ಬೆಂಗಳೂರು, ಅ.21 www.bengaluruwire.com : ರಾಜ್ಯದ ಎಲ್ಲಾ ಅಧಿಸೂಚಿತ ದೇವಾಲಯಗಳಲ್ಲಿ ನಾಳೆಯ ದೀಪಾವಳಿ ಹಬ್ಬದ ಸಂದರ್ಭದಲ್ಲಿ (ಬಲಿಪಾಡ್ಯಮಿ ದಿನದಂದು) ‘ಗೋಪೂಜೆ’ ಕಾರ್ಯಕ್ರಮವನ್ನು ಕಡ್ಡಾಯವಾಗಿ ನಡೆಸಲು ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮಾದಾಯ ದತ್ತಿಗಳ ಇಲಾಖೆಯು ಆದೇಶ ನೀಡಿದೆ.
ಧಾರ್ಮಿಕ ದತ್ತಿ ಇಲಾಖೆಯ ವ್ಯಾಪ್ತಿಗೆ ಒಳಪಡುವ ರಾಜ್ಯದ ಎಲ್ಲ ಅಧಿಸೂಚಿತ ದೇವಾಲಯಗಳ ಕಾರ್ಯನಿರ್ವಾಹಕ ಅಧಿಕಾರಿಗಳು, ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರು, ಆಡಳಿತಾಧಿಕಾರಿಗಳು ಮತ್ತು ಅನುವಂಶಿಕ ಮೊಕ್ತಸರರಿಗೆ ಇಲಾಖೆಯ ಆಯುಕ್ತರ ಪರವಾಗಿ ಈ ಸುತ್ತೋಲೆಯನ್ನು ಹೊರಡಿಸಲಾಗಿದೆ.
ಸಾರಿಗೆ ಮತ್ತು ಮುಜರಾಯಿ ಸಚಿವರ ಸೂಚನೆ:
ರಾಜ್ಯದ ಸಾರಿಗೆ ಮತ್ತು ಮುಜರಾಯಿ ಸಚಿವರ ಮೌಖಿಕ ನಿರ್ದೇಶನದಂತೆ ಈ ಗೋಪೂಜೆ ಕಾರ್ಯಕ್ರಮವನ್ನು ಆಚರಿಸಲು ಸೂಚಿಸಲಾಗಿದೆ. ಹಿಂದೂ ಧರ್ಮದಲ್ಲಿ ಗೋವನ್ನು ‘ಗೋಮಾತೆ’ ಎಂದು ವಿಶೇಷ ಸ್ಥಾನಮಾನ ನೀಡಿ ಪೂಜಿಸಲಾಗುತ್ತಿದೆ.

ಅವರ ಸೂಚನೆಯಂತೆ, ದೀಪಾವಳಿ (ಬಲಿಪಾಡ್ಯಮಿ) ದಿನದಂದು ಗೋವುಗಳಿಗೆ ಸ್ನಾನ ಮಾಡಿಸಿ, ಅರಿಶಿನ, ಕುಂಕುಮ ಮತ್ತು ಹೂವುಗಳಿಂದ ಅಲಂಕರಿಸಬೇಕು. ನಂತರ ಅಕ್ಕಿ, ಬೆಲ್ಲ, ಹಣ್ಣು ಮುಂತಾದ ‘ಗೋಗ್ರಾಸ’ವನ್ನು ನೀಡಿದ ನಂತರ ಸಂಜೆ ಗೋಪೂಜೆ ಕಾರ್ಯಕ್ರಮವನ್ನು ಯಶಸ್ವಿಗೊಳಿಸಲು ಕೋರಲಾಗಿದೆ.
ಸಂಜೆ ಗೋಪೂಜೆಗೆ ಸೂಚನೆ:
ಧಾರ್ಮಿಕ ಮತ್ತು ಸಾಂಸ್ಕೃತಿಕ ಪರಂಪರೆಯ ಅವಿಭಾಜ್ಯ ಅಂಗವಾಗಿರುವ ಗೋವುಗಳ ಮಹತ್ವ ಮತ್ತು ಸಂರಕ್ಷಣೆಯ ಬಗ್ಗೆ ಜನ ಜಾಗೃತಿ ಮೂಡಿಸುವ ಮಹತ್ತರ ಉದ್ದೇಶ ಈ ಆದೇಶದ ಹಿಂದಿದೆ. ಈ ಆದೇಶವನ್ನು ಜಿಲ್ಲಾಧಿಕಾರಿಗಳು, ಸಹಾಯಕ ಆಯುಕ್ತರು ಹಾಗೂ ಉಪವಿಭಾಗಾಧಿಕಾರಿಗಳಿಗೂ ಕಳುಹಿಸಲಾಗಿದೆ.























