ಬೆಂಗಳೂರು, ಏ.09 www.bengaluruwire.com: ರಾಜ್ಯ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಳಿಯು ದ್ವಿತೀಯ ಪಿಯುಸಿ ಫಲಿತಾಂಶವನ್ನು ಪ್ರಕಟಿಸಿದ್ದು, ಈ ಬಾರಿ ರಾಜ್ಯದಲ್ಲಿ ಶೇ. 86.48 ರಷ್ಟು ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ.
ಕಳೆದ ವರ್ಷಕ್ಕೆ ಹೋಲಿಸಿದರೆ ಈ ಬಾರಿ ಫಲಿತಾಂಶದಲ್ಲಿ ಶೇ. 13.03 ರಷ್ಟು ಗಣನೀಯ ಏರಿಕೆ ಕಂಡುಬಂದಿದೆ. ಜಿಲ್ಲಾವಾರು ಪಟ್ಟಿಯಲ್ಲಿ ಉಡುಪಿ (ಶೇ. 96.39) ಮೊದಲ ಸ್ಥಾನ ಅಲಂಕರಿಸಿದ್ದರೆ, ದಕ್ಷಿಣ ಕನ್ನಡ (ಶೇ. 96.35) ದ್ವಿತೀಯ ಸ್ಥಾನ ಪಡೆದಿದೆ. ಯಾದಗಿರಿ ಜಿಲ್ಲೆಯು ಶೇ. 71.21 ಫಲಿತಾಂಶದೊಂದಿಗೆ ಕೊನೆಯ ಸ್ಥಾನದಲ್ಲಿದೆ.
ಲಿಂಗವಾರು ಸಾಧನೆ ಮತ್ತು ಗ್ರಾಮೀಣ ಮುನ್ನಡೆ:
ಎಂದಿನಂತೆ ಈ ಬಾರಿಯೂ ಬಾಲಕಿಯರೇ ಮೇಲುಗೈ ಸಾಧಿಸಿದ್ದು, ಶೇ. 88.70 ರಷ್ಟು ವಿದ್ಯಾರ್ಥಿನಿಯರು ಉತ್ತೀರ್ಣರಾಗಿದ್ದಾರೆ. ಬಾಲಕರ ಉತ್ತೀರ್ಣ ಪ್ರಮಾಣ ಶೇ. 83.65 ರಷ್ಟಿದೆ. ವಿಶೇಷವೆಂದರೆ ನಗರ ಪ್ರದೇಶಕ್ಕಿಂತ (ಶೇ. 85) ಗ್ರಾಮೀಣ ಭಾಗದ ವಿದ್ಯಾರ್ಥಿಗಳು (ಶೇ. 87.62) ಹೆಚ್ಚು ಸಾಧನೆ ಮಾಡಿದ್ದಾರೆ.

ಗ್ರೇಟರ್ ಬೆಂಗಳೂರು ಪ್ರಾಧಿಕಾರ (GBA) ಕಾಲೇಜುಗಳ ಸಾಧನೆ:
ಜಿಬಿಎ ವ್ಯಾಪ್ತಿಯ 19 ಪದವಿ ಪೂರ್ವ ಕಾಲೇಜುಗಳಲ್ಲಿ ಶೇ. 74.16 ರಷ್ಟು ಫಲಿತಾಂಶ ದಾಖಲಾಗಿದೆ. ಪರೀಕ್ಷೆಗೆ ಹಾಜರಾಗಿದ್ದ 2,593 ವಿದ್ಯಾರ್ಥಿಗಳಲ್ಲಿ 1,923 ಮಂದಿ ಉತ್ತೀರ್ಣರಾಗಿದ್ದಾರೆ.

ಟಾಪ್ ಕಾಲೇಜುಗಳು: ಪಶ್ಚಿಮ ನಗರ ಪಾಲಿಕೆಯ ಭೈರವೇಶ್ವರನಗರ ಕಾಲೇಜು (ಶೇ. 88.82) ಪ್ರಥಮ ಸ್ಥಾನದಲ್ಲಿದ್ದರೆ, ಕಸ್ತೂರಿಬಾನಗರ ಕಾಲೇಜು ದ್ವಿತೀಯ ಹಾಗೂ ಶ್ರೀರಾಂಪುರ ಕಾಲೇಜು ತೃತೀಯ ಸ್ಥಾನ ಪಡೆದಿವೆ.
ವೈಯಕ್ತಿಕ ಸಾಧಕರು: ವಾಣಿಜ್ಯ ವಿಭಾಗದಲ್ಲಿ ಕ್ಲೀವ್ ಲ್ಯಾಂಡ್ ಟೌನ್ ಕಾಲೇಜಿನ ಫಿರ್ದೋಸ್ ಮತ್ತು ಶಾಜೀದ್ (582 ಅಂಕ) ಸಾಧನೆ ಮಾಡಿದ್ದಾರೆ. ವಿಜ್ಞಾನದಲ್ಲಿ ಅರ್ಫಿನ್ ಖಾನಂ (578 ಅಂಕ) ಹಾಗೂ ಕಲಾ ವಿಭಾಗದಲ್ಲಿ ಭೈರವೇಶ್ವರನಗರದ ಮುಸ್ರತ್ (574 ಅಂಕ) ಗಮನಾರ್ಹ ಸಾಧನೆ ಮಾಡಿದ್ದಾರೆ.
ಸಾಧಕರಿಗೆ ಬಂಪರ್ ಬಹುಮಾನ:
ಅತ್ಯುನ್ನತ ಶ್ರೇಣಿಯಲ್ಲಿ (ಶೇ. 85 ಕ್ಕಿಂತ ಹೆಚ್ಚು) ಉತ್ತೀರ್ಣರಾದ ಜಿಬಿಎ ವ್ಯಾಪ್ತಿಯ 260 ವಿದ್ಯಾರ್ಥಿಗಳಿಗೆ ತಲಾ 35,000 ರೂ. ಪ್ರೋತ್ಸಾಹಧನ ನೀಡುವುದಾಗಿ ಘೋಷಿಸಲಾಗಿದೆ. ಈ ಸಾಧನೆಗೆ ಜಿಬಿಎ ಮುಖ್ಯ ಆಯುಕ್ತರಾದ ಮಹೇಶ್ವರ್ ರಾವ್ ಅಭಿನಂದನೆ ಸಲ್ಲಿಸಿದ್ದಾರೆ.























