ಬೆಂಗಳೂರು, ಜೂ.26 www.bengaluruwire.com: ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯದ (RGUHS) ವತಿಯಿಂದ ಜೂನ್ 28ರಂದು ನಗರದ ಕಂಠೀರವ ಕ್ರೀಡಾಂಗಣದಲ್ಲಿ ‘ನಶಾಮುಕ್ತ ಭಾರತ ಸಂಕಲ್ಪ’ದೊಂದಿಗೆ 31ನೇ ಸಂಸ್ಥಾಪನಾ ದಿನಾಚರಣೆ ಹಾಗೂ ಅಂತರರಾಷ್ಟ್ರೀಯ ಮಾದಕವಸ್ತು ದುರುಪಯೋಗ ಮತ್ತು ಅಕ್ರಮ ಸಾಗಣೆ ವಿರೋಧಿ ದಿನಾಚರಣೆಯನ್ನು ಬೃಹತ್ ಮಟ್ಟದಲ್ಲಿ ಆಯೋಜಿಸಲಾಗಿದೆ.
ಶುಕ್ರವಾರ ವಿವಿಯ ಸಿಂಡಿಕೇಟ್ ಸಭಾಂಗಣದಲ್ಲಿ ಕರೆಯಲಾದ ಪತ್ರಿಕಾಗೋಷ್ಠಿಯಲ್ಲಿ ಕುಲಪತಿ ಡಾ.ಭಗವಾನ್ ಬಿ.ಸಿ. ಅವರು ಈ ಕುರಿತು ಮಾಹಿತಿ ನೀಡಿದರು. “ಯುವಜನತೆಯಲ್ಲಿ ಮಾದಕ ವಸ್ತುಗಳ ಸೇವನೆ ತಡೆಗಟ್ಟುವ ಉದ್ದೇಶದಿಂದ ಈ ಅಭಿಯಾನವನ್ನು ರೂಪಿಸಲಾಗಿದ್ದು, ಜೂನ್ 28ರಂದು ನಡೆಯುವ ಅದ್ದೂರಿ ಕಾರ್ಯಕ್ರಮದಲ್ಲಿ 25 ಸಾವಿರಕ್ಕೂ ಹೆಚ್ಚು ಆರೋಗ್ಯ ವಿಜ್ಞಾನ ಕಾಲೇಜುಗಳ ವಿದ್ಯಾರ್ಥಿಗಳು ಹಾಗೂ ಸಿಬ್ಬಂದಿ ಪಾಲ್ಗೊಳ್ಳಲಿದ್ದಾರೆ,” ಎಂದು ಅವರು ತಿಳಿಸಿದರು.
7 ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳಿಂದ ಅಂಗದಾನ ಪ್ರತಿಜ್ಞೆ:
ಈ ಬೃಹತ್ ಕಾರ್ಯಕ್ರಮದ ಮತ್ತೊಂದು ಪ್ರಮುಖ ಆಕರ್ಷಣೆಯೆಂದರೆ, ರಾಜ್ಯದಲ್ಲಿ ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯದ 7000ಕ್ಕೂ ಹೆಚ್ಚು ವಿದ್ಯಾರ್ಥಿಗಳು ಅಂಗದಾನ ಮಾಡುವ ಮಹತ್ವದ ಪ್ರತಿಜ್ಞೆ ಮಾಡಿದ್ದಾರೆ. ಇದು ಸಮಾಜಕ್ಕೆ ದೊಡ್ಡ ಸಂದೇಶ ನೀಡಲಿದ್ದು, ಅಂಗದಾನದ ಬಗ್ಗೆ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ವಿವಿಯ ಮಹತ್ವದ ಹೆಜ್ಜೆಯಾಗಿದೆ.

ಗಣ್ಯರ ಉಪಸ್ಥಿತಿ:
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾರತದ ಗೌರವಾನ್ವಿತ ಉಪರಾಷ್ಟ್ರಪತಿಗಳಾದ ಸಿ.ಪಿ. ರಾಧಾಕೃಷ್ಣನ್ ಅವರು ಭಾಗವಹಿಸಲಿದ್ದಾರೆ. ಕರ್ನಾಟಕದ ರಾಜ್ಯಪಾಲರಾದ ಥಾವರ್ ಚಂದ್ ಗೆಹ್ಲೋಟ್ ಅವರು ಅಧ್ಯಕ್ಷತೆ ವಹಿಸಲಿದ್ದು, ಮುಖ್ಯಮಂತ್ರಿಗಳಾದ ಡಿ.ಕೆ. ಶಿವಕುಮಾರ್ ಹಾಗೂ ಆಂಧ್ರಪ್ರದೇಶದ ರಾಜ್ಯಪಾಲರಾದ ಜಸ್ಟಿಸ್ ಎಸ್. ಅಬ್ದುಲ್ ನಜೀರ್ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿರಲಿದ್ದಾರೆ.
ಮಹತ್ವದ ಮೈಲಿಗಲ್ಲು:
ಕಳೆದ ಒಂದು ವರ್ಷದಲ್ಲಿ ನಶಾಮುಕ್ತ ಕ್ಯಾಂಪಸ್ ಹಾಗೂ ಅಂಗದಾನ ಜಾಗೃತಿ ಅಭಿಯಾನವು ರಾಜ್ಯದ 15 ಜಿಲ್ಲೆಗಳಲ್ಲಿ ಯಶಸ್ವಿಯಾಗಿ ನಡೆದಿದ್ದು, 550ಕ್ಕೂ ಹೆಚ್ಚು ಕಾಲೇಜುಗಳು ಇದರಲ್ಲಿ ಕೈಜೋಡಿಸಿವೆ. 98,000ಕ್ಕೂ ಹೆಚ್ಚು ವಿದ್ಯಾರ್ಥಿಗಳು ಜಾಗೃತಿ ನಡಿಗೆಯಲ್ಲಿ ಪಾಲ್ಗೊಂಡಿರುವುದು ಅಭಿಯಾನದ ಯಶಸ್ಸಿಗೆ ಸಾಕ್ಷಿಯಾಗಿದೆ ಎಂದು ವಿವಿಯ ಪ್ರಕಟಣೆ ತಿಳಿಸಿದೆ.
ಸದ್ಯದಲ್ಲೇ ವಿಶ್ವದರ್ಜೆಯ ಅತಿದೊಡ್ಡ ಬಯೋಬ್ಯಾಂಕ್ ಆರಂಭ:
ಅಕ್ಟೋಬರ್, ನವೆಂಬರ್ ನಲ್ಲಿ ನಗರದ ಭೀಮನಕುಪ್ಪೆಯಲ್ಲಿ 50 ಎಕರೆ ಪ್ರದೇಶದಲ್ಲಿ 600 ಕೋಟಿ ರೂ. ವೆಚ್ಚದಲ್ಲಿ ರಕ್ತ, ಕರುಳಬಳ್ಳಿ ರಕ್ತ, ಪ್ಲೆಸೆಂಟಾ, ಸಿಟಿ-ಸ್ಕ್ಯಾನ್, ರೆಡಿಯಾಲಜಿ ಹಾಗೂ ಕೋಶ ಮಾದರಿಗಳನ್ನು ಒಳಗೊಂಡ ಜೈವಿಕ ಮಾದರಿಗಳನ್ನು ವಿಶ್ವದರ್ಜೆಯ, ದೇಶದ ಅತಿದೊಡ್ಡ ಬಯೋಬ್ಯಾಂಕ್ ಆರಂಭವಾಗಲಿದೆ.
ಇದು ದೇಶದ ಅತಿದೊಡ್ಡ ಆರೋಗ್ಯ ದತ್ತಾಂಶಗಳನ್ನು ಹೊಂದಿರುವ ಕೇಂದ್ರವಾಗಲಿದೆ. ಈ ದತ್ತಾಂಶ ಸಂಗ್ರಹಕ್ಕೆ 20-25 ಟೆರಾಬೈಟ್ ಮೆಮೊರಿ ಬೇಕಾಗುತ್ತದೆ. ಐಟಿ ಕಂಪನಿಗಳು ಉಚಿತವಾಗಿ 2 ರಿಂದ 3 ಟೆರಾಬೈಟ್ ಸಂಗ್ರಹ ವ್ಯವಸ್ಥೆ ಮಾಡಿಕೊಡುವುದಾಗಿ ತಿಳಿಸಿದೆ ಎಂದು ಕುಲಪತಿ ಡಾ.ಭಗವಾನ್ ಬಿ.ಸಿ ತಿಳಿಸಿದರು.
ಈ ಬಯೋಬ್ಯಾಂಕ್ ಹಾಗೂ ದತ್ತಾಂಶ ಕೇಂದ್ರ ರಾಜ್ಯ ಸರ್ಕಾರದ ಯೋಜನೆ, ನೀತಿ ನಿರೂಪಣೆ, ವಿದ್ಯಾರ್ಥಿಗಳ ಶಿಕ್ಷಣಕ್ಕೆ, ವಿಶ್ವ ವ್ಯಾಪಿ ಆರೋಗ್ಯ ಕ್ಷೇತ್ರಗಳಿಗೆ ಎಐ ಆಧಾರಿತವಾಗಿ ನಮ್ಮ ಕೇಂದ್ರ ನೆರವು ನೀಡಲಿದೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ರಿಜಿಸ್ಟ್ರಾರ್ ಅರ್ಜುನ್ ಒಡೆಯರ್ ಸೇರಿದಂತೆ ವಿವಿಯ ಹಿರಿಯ ಅಧಿಕಾರಿಗಳು ಹಾಜರಿದ್ದರು.





















