ಬೆಂಗಳೂರು, ಜೂ.26 www.bengaluruwire.com: ರಾಜಧಾನಿ ಬೆಂಗಳೂರಿನಲ್ಲಿ ಪಾದಚಾರಿಗಳ ಸುರಕ್ಷತೆಗಾಗಿ ಮಹತ್ವದ ಹೆಜ್ಜೆಯಿಡಲಾಗಿದ್ದು, ಜುಲೈ 1ರಿಂದ “ಸುರಕ್ಷಿತ ಪಾದಚಾರಿ ಮಾರ್ಗ ಅಭಿಯಾನ” ಆರಂಭವಾಗಲಿದೆ.
ಜಿಬಿಎ (ಗ್ರೇಟರ್ ಬೆಂಗಳೂರು ಅಭಿವೃದ್ಧಿ) ವ್ಯಾಪ್ತಿಯಲ್ಲಿ ಪಾದಚಾರಿ ಮಾರ್ಗಗಳ (ಫುಟ್‌ಪಾತ್) ಒತ್ತುವರಿ ತೆರವು ಹಾಗೂ ದುರಸ್ತಿಗೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವಂತೆ ಗ್ರೇಟರ್ ಬೆಂಗಳೂರು ಅಭಿವೃದ್ಧಿ ಸಚಿವರಾದ ಕೃಷ್ಣ ಬೈರೇಗೌಡ ಅಧಿಕಾರಿಗಳಿಗೆ ಖಡಕ್ ಸೂಚನೆ ನೀಡಿದ್ದಾರೆ.
ಸೋಮವಾರ ನಡೆದ ಅಧಿಕಾರಿಗಳ ಉನ್ನತ ಮಟ್ಟದ ಸಭೆಯಲ್ಲಿ ಮಾತನಾಡಿದ ಅವರು, ಜುಲೈ 1ರೊಳಗೆ ಅಂಗಡಿ ಮಾಲೀಕರು ಫುಟ್‌ಪಾತ್ ಮೇಲಿರುವ ತಮ್ಮ ನಾಮಫಲಕ, ಸಾಮಗ್ರಿಗಳು ಹಾಗೂ ಒತ್ತುವರಿಯನ್ನು ಸ್ವಯಂಪ್ರೇರಿತವಾಗಿ ತೆರವುಗೊಳಿಸಬೇಕು. ತಪ್ಪಿದ್ದಲ್ಲಿ ಪಾಲಿಕೆಯಿಂದಲೇ ಕಾರ್ಯಾಚರಣೆ ನಡೆಸಿ ದುಭಾರಿ ದಂಡ ವಿಧಿಸಲಾಗುವುದು ಎಂದು ಎಚ್ಚರಿಸಿದ್ದಾರೆ.
ಪಾದಚಾರಿ ಮಾರ್ಗ ಸಾರ್ವಜನಿಕರ ಆಸ್ತಿ:

ಸುಮಾರು 1.5 ಕೋಟಿ ಜನಸಂಖ್ಯೆ ಇರುವ ಬೆಂಗಳೂರಿನಲ್ಲಿ ಪಾದಚಾರಿ ಮಾರ್ಗದಲ್ಲಿ ನಡೆಯುವುದು ಪ್ರತಿಯೊಬ್ಬ ನಾಗರಿಕನ ಮೂಲಭೂತ ಹಕ್ಕು ಎಂದು ಸುಪ್ರೀಂ ಕೋರ್ಟ್ ಸ್ಪಷ್ಟಪಡಿಸಿದೆ. ಈ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ. ಶಿವಕುಮಾರ್ ಅವರ ಸೂಚನೆಯಂತೆ, ನಗರದ 2,000 ಕಿ.ಮೀ ವ್ಯಾಪ್ತಿಯ ಆರ್ಟಿರಿಯಲ್ ಹಾಗೂ ಸಬ್-ಆರ್ಟಿರಿಯಲ್ ರಸ್ತೆಗಳಲ್ಲಿ ಆಂದೋಲನ ಮಾದರಿಯಲ್ಲಿ ಅಭಿಯಾನ ಕೈಗೊಳ್ಳಲಾಗುತ್ತಿದೆ. ಫುಟ್‌ಪಾತ್‌ಗಳನ್ನು ವ್ಯಾಪಾರಕ್ಕೆ ಬಳಸದೆ, ತಮ್ಮ ಜಾಗದ ಮಿತಿಯಲ್ಲಿಯೇ ವ್ಯಾಪಾರ ನಡೆಸಬೇಕು ಎಂದು ಸಚಿವರು ಮನವಿ ಮಾಡಿದ್ದಾರೆ.
ಅಪಘಾತಗಳಲ್ಲಿ ಶೇ.30ರಷ್ಟು ಪಾದಚಾರಿಗಳೇ ಬಲಿ:
ನಗರದಲ್ಲಿ ಪ್ರತಿವರ್ಷ ಸಂಭವಿಸುವ ಸುಮಾರು 1,000 ರಸ್ತೆ ಅಪಘಾತ ಸಾವುಗಳಲ್ಲಿ ಶೇ.30ರಷ್ಟು ಪಾದಚಾರಿಗಳೇ ಆಗಿದ್ದಾರೆ. ಸುಗಮ ಹಾಗೂ ಸುರಕ್ಷಿತ ಫುಟ್‌ಪಾತ್‌ಗಳಿಲ್ಲದಿರುವುದೇ ಇದಕ್ಕೆ ಪ್ರಮುಖ ಕಾರಣ. ಹೀಗಾಗಿ, ಸರ್ವೋಚ್ಚ ನ್ಯಾಯಾಲಯದ ಆದೇಶ ಉಲ್ಲಂಘಿಸಿ ಫುಟ್‌ಪಾತ್ ಮೇಲೆ ವಾಹನ ಪಾರ್ಕಿಂಗ್ ಮಾಡಿದರೆ, ಯಾವುದೇ ಮುಲಾಜಿಲ್ಲದೆ ಟೋಯಿಂಗ್ ಮಾಡಲಾಗುವುದು.
ವಾರಸುದಾರರಿಲ್ಲದ ವಾಹನಗಳ ತೆರವಿಗೆ ಜುಲೈ 10 ಡೆಡ್‌ಲೈನ್:
ನಗರದ ರಸ್ತೆ ಬದಿಗಳಲ್ಲಿ ದೀರ್ಘಕಾಲದಿಂದ ಅನಾಥವಾಗಿ ಬಿದ್ದಿರುವ ಗುಜರಿ ವಾಹನಗಳ ತೆರವಿಗೆ ವಿಶೇಷ ಕಾರ್ಯಾಚರಣೆ ರೂಪಿಸಲಾಗಿದೆ.
ಜುಲೈ 1ರಿಂದ: ವಾರಸುದಾರರಿಲ್ಲದ ವಾಹನಗಳಿಗೆ ನೋಟಿಸ್ ಸ್ಟಿಕ್ಕರ್ ಅಂಟಿಸುವ ಕಾರ್ಯ ಆರಂಭ.
7 ದಿನಗಳ ಗಡುವು: ಸ್ಟಿಕ್ಕರ್ ಅಂಟಿಸಿದ ಬಳಿಕ ಮಾಲೀಕರಿಗೆ ವಾಹನ ತೆರವುಗೊಳಿಸಲು 7 ದಿನ ಕಾಲಾವಕಾಶ.
ಜುಲೈ 10ರಿಂದ ಜಪ್ತಿ: ಗಡುವು ಮೀರಿದ ವಾಹನಗಳನ್ನು ಟೋಯಿಂಗ್ ಮೂಲಕ ತೆರವುಗೊಳಿಸಿ, ಹರಾಜು ಹಾಕಲು ನಿರ್ಧಾರ.
ಅಭಿಯಾನದ ಪ್ರಮುಖ ಹೈಲೈಟ್ಸ್:
ಫುಟ್‌ಪಾತ್ ವ್ಯಾಪಾರಕ್ಕೆ ಬ್ರೇಕ್: ಜುಲೈ 1ರಿಂದ ಪ್ರಮುಖ ರಸ್ತೆಗಳು (ಆರ್ಟಿರಿಯಲ್ & ಸಬ್-ಆರ್ಟಿರಿಯಲ್) ಹಾಗೂ ಫುಟ್‌ಪಾತ್‌ಗಳ ಮೇಲೆ ತಳ್ಳುಗಾಡಿ ವ್ಯಾಪಾರಕ್ಕೆ ಸಂಪೂರ್ಣ ನಿಷೇಧ. ಉಲ್ಲಂಘಿಸಿದರೆ ಗಾಡಿ ಜಪ್ತಿ.
ದುರಸ್ತಿಗೆ ₹70 ಕೋಟಿ: 5 ಪಾಲಿಕೆಗಳ ವ್ಯಾಪ್ತಿಯ 2,000 ಕಿ.ಮೀ ಫುಟ್‌ಪಾತ್ ದುರಸ್ತಿಗೆ (ಸ್ಲ್ಯಾಬ್, ಕರ್ಬ್ ಸ್ಟೋನ್ ಅಳವಡಿಕೆ) ₹70 ಕೋಟಿ ಮೀಸಲು.
ವೈಜ್ಞಾನಿಕವಾಗಿ ರಸ್ತೆ ಗುಂಡಿ ಮುಚ್ಚುವಿಕೆ: ನಗರದಲ್ಲಿನ ರಸ್ತೆ ಗುಂಡಿಗಳನ್ನು ‘ಬಾಕ್ಸ್ ಕಟಿಂಗ್’ (Box Cutting) ಮಾಡಿ, ಜೆಲ್ಲಿ ತುಂಬಿ ಡಾಂಬರೀಕರಣ ಮಾಡುವ ಮೂಲಕ ರಸ್ತೆ ಮಟ್ಟಕ್ಕೆ ಸಮನಾಗಿ ವೈಜ್ಞಾನಿಕವಾಗಿ ಮುಚ್ಚಲು ಕಟ್ಟುನಿಟ್ಟಿನ ಸೂಚನೆ.
ಸಿಗ್ನಲ್ ಬಳಿ ಪಾರ್ಕಿಂಗ್ ನಿಷೇಧ:
ಟ್ರಾಫಿಕ್ ಸಿಗ್ನಲ್‌ಗಳಿಂದ 75 ಮೀಟರ್ ವ್ಯಾಪ್ತಿಯಲ್ಲಿ ಯಾವುದೇ ಬಸ್ ಅಥವಾ ಇತರ ವಾಹನಗಳ ನಿಲುಗಡೆಗೆ ಅವಕಾಶವಿಲ್ಲ. ಸಿಗ್ನಲ್ ಬಳಿ ಇರುವ ಅನಗತ್ಯ ಹಂಪ್‌ಗಳ ತೆರವಿಗೆ ಸೂಚನೆ.
ಸಭೆಯಲ್ಲಿ ಮುಖ್ಯ ಆಯುಕ್ತರಾದ ಮಹೇಶ್ವರ್ ರಾವ್, ಸಂಚಾರ ಪೊಲೀಸ್ ವಿಭಾಗದ ಜಂಟಿ ಆಯುಕ್ತರಾದ ಕಾರ್ತಿಕ್ ರೆಡ್ಡಿ ಹಾಗೂ ವಿವಿಧ ನಗರಪಾಲಿಕೆಗಳ ಆಯುಕ್ತರು, ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.




















