ಬೆಂಗಳೂರು, ಜೂ.25 www.bengaluruwire.com: ರಾಜ್ಯದ ಕೃಷಿ ಮತ್ತು ಸಂಬಂಧಿತ ವಿಜ್ಞಾನಗಳ ವಿಶ್ವವಿದ್ಯಾನಿಲಯಗಳಲ್ಲಿ ಕುಲಪತಿ ಸೇರಿದಂತೆ ಉನ್ನತ ಹುದ್ದೆಗಳ ನೇಮಕಾತಿಯಲ್ಲಿ ಭಾರಿ ಭ್ರಷ್ಟಾಚಾರ ಮತ್ತು ಆಡಳಿತಾತ್ಮಕ ವೈಫಲ್ಯಗಳು ನಡೆಯುತ್ತಿವೆ ಎಂದು ಆರೋಪಿಸಿ ನಿವೃತ್ತ ಪ್ರಾಧ್ಯಾಪಕರು, ಕೃಷಿ ವಿಜ್ಞಾನಿಗಳು ಹಾಗೂ ಗಣ್ಯ ಹಳೆಯ ವಿದ್ಯಾರ್ಥಿಗಳ ತಂಡ ಲೋಕಾಯುಕ್ತದ ಮೆಟ್ಟಿಲೇರಿದೆ.
ಈ ಕುರಿತು ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿರುವ ಹಿರಿಯ ಕೃಷಿ ತಜ್ಞ ಡಾ. ಪ್ರಕಾಶ್ ಕಮ್ಮರಡಿ, “ಶಿವಮೊಗ್ಗ ಹಾಗೂ ಧಾರವಾಡ ಕೃಷಿ ವಿಶ್ವವಿದ್ಯಾನಿಲಯಗಳ ಕುಲಪತಿ ಆಯ್ಕೆ ಶೋಧನಾ ಸಮಿತಿಯನ್ನು ತಕ್ಷಣವೇ ರದ್ದುಗೊಳಿಸಬೇಕು ಮತ್ತು ಸ್ವತಂತ್ರ ಶೋಧನಾ ಸಮಿತಿಯನ್ನು ರಚಿಸಲು ಲೋಕಾಯುಕ್ತರು ವಿಶೇಷ ಮಧ್ಯಪ್ರವೇಶ ಮಾಡಬೇಕು” ಎಂದು ಒತ್ತಾಯಿಸಿ ಮನವಿ ಸಲ್ಲಿಸಿರುವುದಾಗಿ ತಿಳಿಸಿದ್ದಾರೆ.
ರಾಜ್ಯಪಾಲರು, ಸಚಿವರಿಗೆ ದೂರು ನೀಡಿದರೂ ಸ್ಪಂದನೆಯಿಲ್ಲ:
ಕುಲಪತಿಗಳ ಆಯ್ಕೆ ಪ್ರಕ್ರಿಯೆಯಲ್ಲಿ ನಿಷ್ಪಕ್ಷಪಾತತೆ ಹಾಗೂ ಸಾರ್ವಜನಿಕ ವಿಶ್ವಾಸವನ್ನು ಕಾಪಾಡುವ ನಿಟ್ಟಿನಲ್ಲಿ ಈ ಹಿಂದೆಯೇ ರಾಜ್ಯಪಾಲರಿಗೆ ಹಾಗೂ ರಾಜ್ಯ ಕೃಷಿ ಸಚಿವರಿಗೆ ಎರಡು ಪ್ರತ್ಯೇಕ ಮನವಿಗಳನ್ನು ಸಲ್ಲಿಸಲಾಗಿತ್ತು. ಆದರೆ, ಆ ಗಂಭೀರ ಆಕ್ಷೇಪಣೆಗಳನ್ನು ಪರಿಗಣಿಸಿ ತಿದ್ದುಪಡಿ ಕ್ರಮಗಳನ್ನು ಕೈಗೊಳ್ಳುವ ಬದಲು, ಆಯ್ಕೆ ಪ್ರಕ್ರಿಯೆಯನ್ನು ಆದಷ್ಟು ಬೇಗ ಮುಗಿಸಲು ಅತ್ಯುನ್ನತ ಮಟ್ಟದಲ್ಲಿ ತೆರೆಮರೆಯ ಯತ್ನಗಳು ನಡೆಯುತ್ತಿವೆ. ಇದು ತೀವ್ರ ಕಳವಳಕಾರಿ ವಿಚಾರವಾಗಿದೆ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಶೋಧನಾ ಸಮಿತಿ ಅಧ್ಯಕ್ಷರ ಮೇಲೆಯೇ ಲೋಕಾಯುಕ್ತ ತನಿಖೆ:
ವಿಶೇಷವಾಗಿ ಶಿವಮೊಗ್ಗ ಹಾಗೂ ಧಾರವಾಡ ಕೃಷಿ ವಿಶ್ವವಿದ್ಯಾನಿಲಯಗಳ ಕುಲಪತಿ ಆಯ್ಕೆಗಾಗಿ ರಚಿಸಲಾಗಿರುವ ಶೋಧನಾ ಸಮಿತಿಗಳ ಅಧ್ಯಕ್ಷರೇ ಪ್ರಸ್ತುತ ಲೋಕಾಯುಕ್ತ ತನಿಖೆ ಎದುರಿಸುತ್ತಿದ್ದಾರೆ ಎಂಬುದು ಗಂಭೀರ ವಿಚಾರವಾಗಿದೆ. ಇದರ ಜೊತೆಗೆ ಯುಜಿಸಿ (UGC) ನಿಯಮಾವಳಿಗಳ ಸ್ಪಷ್ಟ ಉಲ್ಲಂಘನೆಯಾಗುತ್ತಿರುವುದು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ.
ರಾಜ್ಯಪಾಲರಿಗೆ ಪತ್ರ ಬರೆದ ಕಾಗೋಡು ತಿಮ್ಮಪ್ಪ:
ಈ ನೇಮಕಾತಿ ಪ್ರಕ್ರಿಯೆಯಲ್ಲಿನ ನಿಯಮಗಳ ಉಲ್ಲಂಘನೆ ಮತ್ತು ಪಾರದರ್ಶಕತೆಯ ಕೊರತೆಯ ಬಗ್ಗೆ ಹಿರಿಯ ನಾಯಕ, ಮಾಜಿ ಸಭಾಧ್ಯಕ್ಷರು ಹಾಗೂ ಮಾಜಿ ಸಚಿವರಾದ ಕಾಗೋಡು ತಿಮ್ಮಪ್ಪನವರು ಸಹ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಜೂನ್ 23 ರಂದು ಅವರು ನೇರವಾಗಿ ರಾಜ್ಯಪಾಲರಿಗೆ ಪತ್ರ ಬರೆದು, ಆಯ್ಕೆ ಪ್ರಕ್ರಿಯೆಯಲ್ಲಿನ ಲೋಪಗಳ ಬಗ್ಗೆ ಗಮನ ಸೆಳೆದಿದ್ದಾರೆ. ಇದು ಪ್ರಕರಣದ ಗಂಭೀರತೆಯನ್ನು ಮತ್ತಷ್ಟು ಹೆಚ್ಚಿಸಿದೆ.
”ಕೃಷಿ ಮತ್ತು ಸಂಬಂಧಿಸಿದ ವಿಶ್ವವಿದ್ಯಾನಿಲಯಗಳ ಘನತೆ, ಸ್ವಾಯತ್ತತೆ ಮತ್ತು ಸಾರ್ವಜನಿಕರ ವಿಶ್ವಾಸವನ್ನು ಮರುಸ್ಥಾಪಿಸುವ ಮಹತ್ವಾಕಾಂಕ್ಷೆಯೊಂದಿಗೆ ನಾವು ಈ ಹೋರಾಟಕ್ಕೆ ಇಳಿದಿದ್ದೇವೆ. ಅಕ್ರಮಗಳ ವಿರುದ್ಧ ಸೂಕ್ತ ತನಿಖೆಯಾಗಿ, ಅರ್ಹರಿಗೆ ನ್ಯಾಯ ಸಿಗಬೇಕು” ಎಂದು ಡಾ. ಪ್ರಕಾಶ್ ಕಮ್ಮರಡಿ ಮತ್ತು ತಂಡ ಆಗ್ರಹಿಸಿದೆ.




















