ಬೆಂಗಳೂರು, ಜೂ.25 www.bengaluruwire.com: ರಾಜ್ಯಾದ್ಯಂತ ಜೂನ್ 28ರ ಭಾನುವಾರದಂದು ‘ರಾಷ್ಟ್ರೀಯ ಲಸಿಕಾ ದಿನ’ದ (ಪಲ್ಸ್ ಪೋಲಿಯೋ) ಅಂಗವಾಗಿ ಬೃಹತ್ ಲಸಿಕಾ ಅಭಿಯಾನವನ್ನು ಹಮ್ಮಿಕೊಳ್ಳಲಾಗಿದೆ.
ಭಾರತವು ಪೋಲಿಯೋ ಮುಕ್ತ ರಾಷ್ಟ್ರವಾಗಿ 14 ವರ್ಷಗಳಿಗೂ ಹೆಚ್ಚು ಕಾಲ ಕಳೆದಿದೆ. ಆದರೆ ಇತ್ತೀಚಿನ ದಿನಗಳಲ್ಲಿ ನೆರೆ ರಾಷ್ಟ್ರಗಳಾದ ಪಾಕಿಸ್ತಾನ ಮತ್ತು ಆಫ್ಘಾನಿಸ್ತಾನಗಳಲ್ಲಿ ಪೋಲಿಯೋ ಪ್ರಕರಣಗಳು ವರದಿಯಾಗುತ್ತಿರುವ ಹಿನ್ನೆಲೆಯಲ್ಲಿ, ಮುಂಜಾಗ್ರತಾ ಕ್ರಮವಾಗಿ ಈ ಕಾರ್ಯಕ್ರಮ ಏರ್ಪಡಿಸಲಾಗಿದೆ.
ರಾಜ್ಯದ 0 ದಿಂದ 5 ವರ್ಷದೊಳಗಿನ ಅಂದಾಜು 64,84,901 ಮಕ್ಕಳಿಗೆ ಲಸಿಕೆ ನೀಡುವ ಗುರಿಯನ್ನು ಹೊಂದಲಾಗಿದೆ. ಈ ಮಹತ್ವದ ಅಭಿಯಾನಕ್ಕೆ ಜೂನ್ 28 ರಂದು ಬೆಳಿಗ್ಗೆ 8 ಗಂಟೆಗೆ ಮುಖ್ಯಮಂತ್ರಿಗಳು ಅಧಿಕೃತವಾಗಿ ಚಾಲನೆ ನೀಡಲಿದ್ದಾರೆ.
ಪೋಲಿಯೋ ಮುಕ್ತ ಭಾರತ ನಿರ್ಮಾಣದ ಶ್ರಮ ಸ್ಮರಿಸಿದ ಸಚಿವ ಯು.ಟಿ. ಖಾದರ್:

ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಯು.ಟಿ. ಖಾದರ್ ಅವರು ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, “ಭಾರತದಂತಹ 140 ಕೋಟಿ ಜನಸಂಖ್ಯೆ ಇರುವ ಬೃಹತ್ ರಾಷ್ಟ್ರದಲ್ಲಿ ಪೋಲಿಯೋ ಮುಕ್ತ ಸಾಧನೆ ಮಾಡುವುದು ಅಸಾಧ್ಯವೆಂದು ಹಲವು ರಾಷ್ಟ್ರಗಳು ಭಾವಿಸಿದ್ದವು”. “ಆದರೆ ನಮ್ಮ ಆರೋಗ್ಯ ಕಾರ್ಯಕರ್ತರು ಕಾಡು, ನದಿ, ಗುಡ್ಡಗಾಡು ಎನ್ನದೆ ತಮ್ಮ ಜೀವದ ಹಂಗು ತೊರೆದು ಲಸಿಕೆ ತಲುಪಿಸಿದ ಪರಿಣಾಮ ಇಂದು ಭಾರತ ಸಂಪೂರ್ಣ ಪೋಲಿಯೋ ಮುಕ್ತವಾಗಿದೆ”.
2026ನೇ ಸಾಲಿನಲ್ಲಿ ಪಾಕಿಸ್ತಾನದಲ್ಲಿ 1 ಮತ್ತು ಆಫ್ಘಾನಿಸ್ತಾನದಲ್ಲಿ 3 ಪ್ರಕರಣಗಳು ವರದಿಯಾಗಿವೆ. “ಈ ದೇಶಗಳಲ್ಲಿ ವೈರಸ್ ಇನ್ನೂ ಜೀವಂತವಾಗಿರುವುದರಿಂದ, ಅದು ನಮ್ಮ ಮಕ್ಕಳಿಗೂ ತಗಲುವ ಸಂಭವನೀಯ ಅಪಾಯವಿದೆ”. “ಹೀಗಾಗಿ ಈ ಕಠಿಣ ಪರಿಶ್ರಮದ ಸಾಧನೆಯನ್ನು ಕಾಯ್ದುಕೊಳ್ಳುವುದು ನಮ್ಮೆಲ್ಲರ ಆದ್ಯ ಜವಾಬ್ದಾರಿಯಾಗಿದೆ” ಎಂದು ಅವರು ಕರೆ ನೀಡಿದರು.
ಲಸಿಕಾ ಕಾರ್ಯಕ್ರಮದ ರೂಪುರೇಷೆಗಳು:
ಲಸಿಕಾ ವಿಧಾನ: ಭಾನುವಾರ (ಜೂ. 28) ರಾಜ್ಯಾದ್ಯಂತ ಸ್ಥಾಪಿಸಲಾಗುವ ಬೂತ್‌ಗಳಲ್ಲಿ bOPV (ಟೈಪ್ 1 ಮತ್ತು ಟೈಪ್ 3) ಲಸಿಕೆಯನ್ನು ನೀಡಲಾಗುವುದು.
ಮನೆ-ಮನೆ ಭೇಟಿ: ನಂತರದ 2-3 ದಿನಗಳಲ್ಲಿ ಮನೆ-ಮನೆ ಭೇಟಿ ನೀಡಿ, ವಿಶೇಷವಾಗಿ ವಲಸಿಗರು, ಸ್ಲಂ ನಿವಾಸಿಗಳು ಮತ್ತು ಅಪಾಯದಂಚಿನಲ್ಲಿರುವ ಪ್ರದೇಶಗಳಲ್ಲಿನ ಮಕ್ಕಳಿಗೆ ಆದ್ಯತೆ ಮೇರೆಗೆ ಲಸಿಕೆ ಹಾಕಲಾಗುವುದು.
ಗುರಿ: ಯಾವುದೇ ಮಗು ಲಸಿಕೆಯಿಂದ ವಂಚಿತರಾಗದಂತೆ ಎಚ್ಚರವಹಿಸುವುದು ಇಲಾಖೆಯ ಮುಖ್ಯ ಗುರಿಯಾಗಿದೆ.
ಅಂಕಿ-ಅಂಶಗಳ ಒಂದು ನೋಟ
ನಿಗದಿತ ಗುರಿ: 64,84,901 ಮಕ್ಕಳು (0-5 ವರ್ಷ).
ಬೂತ್‌ಗಳ ಸಂಖ್ಯೆ: 36,076.
ಲಸಿಕಾ ಕಾರ್ಯಕರ್ತರು: 1,14,213 ಹಾಗೂ ಮೇಲ್ವಿಚಾರಕರು: 7,197.
ಸಂಚಾರಿ ತಂಡ (Mobile Teams): 988 (ಗುಡ್ಡಗಾಡು, ಕಾಮಗಾರಿ ಪ್ರದೇಶಗಳಿಗೆ).
ಟ್ರಾನ್ಸಿಟ್ ತಂಡ: 2,125 (ಬಸ್, ರೈಲ್ವೆ ಹಾಗೂ ವಿಮಾನ ನಿಲ್ದಾಣಗಳಿಗೆ).
ಸರ್ಕಾರಿ ಆಸ್ಪತ್ರೆಗಳು, ಅಂಗನವಾಡಿಗಳು ಮಾತ್ರವಲ್ಲದೆ ಮೆಟ್ರೋ, ಸೀಪೋರ್ಟ್ ಹಾಗೂ ಇಟ್ಟಿಗೆ ಬಟ್ಟಿಗಳಂತಹ ಪ್ರದೇಶಗಳಲ್ಲೂ ಲಸಿಕೆ ಒದಗಿಸಲು ವ್ಯವಸ್ಥೆ ಮಾಡಲಾಗಿದೆ. ಈ ಬೃಹತ್ ಕಾರ್ಯಕ್ರಮವು ವಿಶ್ವ ಆರೋಗ್ಯ ಸಂಸ್ಥೆ (WHO), ಯುನಿಸೆಫ್, ರೋಟರಿ ಸೇರಿದಂತೆ ವಿವಿಧ ಸಂಸ್ಥೆಗಳ ಸಮನ್ವಯತೆಯೊಂದಿಗೆ ನಡೆಯುತ್ತಿದೆ.
ಪೋಷಕರಿಗೆ ಪ್ರಮುಖ ಸಂದೇಶ:
ಮಗು ಈ ಹಿಂದೆ ಎಷ್ಟೇ ಬಾರಿ ಪೋಲಿಯೋ ಲಸಿಕೆ ಪಡೆದಿದ್ದರೂ ಸಹ, ಈ ಅಭಿಯಾನದಲ್ಲಿ ಮತ್ತೊಮ್ಮೆ ಲಸಿಕೆ ಹಾಕಿಸುವುದು ಕಡ್ಡಾಯವಾಗಿದೆ. ಯಾವುದೇ ಸುಳ್ಳು ವದಂತಿಗಳಿಗೆ ಕಿವಿಗೊಡದೆ ತಮ್ಮ ಮಕ್ಕಳಿಗೆ ಲಸಿಕೆ ಹಾಕಿಸಿ. “ಪೋಲಿಯೋ ಮುಕ್ತ ಭಾರತ, ಪೋಲಿಯೋ ಮುಕ್ತ ಕರ್ನಾಟಕ” ಎಂಬ ಧ್ಯೇಯ ವಾಕ್ಯದೊಂದಿಗೆ ಪೋಲಿಯೋ ವಿರುದ್ಧ ನಿರಂತರ ಗೆಲುವು ಸಾಧಿಸೋಣ.
ಸಮಾಜದ ಕಟ್ಟಕಡೆಯ ಮಗುವಿಗೂ ಈ ಲಸಿಕೆ ತಲುಪುವಂತಾಗಲು ಸಾರ್ವಜನಿಕರು ಹಾಗೂ ಮಾಧ್ಯಮಗಳ ಸಹಕಾರ ಅತಿ ಮುಖ್ಯವಾಗಿದೆ ಎಂದು ಸಚಿವ ಖಾದರ್ ವಿನಂತಿಸಿದರು.
ಸುದ್ದಿಗೋಷ್ಠಿಯಲ್ಲಿ ಆರೋಗ್ಯ ಇಲಾಖೆ ಆಯುಕ್ತರಾದ ಗುರುದತ್ ಹೆಗಡೆ ಹಾಗೂ ಇತರ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.




















