ಬೆಂಗಳೂರು, ಏ.24 www.bengaluruwire.com: ಬೆಂಗಳೂರು ನಗರದಲ್ಲಿ ಈ ಬಾರಿ ಬೇಸಿಗೆಯ ನಡುವೆಯೂ ಕುಡಿಯುವ ನೀರಿನ ಪೂರೈಕೆ ವ್ಯವಸ್ಥೆ ಸುಗಮವಾಗಿದ್ದು, ಯಾವುದೇ ವ್ಯತ್ಯಯ ಉಂಟಾಗದಂತೆ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಬೆಂಗಳೂರು ಜಲಮಂಡಳಿ (BWSSB) ಅಧ್ಯಕ್ಷರಾದ ಡಾ. ರಾಮ್ ಪ್ರಸಾತ್ ಮನೋಹರ್ ತಿಳಿಸಿದ್ದಾರೆ.
ಕಳೆದ ವರ್ಷ ನೀರಿನ ತೀವ್ರ ಅಭಾವ ಎದುರಿಸಿದ್ದ ಕನಕಪುರ ರಸ್ತೆಯ ಬನಗಿರಿನಗರ ಮತ್ತು ಭುವನೇಶ್ವರಿನಗರ ಪ್ರದೇಶಗಳಿಗೆ ಶುಕ್ರವಾರ ಭೇಟಿ ನೀಡಿದ ಅಧ್ಯಕ್ಷರು, ನೀರಿನ ಪೂರೈಕೆಯ ವಾಸ್ತವ ಸ್ಥಿತಿಯನ್ನು ಪರಿಶೀಲಿಸಿದರು. ಈ ವೇಳೆ ಸ್ಥಳೀಯ ನಿವಾಸಿಗಳೊಂದಿಗೆ ನೇರ ಸಂವಾದ ನಡೆಸಿದ ಅವರು, ಸಮಸ್ಯೆಗಳ ಬಗ್ಗೆ ಮಾಹಿತಿ ಪಡೆದರು.
ಸಾರ್ವಜನಿಕರ ಮೆಚ್ಚುಗೆ:
ಬನಗಿರಿ ನಗರದ ನಿವಾಸಿ ಸುಬ್ಬಮ್ಮ ಮಾತನಾಡಿ, “ಹೋದ ವರ್ಷ ನೀರಿಗಾಗಿ ಬಹಳ ಕಷ್ಟಪಟ್ಟಿದ್ದೆವು. ಆದರೆ ಈ ಬಾರಿ ಜಲಮಂಡಳಿಯ ಮುಂಜಾಗ್ರತೆಯಿಂದ ನಮಗೆ ಯಾವುದೇ ತೊಂದರೆಯಾಗಿಲ್ಲ,” ಎಂದು ಸಂತಸ ಹಂಚಿಕೊಂಡರು.

ಮತ್ತೋರ್ವ ನಿವಾಸಿ ಮಲ್ಲಪ್ಪ ಅವರು ಮಿನಿ ಟ್ಯಾಂಕ್ ಮತ್ತು ಕಾವೇರಿ ಸಂಪರ್ಕದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸುತ್ತಲೇ, ತಮ್ಮ ಭಾಗದಲ್ಲಿ ಒಳಚರಂಡಿ (UGD) ವ್ಯವಸ್ಥೆಯನ್ನು ಶೀಘ್ರವಾಗಿ ಕಲ್ಪಿಸುವಂತೆ ಮನವಿ ಮಾಡಿದರು.
ಉಪಮುಖ್ಯಮಂತ್ರಿಗಳ ಸೂಚನೆ ಪಾಲನೆ:
ನಂತರ ಮಾತನಾಡಿದ ಅಧ್ಯಕ್ಷರು, “ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ನಿರ್ದೇಶನದಂತೆ ನಾವು ಕಾರ್ಯನಿರ್ವಹಿಸುತ್ತಿದ್ದೇವೆ. ನಗರದ ನೀರಿನ ಮಟ್ಟದ ಬಗ್ಗೆ ನಾನು ಪ್ರತಿದಿನ ವರದಿ ಪಡೆಯುತ್ತಿದ್ದೇನೆ. ಸಂಚಾರಿ ಕಾವೇರಿ ಟ್ಯಾಂಕರ್‌ಗಳು ಮತ್ತು ಮಿನಿ ಟ್ಯಾಂಕ್‌ಗಳನ್ನು ಆಯಕಟ್ಟಿನ ಜಾಗಗಳಲ್ಲಿ ಬಳಸಲಾಗುತ್ತಿದೆ. ಎಲ್ಲಾದರೂ ವ್ಯತ್ಯಯ ಕಂಡುಬಂದಲ್ಲಿ ತಕ್ಷಣ ಸ್ಪಂದಿಸಲು ನಮ್ಮ ತಂಡ ಸಜ್ಜಾಗಿದೆ,” ಎಂದು ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಜಲಮಂಡಳಿಯ ಮುಖ್ಯ ಅಭಿಯಂತರರಾದ ವೆಂಕಟೇಶ್ ಹಾಗೂ ಇತರೆ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.






















