ಬೆಂಗಳೂರು, ಏ.20 www.bengaluruwire.com: ರಾಜ್ಯದ ಗ್ರಾಮೀಣ ಭಾಗದ ಶಿಕ್ಷಣ ವ್ಯವಸ್ಥೆಯನ್ನು ಬಲಪಡಿಸಲು ಮತ್ತು ಮೂಲಸೌಕರ್ಯಗಳನ್ನು ವೃದ್ಧಿಸಲು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯು ₹501 ಕೋಟಿ ಭರ್ಜರಿ ಕೊಡುಗೆ ನೀಡಿದೆ.
2026-27ನೇ ಸಾಲಿನ ಮೊದಲ ಕಂತಿನ ಅನುದಾನವನ್ನು ಬಿಡುಗಡೆ ಮಾಡಲಾಗಿದ್ದು, ಇದರಿಂದ ಸರ್ಕಾರಿ ಶಾಲೆಗಳ ಅಭಿವೃದ್ಧಿ ಕಾರ್ಯಗಳಿಗೆ ಹೊಸ ಚೈತನ್ಯ ಬಂದಂತಾಗಿದೆ.
ಸಚಿವ ಪ್ರಿಯಾಂಕ್ ಖರ್ಗೆ ಅವರು ಈ ಬಗ್ಗೆ ಮಾಹಿತಿ ನೀಡಿ, ರಾಜ್ಯದ ವಿವಿಧ ಜಿಲ್ಲೆಗಳಿಗೆ ಒಟ್ಟು 50124.40 ಲಕ್ಷ ರೂಪಾಯಿಗಳ ಬೃಹತ್ ಮೊತ್ತವನ್ನು ಹಂಚಿಕೆ ಮಾಡಲಾಗಿದೆ ಎಂದು ತಿಳಿಸಿದ್ದಾರೆ. ಈ ಅನುದಾನವನ್ನು ಏಪ್ರಿಲ್ 2026 ರಿಂದ ಜೂನ್ 2026ರ ಅವಧಿಯೊಳಗೆ ನಿಗದಿಪಡಿಸಿದ ಅಭಿವೃದ್ಧಿ ಕಾರ್ಯಗಳಿಗೆ ಬಳಸಿಕೊಳ್ಳಲು ಸೂಚಿಸಲಾಗಿದೆ.
ಜಿಲ್ಲಾವಾರು ಅನುದಾನದ ವಿವರ ಹೀಗಿದೆ:

ರಾಜ್ಯ ರಾಜಧಾನಿ ಬೆಂಗಳೂರು ನಗರಕ್ಕೆ ಅತಿ ಹೆಚ್ಚು ಅಂದರೆ ಒಟ್ಟು 9322.48 ಲಕ್ಷ ರೂ.ಗಳಲ್ಲಿ 2337.13 ಲಕ್ಷ ರೂ.ಗಳನ್ನು ಮೊದಲ ಕಂತಿನ ರೂಪದಲ್ಲಿ ನೀಡಲಾಗಿದೆ. ಇನ್ನುಳಿದಂತೆ ಜಿಲ್ಲಾವಾರು ಬಿಡುಗಡೆಯಾದ ಮೊತ್ತದ ವಿವರ ಕೆಳಗಿನಂತಿದೆ:
* ಬೆಂಗಳೂರು ಗ್ರಾಮಾಂತರ: 683.27 ಲಕ್ಷ ರೂ.
* ಚಿತ್ರದುರ್ಗ: 1569.77 ಲಕ್ಷ ರೂ.
* ಕೋಲಾರ: 999.53 ಲಕ್ಷ ರೂ.
* ಶಿವಮೊಗ್ಗ: 2174.49 ಲಕ್ಷ ರೂ.
* ತುಮಕೂರು: 1976.06 ಲಕ್ಷ ರೂ.
ಯಾವ ಉದ್ದೇಶಕ್ಕೆ ಬಳಕೆ?:
ಈ ನಿಧಿಯನ್ನು ಪ್ರಮುಖವಾಗಿ ಶಾಲಾ ಶಿಕ್ಷಣ ಯೋಜನೆಗಳು, ಶಾಲಾ ಕಟ್ಟಡಗಳ ದುರಸ್ತಿ, ವಿದ್ಯಾರ್ಥಿ ಕಲ್ಯಾಣ ಕಾರ್ಯಕ್ರಮಗಳು ಹಾಗೂ ಮಕ್ಕಳಿಗೆ ಅಗತ್ಯವಿರುವ ಪಠ್ಯೋಪಕರಣಗಳ ಖರೀದಿಗೆ ವಿನಿಯೋಗಿಸಲಾಗುವುದು. ಜಿಲ್ಲಾಧಿಕಾರಿಗಳು ಮತ್ತು ಶಿಕ್ಷಣಾಧಿಕಾರಿಗಳು ಸಮರ್ಪಕವಾಗಿ ಈ ಹಣವನ್ನು ಬಳಸುವಂತೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ.
ಗ್ರಾಮೀಣಾಭಿವೃದ್ಧಿ ಇಲಾಖೆಯ ಈ ಕ್ರಮವು ಗ್ರಾಮೀಣ ಭಾಗದ ಶೈಕ್ಷಣಿಕ ಗುಣಮಟ್ಟವನ್ನು ಸುಧಾರಿಸಲು ಮತ್ತು ವಿದ್ಯಾರ್ಥಿಗಳಿಗೆ ಉತ್ತಮ ಕಲಿಕಾ ವಾತಾವರಣ ನಿರ್ಮಿಸಲು ಸಹಕಾರಿಯಾಗಲಿದೆ ಎಂದು ಇಲಾಖೆಯ ಪ್ರಕಟಣೆ ತಿಳಿಸಿದೆ.






















