ಬೆಂಗಳೂರು ( www.bengaluruwire.com ) :
ಕೊರೋನಾ ಸಂಕಷ್ಟದಲ್ಲಿ ಬಿಬಿಎಂಪಿ ವ್ಯಾಪ್ತಿಯ ಸಣ್ಣ ಮತ್ತು ಮಧ್ಯಮ ಪ್ರಮಾಣದ ಪತ್ರಿಕೆಗಳಿಗೆ ಸರ್ಕಾರದಿಂದ ಅಥವಾ ಬಿಬಿಎಂಪಿಯಾಗಲಿ ಸೂಕ್ತ ರೀತಿಯಲ್ಲಿ ಜಾಹೀರಾತು ನೀಡದ ಕಾರಣ ಪತ್ರಕರ್ತರಿಗೆ ಬಹಳ ತೊಂದರೆಯಾಗಿದ್ದು, ಈ ಬಗ್ಗೆ ಸೂಕ್ತ ಕ್ರಮ ವಹಿಸುವಂತೆ ವಿವಿಧ ಪತ್ರಿಕೆಗಳ ಪತ್ರಕರ್ತರು ಪಾಲಿಕೆ ಮುಖ್ಯ ಆಯುಕ್ತರನ್ನು ಬುಧವಾರ ಭೇಟಿ ಮಾಡಿ ಮನವಿ ಸಲ್ಲಿಸಿದರು.
2021-22ನೇ ಸಾಲಿನ ಬಿಬಿಎಂಪಿ ಬಜೆಟ್ ನಲ್ಲಿಯೂ ಸಣ್ಣ ಮತ್ತು ಮಧ್ಯಮ ಪ್ರಮಾಣದ ಪತ್ರಿಕೆಗಳಿಗೆ ಜಾಹೀರಾತು ನೀಡಲು ಮೀಸಲಿಟ್ಟ ಅನುದಾನವನ್ನು ಕಡಿತಗೊಳಿಸಲಾಗಿದೆ. ಎರಡು ವರ್ಷಗಳಿಂದ ನೀಡುತ್ತಿದ್ದ ಜಾಹೀರಾತನ್ನಾದರೂ ನೀಡಿ ಸಹಕರಿಸುವಂತೆ ಪತ್ರಕರ್ತರು ಮುಖ್ಯ ಆಯುಕ್ತ ಗೌರವಗುಪ್ತರಿಗೆ ಮನವಿ ಮಾಡಿದರು.
ಮನವಿ ಸ್ವೀಕರಿಸಿ ಮಾತನಾಡಿದ ಮುಖ್ಯ ಆಯುಕ್ತರಾದ ಗೌರವ್ ಗುಪ್ತ ರವರು ಕೋವಿಡ್ ಸಂಕಷ್ಟದಿಂದಾಗಿ ಮತ್ತು ಎಲ್ಲರೂ ಒಟ್ಟಾಗಿ ಕೋವಿಡ್ ವಿರುದ್ಧದ ಹೋರಾಟದಲ್ಲಿದ್ದರಿಂದ ಈ ಬಗ್ಗೆ ಗಮನ ನೀಡಲು ಆಗಿರಲಿಲ್ಲ. ಈಗ ಇದರ ಬಗ್ಗೆ ಚರ್ಚಿಸಿ ಜಾಹೀರಾತು ಬಿಡುಗಡೆ ಮಾಡಲು ಕ್ರಮಕೈಗೊಳ್ಳಲಾಗುವುದು ಎಂದರು.
ಈ ಸಂದರ್ಭದಲ್ಲಿ ಪತ್ರಕರ್ತರಾದ ಲಿಂಗರಾಜು ನೊಣವಿನಕೆರೆ, ಅಮರನಾಥ, ಪ್ರಸನ್ನ, ವೆಂಕಟೇಶ್ ಪೈ , ವಿಜಯ್ ಕುಮಾರ್, ಪ್ರಭುಸ್ವಾಮಿ, ರವಿದಾಸ್, ಪದ್ಮನಾಭ, ಕೃಷ್ಣಮೂರ್ತಿ, ಅರುಣ್, ಕಿರಣ್, ಚೈತನ್ಯ ಬಾಬು, ಗಜೇಂದ್ರ ಡಿ.ಮುನಿರಾಜು, ಜೆ.ಕೆ.ಮಹೇಶ್, ಸಿದ್ದಪ್ಪಾಜಿ ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.






















