ಬೆಂಗಳೂರು, ಆ.07 www.bengaluruwire.com: ಪಶ್ಚಿಮ ದಿಕ್ಕಿನಿಂದ ಸಿಲಿಕಾನ್ ಸಿಟಿ ಬೆಂಗಳೂರಿಗೆ ಪ್ರವೇಶ ಕಲ್ಪಿಸುವ ಪ್ರಮುಖ ದ್ವಾರವೇ ಮೈಸೂರು ರಸ್ತೆ. ಆದರೆ, ಈ ರಸ್ತೆಯಲ್ಲಿ ಒಮ್ಮೆ ಸಂಚರಿಸಿದರೆ ಸಾಕು, ವಾಹನ ಸವಾರರ ಮೂಳೆಗಳು ಸಡಿಲವಾಗುವುದು ಗ್ಯಾರಂಟಿ.
ಜ್ಞಾನಭಾರತಿ ವೃತ್ತದಿಂದ ದೀಪಾಂಜಲಿನಗರ ವೃತ್ತದ ತನಕದ ಸುಮಾರು ಮೂರು ಕಿಲೋಮೀಟರ್ ರಸ್ತೆಯ ಸ್ಥಿತಿ ಈಗ ಶೋಚನೀಯವಾಗಿದ್ದು, ಬೆಂಗಳೂರು ಪಶ್ಚಿಮ ನಗರ ಪಾಲಿಕೆಯ ಅಧಿಕಾರಿಗಳ ದಿವ್ಯ ನಿರ್ಲಕ್ಷ್ಯಕ್ಕೆ ಕನ್ನಡಿಯಂತಿದೆ.
ವಾಹನ ದಟ್ಟಣೆಯ (Peak Hour) ಅವಧಿಯಲ್ಲಿ ಪ್ರತಿ ಗಂಟೆಗೆ ಬರೋಬ್ಬರಿ 50,000 ವಾಹನಗಳು ಸಂಚರಿಸುವ ಈ ಮಹತ್ವದ ರಸ್ತೆಗೆ ಡಾಂಬರ್ ಭಾಗ್ಯ ಕರುಣಿಸಲು ಪಾಲಿಕೆಯ ಅಧಿಕಾರಿಗಳಿಗೆ ಸಮಯವಿಲ್ಲದಂತಾಗಿದೆ. ದಿನನಿತ್ಯ ಸಾವಿರಾರು ಭಾರೀ ವಾಹನಗಳು ಓಡಾಡುವ ಈ ರಸ್ತೆಯ ಮೇಲ್ಪದರ ಸಂಪೂರ್ಣ ಕಿತ್ತುಹೋಗಿದ್ದು, ದ್ವಿಚಕ್ರ ವಾಹನ ಸವಾರರಿಗೆ ಇದು ಅಕ್ಷರಶಃ ಮರಣಮೃದಂಗ ಬಾರಿಸುತ್ತಿದೆ.

ಬಾಟಲ್ ನೆಕ್ ಆಗಿರುವ ಜ್ಞಾನಭಾರತಿ ಸೇತುವೆ:

ಜ್ಞಾನಭಾರತಿ ವೃತ್ತದ ಬಳಿಯಿರುವ ರಾಜಕಾಲುವೆ ಸೇತುವೆ ಅತ್ಯಂತ ಹಳೆಯದಾಗಿದ್ದು, ಕಿರಿದಾಗಿದೆ. ಇದೇ ಈ ಭಾಗದ ಪ್ರಮುಖ ‘ಬಾಟಲ್ ನೆಕ್’ (Bottleneck). ವಾರಾಂತ್ಯ ಹಾಗೂ ಪೀಕ್ ಅವರ್ ಟ್ರಾಫಿಕ್‌ನಲ್ಲಿ ರಾಜರಾಜೇಶ್ವರಿ ಕಮಾನಿನಿಂದ ಜ್ಞಾನಭಾರತಿ ವೃತ್ತ ದಾಟಲು ಬರೋಬ್ಬರಿ 10ರಿಂದ 15 ನಿಮಿಷ ಬೇಕಾಗುತ್ತಿದೆ. ಇಲ್ಲಿ ರಸ್ತೆಯ ಮೇಲ್ಪದರ ಎದ್ದುಹೋಗಿರುವುದು ವಾಹನಗಳ ಆಮೆಗತಿಗೆ ಪ್ರಮುಖ ಕಾರಣ.
ಅಪಘಾತಗಳಿಗೆ ಆಹ್ವಾನ ನೀಡುತ್ತಿರುವ ರಸ್ತೆಗುಂಡಿಗಳು:
ರಾಜರಾಜೇಶ್ವರಿ ಕಮಾನಿನಿಂದ ನಾಯಂಡಹಳ್ಳಿ ಮೇಲ್ಸೇತುವೆ ಕಡೆಗೆ ಸಾಗುವ ಮಾರ್ಗದಲ್ಲಿ ಯಮಸ್ವರೂಪಿ ರಸ್ತೆಗುಂಡಿಗಳು ಬಾಯ್ತೆರೆದುಕೊಂಡಿವೆ. ಗುಂಡಿ ತಪ್ಪಿಸಲು ಹೋಗಿ ದ್ವಿಚಕ್ರ ವಾಹನಗಳು ಮತ್ತು ಕಾರುಗಳು ಪರಸ್ಪರ ಡಿಕ್ಕಿಯಾಗಿ ನಿತ್ಯ ಅಪಘಾತಗಳು ಸಂಭವಿಸುತ್ತಿವೆ ಎಂಬುದು ಸ್ಥಳೀಯರ ಆಕ್ರೋಶದ ನುಡಿ. ಸವಾರರ ಪ್ರಾಣ ಹೋದ ಮೇಲೆ ಪಾಲಿಕೆ ಎಚ್ಚೆತ್ತುಕೊಳ್ಳಲಿದೆಯೇ ಎಂಬುದು ಸಾರ್ವಜನಿಕರ ಪ್ರಶ್ನೆ.
ಕಾಟಾಚಾರದ ಅಭಿವೃದ್ಧಿ, ಗುತ್ತಿಗೆದಾರನ ಹಠ:
ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಭಾಗವಾಗಿರುವ ‘ಬಿ-ಸ್ಮೈಲ್’ (B-SMILE) ಸಂಸ್ಥೆಯು, ಬಿಎಚ್‌ಇಎಲ್‌ನಿಂದ ನಾಯಂಡಹಳ್ಳಿ ಫ್ಲೈಓವರ್ ಶುರುವಾಗುವ ತನಕದ ರಸ್ತೆಯನ್ನು ‘ಹೈಡೆನ್ಸಿಟಿ ಕಾರಿಡಾರ್’ ಎಂಬ ಕಾರಣಕ್ಕೆ ಸ್ವಲ್ಪ ಭಾಗ ಮಾತ್ರ ಅಭಿವೃದ್ಧಿಪಡಿಸಿ ಕೈತೊಳೆದುಕೊಂಡಿದೆ. ನಾಯಂಡಹಳ್ಳಿ ಬಳಿ ಫ್ಲೈಓವರ್ ಮೇಲೆ ಮಾತ್ರ ಎರಡೂ ಬದಿ ಡಾಂಬರೀಕರಣ ಮಾಡಲಾಗಿದ್ದು, ಉಳಿದ ಕಡೆಗಳಲ್ಲಿ ರಸ್ತೆಗೆ ಡಾಂಬರ್ ಬಿದ್ದು ಹಲವು ವರ್ಷಗಳೇ ಕಳೆದಿವೆ. ‘ಬಿ-ಸ್ಮೈಲ್’ ಹಾಗೂ ಪಶ್ಚಿಮ ಪಾಲಿಕೆ ನಡುವಿನ ಸಂಯೋಜನೆ ಕೊರತೆಯಿಂದ ರಸ್ತೆ ಮತ್ತಷ್ಟು ಹಾಳಾಗಿ ವಾಹನ ಸವಾರರ ಮುಖದಲ್ಲಿ “ಸ್ಮೈಲ್” ಇಲ್ಲದಂತಾಗಿದೆ.
ಪಾಲಿಕೆಯ ಉನ್ನತ ಮೂಲಗಳ ಪ್ರಕಾರ, ಕಳೆದ ವರ್ಷವೇ ಈ ರಸ್ತೆ ಅಭಿವೃದ್ಧಿಗೆ ಗುತ್ತಿಗೆದಾರನಿಗೆ ಕಾರ್ಯಾದೇಶ (Work Order) ನೀಡಲಾಗಿತ್ತು. ಆದರೆ ಆತ ಕಾಮಗಾರಿ ಆರಂಭಿಸಲಿಲ್ಲ. ಈಗ ಕಚ್ಚಾವಸ್ತುಗಳ ದರ ಏರಿಕೆಯಾಗಿದ್ದು, ಪ್ರಸ್ತುತ ಮಾರುಕಟ್ಟೆ ದರದಂತೆ ಹಣ ನೀಡಿದರೆ ಮಾತ್ರ ಕೆಲಸ ಮಾಡುವುದಾಗಿ ಗುತ್ತಿಗೆದಾರ ಪಟ್ಟು ಹಿಡಿದಿದ್ದಾನೆ. ಗುತ್ತಿಗೆದಾರನ ಹಠ ಹಾಗೂ ಅಧಿಕಾರಿಗಳ ನಿರ್ಲಕ್ಷ್ಯದ ನಡುವೆ ಸಾರ್ವಜನಿಕರು ಬಲಿಯಾಗುತ್ತಿದ್ದಾರೆ. ಈ ಬಗ್ಗೆ ಪಶ್ಚಿಮ ನಗರ ಪಾಲಿಕೆ ಮುಖ್ಯ ಅಭಿಯಂತರರಾದ ಬಸವರಾಜ ಕಬಾಡೆಯನ್ನು ಸಂಪರ್ಕಿಸಲು ಪ್ರಯತ್ನಿಸಿದರೂ ಅವರು ಪ್ರತಿಕ್ರಿಯೆಗೆ ಲಭ್ಯರಾಗಿಲ್ಲ.
ಊರೆಲ್ಲಾ ಪರಿಶೀಲನೆ ನಡೆಸುವ ಗ್ರೇಟರ್ ಬೆಂಗಳೂರು ಅಭಿವೃದ್ಧಿ ಸಚಿವ ಕೃಷ್ಣಭೈರೇಗೌಡರಿಗಾಗಲಿ, ಜಿಬಿಎ ಮುಖ್ಯ ಆಯುಕ್ತರಾದ ಮಹೇಶ್ವರ್ ರಾವ್ ಅಥವಾ ಅದೇ ರಸ್ತೆಯಲ್ಲಿ ಪ್ರತಿದಿನ ಓಡಾಡುವ ಪಶ್ಚಿಮ ನಗರ ಪಾಲಿಕೆ ಆಯುಕ್ತರಾದ ಕೆ.ವಿ.ರಾಜೇಂದ್ರ ಅವರಿಗಾಗಲಿ ಈ ದುಸ್ಥಿತಿ ಬಗ್ಗೆ ಕ್ರಮ ಕೈಗೊಳ್ಳಲು ಪುರುಸೊತ್ತು ಸಿಕ್ಕಿಲ್ಲ ಎಂದು ವಾಹನ ಸವಾರರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಅವೈಜ್ಞಾನಿಕ ವಿನ್ಯಾಸ, ವಿಐಪಿಗಳ ಜಾಣಕುರುಡು:
ಇನ್ನು ದೀಪಾಂಜಲಿನಗರ ಸರ್ಕಲ್ ಬಳಿ ನೈಸ್ ರಸ್ತೆಯಿಂದ ಬರುವ ವಾಹನಗಳು ಮೈಸೂರು ರಸ್ತೆಗೆ ಸೇರುವ ಜಾಗದಲ್ಲಿ ರಸ್ತೆ ವಿನ್ಯಾಸ ಅತ್ಯಂತ ಅವೈಜ್ಞಾನಿಕವಾಗಿದೆ. ದಟ್ಟಣೆ ಅವಧಿಯಲ್ಲಿ ಈ ಸ್ಥಳವೂ ಟ್ರಾಫಿಕ್ ಜಾಮ್‌ಗೆ ಕಾರಣವಾಗುತ್ತಿದೆ.
ಇದೇ ರಸ್ತೆಯಲ್ಲಿ ಪ್ರತಿನಿತ್ಯ ಹಲವಾರು ವಿಐಪಿಗಳು, ಜನಪ್ರತಿನಿಧಿಗಳು ಐಷಾರಾಮಿ ಕಾರುಗಳಲ್ಲಿ ಸಂಚರಿಸುತ್ತಾರೆ. ಆದರೆ, ಜನಸಾಮಾನ್ಯರು ಅನುಭವಿಸುತ್ತಿರುವ ಈ ನರಕಯಾತನೆ ಅವರ ಕಣ್ಣಿಗೆ ಕಾಣದಿರುವುದು ಮಾತ್ರ ಪ್ರಜಾಪ್ರಭುತ್ವದ ವಿಪರ್ಯಾಸ. ರಾಜ್ಯದ ಇತರೆ ಜಿಲ್ಲೆಗಳಿಗೆ ಸಂಪರ್ಕ ಕಲ್ಪಿಸುವ ಪ್ರಮುಖ ರಸ್ತೆಯ ಮೇಲೆಯೇ ಪಶ್ಚಿಮ ನಗರ ಪಾಲಿಕೆಗೆ ಹಿಡಿತವಿಲ್ಲದಿರುವುದು ಆಡಳಿತದ ವೈಫಲ್ಯವನ್ನು ಎತ್ತಿತೋರಿಸುತ್ತಿದೆ. ಇನ್ನಾದರೂ ಅಧಿಕಾರಿಗಳು ಎಸಿ ರೂಮ್‌ನಿಂದ ಹೊರಬಂದು, ರಸ್ತೆಗಿಳಿದು ವಾಸ್ತವ ಅರಿಯಬೇಕಿದೆ.




















