚ್ಚಿನ ಆದ್ಯತೆ ನೀಡಿದ್ದೇವೆ.”
— ಡಿ.ಎಸ್. ರಮೇಶ್, ಆಯುಕ್ತರು, ಪೂರ್ವ ನಗರ ಪಾಲಿಕೆ.























