ಬೆಂಗಳೂರು, ಜೂ.24 www.bengaluruwire.com: ರಾಜ್ಯ ರಾಜಧಾನಿ ಬೆಂಗಳೂರಿನ ಜನತೆಗೆ ಬೆಸ್ಕಾಂ (BESCOM) ಭರ್ಜರಿ ಸಿಹಿಸುದ್ದಿ ನೀಡಿದೆ. ನಗರದಲ್ಲಿ ಸ್ವಾಧೀನಾನುಭವ ಪ್ರಮಾಣಪತ್ರ (Occupancy Certificate – OC) ಇಲ್ಲದೆ ಪರದಾಡುತ್ತಿದ್ದ ಮನೆ ಮಾಲೀಕರಿಗೆ ಶಾಶ್ವತ ವಿದ್ಯುತ್ ಸಂಪರ್ಕ ಕಲ್ಪಿಸಲು ಬೆಸ್ಕಾಂ ನಿರ್ಧರಿಸಿದ್ದು, ಅರ್ಜಿ ಸಲ್ಲಿಕೆಗೆ ಜುಲೈ 6, 2026 ಅನ್ನು ಕಡೆಯ ದಿನಾಂಕವಾಗಿ ನಿಗದಿಪಡಿಸಿದೆ.
ಯಾವ ಕಟ್ಟಡಗಳಿಗೆ ಈ ವಿನಾಯಿತಿ ಅನ್ವಯ?:
ಬೆಸ್ಕಾಂ ವ್ಯಾಪ್ತಿಯಲ್ಲಿ ಬರುವ 2400 ಚದರ ಅಡಿವರೆಗಿನ (ಶೇ. 20ರಷ್ಟು ಹೆಚ್ಚುವರಿ ವ್ಯತ್ಯಾಸದ ಮಿತಿಯೊಂದಿಗೆ) ನಿವೇಶನಗಳಲ್ಲಿ ನಿರ್ಮಿಸಿರುವ ವಸತಿ ಕಟ್ಟಡಗಳಿಗೆ ಒಸಿ (OC) ವಿನಾಯಿತಿ ನೀಡಲಾಗಿದೆ. ಜಿ+3 (G+3) ಅಥವಾ ಸ್ಟಿಲ್ಟ್ ಪಾರ್ಕಿಂಗ್ (Stilt Parking) + 4 ಮಹಡಿಗಳಿರುವ ಕಟ್ಟಡಗಳ ಮಾಲೀಕರು ಈ ಯೋಜನೆಯ ಲಾಭ ಪಡೆಯಬಹುದು.
ಗಮನಿಸಿ: ಮೇ 31, 2026ರಂದು ಅಥವಾ ಅದಕ್ಕೂ ಮೊದಲು ಪೂರ್ಣಗೊಂಡಿರುವ ವಸತಿ ಕಟ್ಟಡಗಳಿಗೆ ಮಾತ್ರ ಈ ನಿಯಮ ಅನ್ವಯವಾಗುತ್ತದೆ.

ರಾಜ್ಯ ಸರ್ಕಾರ ಈ ಕುರಿತು ಜೂನ್ 22, 2026 ರಂದು ಆದೇಶ ಹೊರಡಿಸಿದ್ದು, 15 ದಿನಗಳೊಳಗೆ ಅರ್ಜಿ ಸಲ್ಲಿಸಲು ಸೂಚಿಸಿದೆ.
ಅರ್ಜಿ ಸಲ್ಲಿಕೆ ಎಲ್ಲಿ ಮತ್ತು ಹೇಗೆ?:
ಬೆಸ್ಕಾಂ ಈಗಾಗಲೇ ಈ ಪ್ರಕ್ರಿಯೆಗೆ ಚಾಲನೆ ನೀಡಿದೆ. ಸಾರ್ವಜನಿಕರು ತಮ್ಮ ಹತ್ತಿರದ ಬೆಸ್ಕಾಂ ಉಪ ವಿಭಾಗ ಕಚೇರಿಗಳಿಗೆ ಭೇಟಿ ನೀಡಿ ಅಥವಾ ಬೆಸ್ಕಾಂ ಅಧಿಕೃತ ಆನ್‌ಲೈನ್ ಜಾಲತಾಣದ ಮೂಲಕ ಅರ್ಜಿ ಸಲ್ಲಿಸಿ ಈ ಮಹತ್ವದ ಯೋಜನೆಯ ಉಪಯೋಗ ಪಡೆಯಬಹುದಾಗಿದೆ.
ರಜಾ ದಿನಗಳಲ್ಲೂ ಕಚೇರಿ ಓಪನ್:
ಅರ್ಜಿ ಸಲ್ಲಿಸಲು ಸಮಯಾವಕಾಶ ಕಡಿಮೆ ಇರುವುದರಿಂದ, ಸಾರ್ವಜನಿಕರ ಅನುಕೂಲಕ್ಕಾಗಿ ಬೆಸ್ಕಾಂ ತನ್ನ ಉಪ ವಿಭಾಗ ಕಚೇರಿಗಳನ್ನು ಈ ಕೆಳಗಿನ ಸಾರ್ವತ್ರಿಕ ರಜಾ ದಿನಗಳಲ್ಲೂ ತೆರೆದಿರುತ್ತದೆ:
ಜೂನ್ 26 (ಮೊಹರಂ ಕೊನೆಯ ದಿನ)
ಜೂನ್ 27 (ನಾಲ್ಕನೇ ಶನಿವಾರ)
ಜೂನ್ 28 (ಭಾನುವಾರ)
ಜುಲೈ 5 (ಭಾನುವಾರ)
ಶಾಶ್ವತ ವಿದ್ಯುತ್ ಸಂಪರ್ಕ ಪಡೆಯಲು 3 ಮಾರ್ಗಸೂಚಿಗಳು:
ರಾಜ್ಯ ಸರ್ಕಾರದ ಆದೇಶದಂತೆ, ವಿವಿಧ ಹಂತದಲ್ಲಿರುವ ಮನೆ ಮಾಲೀಕರಿಗೆ ಬೆಸ್ಕಾಂ ಪ್ರತ್ಯೇಕ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿದೆ:
ಶಾಶ್ವತ ಸಂಪರ್ಕಕ್ಕೆ ಈಗಾಗಲೇ ಅರ್ಜಿ ಸಲ್ಲಿಸಿದವರು: ಮೇ 31, 2026ರೊಳಗೆ ಕಟ್ಟಡ ಪೂರ್ಣಗೊಂಡು, ಶಾಶ್ವತ ಸಂಪರ್ಕಕ್ಕೆ ಅರ್ಜಿ ಸಲ್ಲಿಸಿದ್ದರೆ, ಬೆಸ್ಕಾಂ ಸೇವಾ ಸಂಪರ್ಕ ಕಲ್ಪಿಸುವ ಅಧಿಕಾರಿಗಳ ಸಮ್ಮುಖದಲ್ಲಿ ಕಟ್ಟಡದ ಜಿಯೋ ಟ್ಯಾಗ್ (Geo-Tag) ಆಧರಿತ ಫೋಟೋ ಸಲ್ಲಿಸಿ ಸಂಪರ್ಕ ಪಡೆಯಬೇಕು.
ತಾತ್ಕಾಲಿಕ ವಿದ್ಯುತ್ ಸಂಪರ್ಕ ಮಾತ್ರ ಪಡೆದವರು: ತಾತ್ಕಾಲಿಕ ಸಂಪರ್ಕದಲ್ಲಿದ್ದು, ಶಾಶ್ವತ ಸಂಪರ್ಕಕ್ಕೆ ಇನ್ನೂ ಅರ್ಜಿ ಸಲ್ಲಿಸದಿದ್ದರೆ, ಕಟ್ಟಡದ ಮುಂದೆ ನಿಂತು ತೆಗೆಸಿದ ಜಿಯೋ ಟ್ಯಾಗ್ ಫೋಟೋವನ್ನು ಲಗತ್ತಿಸಿ ಹತ್ತಿರದ ಕಚೇರಿ ಅಥವಾ ಆನ್‌ಲೈನ್ ಮೂಲಕ ಹೊಸದಾಗಿ ಅರ್ಜಿ ನೋಂದಾಯಿಸಿಕೊಳ್ಳಬೇಕು.
ಯಾವುದೇ ಸಂಪರ್ಕ ಪಡೆಯದವರು:
ಮೇ 31, 2026ರೊಳಗೆ ಕಟ್ಟಡ ಪೂರ್ಣಗೊಂಡಿದ್ದರೂ ಯಾವುದೇ ತಾತ್ಕಾಲಿಕ ಅಥವಾ ಶಾಶ್ವತ ವಿದ್ಯುತ್ ಸಂಪರ್ಕ ಪಡೆಯದಿದ್ದರೆ, ಮಾಲೀಕರು ಕಟ್ಟಡದ ಸಮ್ಮುಖದಲ್ಲಿ ತೆಗೆಸಿದ ಜಿಯೋ ಟ್ಯಾಗ್ ಫೋಟೋದೊಂದಿಗೆ ಬೆಸ್ಕಾಂ ಕಚೇರಿಗೆ ತೆರಳಿ ಅಥವಾ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸುವುದು ಕಡ್ಡಾಯ.






















