ಟೋಕಿಯೋ, ಆ.8 www.bengaluruwire.com :
ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಸಚಿವ ಡಾ.ಆರ್. ಮುರುಗೇಶ ನಿರಾಣಿ ನೇತೃತ್ವದ ನಿಯೋಗ ಜಪಾನ್‌ನಲ್ಲಿ ಕೈಗೊಂಡಿರುವ ಮೂರು ದಿನಗಳ ರೋಡ್‌ಶೋ ವೇಳೆ ಖ್ಯಾತ ಕಂಪನಿಗಳ ಮುಖ್ಯಸ್ಥರನ್ನು ಭೇಟಿಯಾಗಿ ನವೆಂಬರ್ 2 ರಿಂದ 4ರವರೆಗೆ ಬೆಂಗಳೂರಿನಲ್ಲಿ ನಡೆಯಲಿರುವ ಜಾಗತಿಕ ಬಂಡವಾಳ ಹೂಡಿಕೆದಾರರ ಸಮಾವೇಶಕ್ಕೆ ಔಪಚಾರಿಕ ಆಹ್ವಾನ ನೀಡಿದರು.
ಜಪಾನ್ ಮೂಲದ ಮಿಟ್ಸುಯಿ ಕಂಪನಿ ಅಧಿಕಾರಿಗಳನ್ನು ಟೋಕಿಯೋದಲ್ಲಿ ಸೋಮವಾರ ಭೇಟಿಯಾಗಿ, ಕರ್ನಾಟಕದಲ್ಲಿ ಹೆಚ್ಚುವರಿ ಹೂಡಿಕೆ ಮಾಡುವಂತೆ ಕೋರಿದರು. ಈ ಸಂದರ್ಭದಲ್ಲಿ ಮಿಟ್ಸುಯಿ ಕಂಪನಿಯ ಉಪ ವ್ಯವಸ್ಥಾಪಕ ನಿರ್ದೇಶಕ ಯೂ, ವ್ಯವಸ್ಥಾಪಕ ನಿರ್ದೇಶಕ ಸೈಯದ್ ಫೈಸಲ್ ಅಶ್ರಫ್ ಉಪಸ್ಥಿತರಿದ್ದರು.

ಇದಲ್ಲದೆ, ಟೊಯೊಟಾ ಗ್ರೂಪ್ ಅಧ್ಯಕ್ಷರಿಗೆ ಹೂಡಿಕೆದಾರರ ಸಮಾವೇಶಕ್ಕೆ ಆಗಮಿಸುವಂತೆ ಕೋರಿದರು. ಟೊಯೊಟಾ ಗ್ರೂಪ್‌ನ ಗ್ಲೋಬಲ್ ಎಕ್ಸ್‌ಟರ್ನಲ್ ಅಫೇರ್ಸ್ ವಿಭಾಗದ ಪ್ರಧಾನ ವ್ಯವಸ್ಥಾಪಕಿ ಸೌರಿ ತ್ಸುಚಿಯಾ ಹಾಗೂ ಗ್ರೂಪ್ ಮ್ಯಾನೇಜರ್ ತಕಾಕಾ ಕುಬೋ ಅವರಿಗೆ ಕರ್ನಾಟಕದ ಉದ್ಯಮ ಸ್ನೇಹಿ ನೀತಿಗಳು ಮತ್ತು ರಾಜ್ಯದಲ್ಲಿ ಹೆಚ್ಚುವರಿ ಹೂಡಿಕೆಗೆ ಇರುವ ಅವಕಾಶಗಳ ಕುರಿತು ಸಚಿವ ನಿರಾಣಿ ಹಾಗೂ ಕೈಗಾರಿಕಾಭಿವೃದ್ಧಿ ಆಯುಕ್ತರಾದ ಗುಂಜನ್ ಕೃಷ್ಣ ವಿವರಣೆ ನೀಡಿದರು.
ಈ ಸಂದರ್ಭದಲ್ಲಿ ಜಪಾನ್‌ನಲ್ಲಿರುವ ಭಾರತೀಯ ರಾಯಭಾರ ಕಚೇರಿಯ ಪ್ರಥಮ ಕಾರ್ಯದರ್ಶಿ (ವಾಣಿಜ್ಯ) ಮನೋಜ್ ನೇಗಿ ಉಪಸ್ಥಿತರಿದ್ದರು.























