ಬೆಂಗಳೂರು/ನವದೆಹಲಿ, ಅ.13 www.bengaluruwire.com: ಕರ್ನಾಟಕದ ನೂತನ ರಾಜ್ಯಪಾಲರಾಗಿ ಬಿಜೆಪಿಯ ಹಿರಿಯ ನಾಯಕಿ ಹಾಗೂ ಮಾಜಿ ಸಂಸದೆ ಸುಧಾ ಯಾದವ್ ಅವರನ್ನು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ನೇಮಕ ಮಾಡಿದ್ದಾರೆ.
ಇದರೊಂದಿಗೆ ಸುಧಾ ಯಾದವ್ ಅವರು ಕರ್ನಾಟಕದ ಇತಿಹಾಸದಲ್ಲಿ ರಾಜ್ಯಪಾಲ ಹುದ್ದೆಗೇರಿದ ಎರಡನೇ ಮಹಿಳೆ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಈ ಹಿಂದೆ 1999ರ ಡಿಸೆಂಬರ್‌ನಿಂದ 2002ರ ಆಗಸ್ಟ್‌ವರೆಗೆ ವಿ.ಎಸ್. ರಮಾದೇವಿ ಅವರು ರಾಜ್ಯದ ಪ್ರಥಮ ಮಹಿಳಾ ರಾಜ್ಯಪಾಲರಾಗಿ ಕಾರ್ಯನಿರ್ವಹಿಸಿದ್ದರು. ಪ್ರಸ್ತುತ ರಾಜ್ಯಪಾಲರಾಗಿರುವ ಥಾವರ್‌ಚಂದ್ ಗೆಹಲೋತ್ ಅವರು 2021ರ ಜುಲೈ 11ರಂದು ಅಧಿಕಾರ ವಹಿಸಿಕೊಂಡಿದ್ದರು.
ಸುಧಾ ಯಾದವ್ ಅವರ ಹಿನ್ನೆಲೆ:
ಹರಿಯಾಣ ಮೂಲದ 60 ವರ್ಷದ ಸುಧಾ ಯಾದವ್ ಅವರು ರಸಾಯನವಿಜ್ಞಾನ ವಿಷಯದಲ್ಲಿ ಸ್ನಾತಕೋತ್ತರ ಪದವಿ ಹಾಗೂ ಅದೇ ವಿಷಯದಲ್ಲಿ ರೂರ್ಕಿಯಿಂದ ಪಿಎಚ್‌ಡಿ ಪದವಿ ಪಡೆದಿದ್ದಾರೆ. ಇವರು ಬಿಎಸ್‌ಎಫ್‌ನ ಡೆಪ್ಯುಟಿ ಕಮಾಂಡೆಂಟ್ ಆಗಿದ್ದ ಸುಖ್‌ಬೀರ್ ಸಿಂಗ್ ಯಾದವ್ ಅವರ ಧರ್ಮಪತ್ನಿ. ಸುಖ್‌ಬೀರ್ ಸಿಂಗ್ ಅವರು 1999ರ ಕಾರ್ಗಿಲ್ ಯುದ್ಧದಲ್ಲಿ ಹುತಾತ್ಮರಾಗಿದ್ದರು.

ಅದೇ ವರ್ಷ (1999) ನಡೆದ 13ನೇ ಲೋಕಸಭಾ ಚುನಾವಣೆಯಲ್ಲಿ ಹರಿಯಾಣದ ಮಹೇಂದ್ರಗಢ ಕ್ಷೇತ್ರದಿಂದ ಸಂಸದೆಯಾಗಿ ಆಯ್ಕೆಯಾಗುವ ಮೂಲಕ ಸಕ್ರಿಯ ರಾಜಕೀಯ ಪ್ರವೇಶಿಸಿದ ಸುಧಾ ಯಾದವ್ ಅವರು 2004ರವರೆಗೆ ಸಂಸದೆಯಾಗಿ ಸೇವೆ ಸಲ್ಲಿಸಿದರು. ನಂತರ 2019ರಿಂದ 2022ರವರೆಗೆ ರಾಷ್ಟ್ರೀಯ ಹಿಂದುಳಿದ ವರ್ಗಗಳ ಆಯೋಗದ (NCBC) ಸದಸ್ಯರಾಗಿಯೂ ಕಾರ್ಯನಿರ್ವಹಿಸಿದ ಇವರು, ಪ್ರಸ್ತುತ ಬಿಜೆಪಿ ಸಂಸದೀಯ ಮಂಡಳಿ ಸದಸ್ಯೆಯಾಗಿದ್ದಾರೆ.
ಇತರ ರಾಜ್ಯಗಳಿಗೂ ನೂತನ ರಾಜ್ಯಪಾಲರ ನೇಮಕ:
ಕರ್ನಾಟಕದ ಜೊತೆಗೆ ಇತರ ಐದು ರಾಜ್ಯಗಳಿಗೂ ನೂತನ ರಾಜ್ಯಪಾಲರನ್ನು ರಾಷ್ಟ್ರಪತಿ ಭವನ ನೇಮಿಸಿದೆ. ಕೇರಳದ ರಾಜ್ಯಪಾಲ ರಾಜೇಂದ್ರ ವಿಶ್ವನಾಥ್ ಅರ್ಲೇಕರ್ ಅವರನ್ನು ತಮಿಳುನಾಡಿಗೆ, ಸಿಕ್ಕಿಂ ರಾಜ್ಯಪಾಲ ಓಂ ಪ್ರಕಾಶ್ ಮಾಥುರ್ ಅವರನ್ನು ಕೇರಳಕ್ಕೆ ಹಾಗೂ ಲಕ್ಷ್ಮಣ್ ಪ್ರಸಾದ್ ಆಚಾರ್ಯ ಅವರನ್ನು ಸಿಕ್ಕಿಂನ ನೂತನ ರಾಜ್ಯಪಾಲರನ್ನಾಗಿ ವರ್ಗಾಯಿಸಲಾಗಿದೆ.
ಜಾರ್ಖಂಡ್ ಹಿರಿಯ ನಾಯಕ ಬೃಜ್ ಮೋಹನ್ ರಾಮ್ ಅವರನ್ನು ಒಡಿಶಾ ರಾಜ್ಯಪಾಲರನ್ನಾಗಿ ಹಾಗೂ ಧರ್ಮಸಿಂಗ್ ರಾವತ್ ಅವರನ್ನು ಉತ್ತರಾಖಂಡದ ರಾಜ್ಯಪಾಲರನ್ನಾಗಿ ನೇಮಕ ಮಾಡಲಾಗಿದೆ. ಈ ಎಲ್ಲಾ ನೇಮಕಾತಿಗಳು ಅವರು ಅಧಿಕಾರ ವಹಿಸಿಕೊಳ್ಳುವ ದಿನಾಂಕದಿಂದ ಜಾರಿಗೆ ಬರಲಿವೆ ಎಂದು ರಾಷ್ಟ್ರಪತಿ ಭವನದ ಪ್ರಕಟಣೆ ತಿಳಿಸಿದೆ.


















