ಬೆಂಗಳೂರು, ಏ.09 www.bengaluruwire.com: ದ್ವಿತೀಯ ಪಿಯುಸಿ ವಿದ್ಯಾರ್ಥಿಗಳ ಬಹುದಿನಗಳ ಕಾಯುವಿಕೆಗೆ ಇಂದು ತೆರೆಬೀಳಲಿದೆ.
2025-26ನೇ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷೆ-1ರ ಫಲಿತಾಂಶವನ್ನು ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿಯು ಇಂದು ಮಧ್ಯಾಹ್ನ 3 ಗಂಟೆಗೆ ಪ್ರಕಟಿಸಲಿದೆ.
ವಿಶೇಷವೆಂದರೆ, ಫಲಿತಾಂಶ ಪ್ರಕಟವಾದ ತಕ್ಷಣವೇ ವಿದ್ಯಾರ್ಥಿಗಳು ಡಿಜಿಲಾಕರ್ (DigiLocker) ಮೂಲಕ ತಮ್ಮ ಅಧಿಕೃತ ಅಂಕಪಟ್ಟಿಯನ್ನು ಡೌನ್‌ಲೋಡ್ ಮಾಡಿಕೊಳ್ಳಲು ಈ ಬಾರಿ ಪ್ರಥಮ ಬಾರಿಗೆ ಅವಕಾಶ ಕಲ್ಪಿಸಲಾಗಿದೆ. ಮಂಡಳಿಯ ಅಧ್ಯಕ್ಷರಾದ ಪ್ರಕಾಶ್ ನಿಟ್ಟಾಲಿ ಅವರು ಈ ಬಗ್ಗೆ ಮಾಹಿತಿ ನೀಡಿದ್ದು, ಚುನಾವಣಾ ನೀತಿ ಸಂಹಿತೆಯ ಹಿನ್ನೆಲೆಯಲ್ಲಿ ಈ ಹಿಂದೆ ನಿಗದಿಯಾಗಿದ್ದ ದಿನಾಂಕಕ್ಕಿಂತ ತುಸು ವಿಳಂಬವಾಗಿ ಇಂದು ಫಲಿತಾಂಶ ಹೊರಬರುತ್ತಿದೆ.
ಫೆಬ್ರವರಿ 28ರಿಂದ ಮಾರ್ಚ್ 17ರವರೆಗೆ ನಡೆದಿದ್ದ ಈ ಪರೀಕ್ಷೆಗೆ ರಾಜ್ಯದ 1,217 ಕೇಂದ್ರಗಳಲ್ಲಿ ಒಟ್ಟು 7,10,363 ವಿದ್ಯಾರ್ಥಿಗಳು ನೋಂದಾಯಿಸಿಕೊಂಡಿದ್ದರು. ಇವರಲ್ಲಿ ವಿಜ್ಞಾನ ವಿಭಾಗದಿಂದ 2.92 ಲಕ್ಷ, ವಾಣಿಜ್ಯ ವಿಭಾಗದಿಂದ 2.11 ಲಕ್ಷ ಹಾಗೂ ಕಲಾ ವಿಭಾಗದಿಂದ 1.42 ಲಕ್ಷ ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದಾರೆ. ವಿದ್ಯಾರ್ಥಿಗಳು ತಮ್ಮ ನೋಂದಣಿ ಸಂಖ್ಯೆ (Registration Number) ಬಳಸಿ ಮಂಡಳಿಯ ಅಧಿಕೃತ ವೆಬ್‌ಸೈಟ್‌ಗಳಲ್ಲಿ ಫಲಿತಾಂಶ ವೀಕ್ಷಿಸಬಹುದು.

ಫಲಿತಾಂಶ ವೀಕ್ಷಿಸುವುದು ಹೇಗೆ?:
ವಿದ್ಯಾರ್ಥಿಗಳು ಕೆಳಗಿನ ಅಧಿಕೃತ ಜಾಲತಾಣಗಳು ಮತ್ತು ಆ್ಯಪ್‌ಗಳ ಮೂಲಕ ಫಲಿತಾಂಶ ಪಡೆಯಬಹುದು: ವೆಬ್‌ಸೈಟ್: karresults.nic.in ಅಥವಾ kseab.karnataka.gov.in ಮೊಬೈಲ್ ಆ್ಯಪ್: ‘ಕರ್ನಾಟಕ ಒನ್’ ಮೊಬೈಲ್ ಅಪ್ಲಿಕೇಶನ್.
ನೇರ ಸಂದೇಶ:
ನೋಂದಾಯಿತ ಮೊಬೈಲ್ ಸಂಖ್ಯೆಗೆ ಎಸ್‌ಎಂಎಸ್ ಮತ್ತು ವಾಟ್ಸ್ ಆ್ಯಪ್ ಮೂಲಕವೂ ಫಲಿತಾಂಶ ರವಾನೆಯಾಗಲಿದೆ. ಈ ಬಾರಿ ಫಲಿತಾಂಶದ ಜೊತೆಗೆ ಜಿಲ್ಲಾವಾರು ಸಾಧನೆ ಹಾಗೂ ಟಾಪರ್‌ಗಳ ಪಟ್ಟಿಯನ್ನು ಮಂಡಳಿಯು ಸುದ್ದಿಗೋಷ್ಠಿಯ ಮೂಲಕ ಬಿಡುಗಡೆ ಮಾಡಲಿದೆ. ವಿದ್ಯಾರ್ಥಿಗಳು ಅಂಕಪಟ್ಟಿಗಾಗಿ ಕಾಲೇಜುಗಳಿಗೆ ಅಲೆಯುವ ಅಗತ್ಯವಿಲ್ಲದೆ ಡಿಜಿಟಲ್ ರೂಪದಲ್ಲಿ ಶೀಘ್ರವಾಗಿ ಪಡೆಯಬಹುದಾಗಿದೆ.























