ಬೆಂಗಳೂರು, ಜೂ.24 www.bengaluruwire.com: ಪೊಲೀಸ್ ಇಲಾಖೆಯಲ್ಲಿ ಮಹತ್ವದ ಬದಲಾವಣೆ ಮಾಡಿರುವ ರಾಜ್ಯ ಸರ್ಕಾರ, ಡಿಐಜಿಪಿ (ನೇಮಕಾತಿ) ಆಗಿದ್ದ ಐಪಿಎಸ್ ಅಧಿಕಾರಿ ಎಂ.ಎನ್.ಅನುಚೇತ್ ಅವರನ್ನು ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಆಯುಕ್ತರಾಗಿ ವರ್ಗಾವಣೆ ಮಾಡಿ ಆದೇಶ ಹೊರಡಿಸಿದೆ.
ಈ ಕುರಿತು ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ (ಡಿಪಿಎಆರ್) ವಿಧಾನಸೌಧದಿಂದ ಜೂನ್ 24 ರ ಬುಧವಾರ ಅಧಿಕೃತ ಅಧಿಸೂಚನೆ ಹೊರಡಿಸಿದೆ. ವಾರ್ತಾ ಇಲಾಖೆಯ ಹಾಲಿ ಆಯುಕ್ತರಾಗಿದ್ದ ಐಪಿಎಸ್ ಅಧಿಕಾರಿ ಹೇಮಂತ್ ಎಂ.ನಿಂಬಾಳ್ಕರ್ ಅವರನ್ನು ಈ ಹುದ್ದೆಯಿಂದ ವರ್ಗಾವಣೆಗೊಳಿಸಿ, ಅವರ ಸ್ಥಾನಕ್ಕೆ 2009ನೇ ಬ್ಯಾಚ್‌ನ ಐಪಿಎಸ್ ಅಧಿಕಾರಿ ಎಂ.ಎನ್.ಅನುಚೇತ್ ಅವರನ್ನು ನೇಮಿಸಲಾಗಿದೆ.
ಇದರ ಜೊತೆಗೆ, ಯುವಜನ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಆಯುಕ್ತರ ಹುದ್ದೆಯ ಹೆಚ್ಚುವರಿ ಪ್ರಭಾರವನ್ನೂ ಸಹ ಎಂ.ಎನ್.ಅನುಚೇತ್ ಅವರಿಗೆ ವಹಿಸಲಾಗಿದೆ. ಈ ಹಿಂದೆ ಕ್ರೀಡಾ ಇಲಾಖೆ ಆಯುಕ್ತರಾಗಿದ್ದ ಐಎಎಸ್ ಅಧಿಕಾರಿ ಕುಮಾರ್ ಟಿ.ಎಚ್.ಎಂ ಅವರನ್ನು ಸರ್ಕಾರ ವರ್ಗಾವಣೆ ಮಾಡಿದೆ. ಮುಂದಿನ ಆದೇಶದವರೆಗೆ ಎಂ.ಎನ್.ಅನುಚೇತ್ ಅವರು ಎರಡೂ ಇಲಾಖೆಗಳ ಜವಾಬ್ದಾರಿಯನ್ನು ನಿರ್ವಹಿಸಲಿದ್ದಾರೆ.



















