ಬೆಂಗಳೂರು, ಸೆ.10 www.bengaluruwire.com : : ಗ್ರೇಟರ್ ಬೆಂಗಳೂರು ಪ್ರಾಧಿಕಾರ (GBA) ವ್ಯಾಪ್ತಿಯಲ್ಲಿ, 1200 ಚದರ ಅಡಿ ವರೆಗಿನ ನಿವೇಶನದಲ್ಲಿ ನಿರ್ಮಿಸುವ ಕೆಲವು ವರ್ಗದ ಕಟ್ಟಡಗಳಿಗೆ ಸ್ವಾಧೀನಾನುಭವ ಪ್ರಮಾಣಪತ್ರ (Occupancy Certificate – OC) ಪಡೆಯುವುದರಿಂದ ವಿನಾಯಿತಿ ನೀಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ಸರ್ಕಾರದ ಈ ನಿರ್ಧಾರವು ಸಾರ್ವಜನಿಕರಿಗೆ ಸಾಕಷ್ಟು ಅನುಕೂಲವಾಗಲಿದೆ.
ಆದೇಶದ ಪ್ರಮುಖಾಂಶಗಳು ಏನು:
* ಯಾವುದಕ್ಕೆ ವಿನಾಯಿತಿ?: 1200 ಚದರ ಅಡಿ (111.48 ಚದರ ಮೀಟರ್) ವಿಸ್ತೀರ್ಣದವರೆಗಿನ ನಿವೇಶನಗಳಲ್ಲಿ ನಿರ್ಮಿಸುವ ನೆಲ + 2 ಅಂತಸ್ತು ಅಥವಾ ಸ್ಟಿಲ್ಟ್ + 3 ಅಂತಸ್ತಿನವರೆಗಿನ ವಸತಿ ಕಟ್ಟಡಗಳಿಗೆ ಈ ವಿನಾಯಿತಿ ಅನ್ವಯಿಸುತ್ತದೆ.
* ಕಾಯ್ದೆಯ ಅಧಿಕಾರ: ಗ್ರೇಟರ್ ಬೆಂಗಳೂರು ಆಡಳಿತ ಅಧಿನಿಯಮ, 2024ರ ಕಲಂ 241(7)ರ ಅಡಿಯಲ್ಲಿ ಸರ್ಕಾರಕ್ಕೆ ಪ್ರದತ್ತವಾಗಿರುವ ಅಧಿಕಾರವನ್ನು ಬಳಸಿಕೊಂಡು ಈ ಆದೇಶವನ್ನು ಹೊರಡಿಸಲಾಗಿದೆ. ಈ ಕಾಯಿದೆಯ ಪ್ರಕಾರ, ಸರ್ಕಾರವು ಸ್ವಾಧೀನಾನುಭವ ಪ್ರಮಾಣಪತ್ರದಿಂದ ವಿನಾಯಿತಿ ನೀಡಬಹುದಾ ಕಟ್ಟಡಗಳ ವರ್ಗವನ್ನು ತಿಳಿಸಲು ಅವಕಾಶವಿದೆ.


ಸರ್ಕಾರದ ನಿರ್ಧಾರದ ಹಿಂದಿನ ಕಾರಣಗಳು:
ಈ ಆದೇಶವನ್ನು ಹೊರಡಿಸಲು ಹಲವಾರು ಅಂಶಗಳನ್ನು ಪರಿಗಣಿಸಲಾಗಿದೆ ಎಂದು ಸರ್ಕಾರದ ನಡವಳಿಯಲ್ಲಿ ಉಲ್ಲೇಖಿಸಲಾಗಿದೆ. ಸ್ವಾಧೀನಾನುಭವ ಪ್ರಮಾಣಪತ್ರ ನೀಡುವ ಪ್ರಕ್ರಿಯೆಯಲ್ಲಿ ಸ್ಥಳ ಪರಿಶೀಲನೆ ಮತ್ತು ಕಟ್ಟಡ ನಕ್ಷೆಯ ತುಲನಾತ್ಮಕ ಪರಿಶೀಲನೆಯಂತಹ ಕಾರ್ಯಗಳು ಒಳಗೊಂಡಿದ್ದು, ಇದು ಸ್ಥಳೀಯ ಸಂಸ್ಥೆಗಳ ಅಧಿಕಾರಿಗಳ ಮೇಲೆ ಹೆಚ್ಚಿನ ಕೆಲಸದ ಹೊರೆಯನ್ನು ಹೆಚ್ಚಿಸುತ್ತಿದೆ. ಇದರಿಂದಾಗಿ ಸಾರ್ವಜನಿಕರಿಗೆ ಸೇವೆ ನೀಡುವಲ್ಲಿ ವಿಳಂಬವಾಗುವ ಸಾಧ್ಯತೆಗಳಿದ್ದು, ಇದನ್ನು ತಪ್ಪಿಸಲು ಈ ವಿನಾಯಿತಿ ನೀಡಲಾಗಿದೆ.
ಸಣ್ಣ ಕಟ್ಟಡಗಳಿಗೆ ಸ್ವಾಧೀನಾನುಭವ ಪ್ರಮಾಣಪತ್ರವನ್ನು ಕಡ್ಡಾಯಗೊಳಿಸುವುದರಿಂದ ವಿನಾಯಿತಿ ನೀಡುವುದು ಸೂಕ್ತ ಎಂದು ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಮುಖ್ಯ ಆಯುಕ್ತರು ಅಭಿಪ್ರಾಯಪಟ್ಟಿದ್ದರು. ಅಲ್ಲದೆ, ‘ನಂಬಿಕೆ ನಕ್ಷೆ’ (Automated Online Software) ವ್ಯವಸ್ಥೆಯಡಿ ಕಟ್ಟಡ ನಕ್ಷೆಗಳ ಮಂಜೂರಾತಿ ಪ್ರಕ್ರಿಯೆಯನ್ನು ಈಗಾಗಲೇ ಪಾರದರ್ಶಕವಾಗಿ ಮತ್ತು ಕಾಲಮಿತಿಯೊಳಗೆ ನಡೆಸಲಾಗುತ್ತಿದೆ.
ಪ್ರತಿ ವರ್ಷ 1200 ಚದರ ಅಡಿಗಿಂತ ಕಡಿಮೆ ವಿಸ್ತೀರ್ಣದ ಸುಮಾರು 4,000 ಕಟ್ಟಡಗಳಿಗೆ ನಕ್ಷೆ ಮಂಜೂರಾತಿ ನೀಡಲಾಗುತ್ತದೆ. ಈ ಮಹತ್ವದ ಆದೇಶವು ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿ, ನಗರಾಭಿವೃದ್ಧಿ ಇಲಾಖೆ ಇವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯ ನಿರ್ಧಾರದ ಅನ್ವಯ ಹೊರಬಿದ್ದಿದೆ. ಸಾರ್ವಜನಿಕರಿಗೆ ಸಕಾಲದಲ್ಲಿ ಸೇವೆಗಳನ್ನು ಒದಗಿಸುವ ಉದ್ದೇಶದಿಂದ ಸರ್ಕಾರ ಈ ಕ್ರಮ ಕೈಗೊಂಡಿದೆ.





















