ನವದೆಹಲಿ, ಜು.27 www.bengaluruwire.com: ರಾಜ್ಯದ ಬಹುನಿರೀಕ್ಷಿತ ಮೇಕೆದಾಟು ಯೋಜನೆ ವಿಚಾರದಲ್ಲಿ ಕರ್ನಾಟಕಕ್ಕೆ ಭಾರಿ ಮುನ್ನಡೆ ಸಿಕ್ಕಿದೆ. ಮೇಕೆದಾಟು ಜಲಾಶಯ ನಿರ್ಮಾಣಕ್ಕೆ ಕರ್ನಾಟಕವು ತಮಿಳುನಾಡು, ಕೇರಳ ಹಾಗೂ ಪುದುಚೆರಿಯಂತಹ ಕೆಳ ಹರಿವಿನ ರಾಜ್ಯಗಳ ಒಪ್ಪಿಗೆ ಪಡೆಯುವ ಅಗತ್ಯವಿಲ್ಲ ಎಂದು ಕೇಂದ್ರ ಜಲಶಕ್ತಿ ಸಚಿವಾಲಯ ಸ್ಪಷ್ಟಪಡಿಸಿದೆ.
ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ನವದೆಹಲಿಯ ಕರ್ನಾಟಕ ಭವನದಲ್ಲಿ ಇಂದು ರಾಜ್ಯದ ಸಂಸತ್ ಸದಸ್ಯರ ಜೊತೆ ಮಹತ್ವದ ಸಭೆ ನಡೆಸಿ, ರಾಜ್ಯದ ಬರದ ಪರಿಸ್ಥಿತಿ ಹಾಗೂ ಕಾವೇರಿ, ಮೇಕೆದಾಟು, ಮಹದಾಯಿ, ಕೃಷ್ಣ ಸೇರಿದಂತೆ ಪ್ರಮುಖ ನೀರಾವರಿ ಯೋಜನೆಗಳ ಬಗ್ಗೆ ಚರ್ಚೆ ನಡೆಸಿದ್ದಾರೆ. ಇದೇ ದಿನ ಕೇಂದ್ರ ಸರ್ಕಾರದಿಂದ ಈ ಮಹತ್ವದ ಸ್ಪಷ್ಟನೆ ಹೊರಬಿದ್ದಿರುವುದು ಮೇಕೆದಾಟು ಯೋಜನೆ ಅನುಷ್ಠಾನಕ್ಕೆ ಸಂಬಂಧಿಸಿದಂತೆ ರಾಜ್ಯದ ಇಚ್ಛಾಶಕ್ತಿಗೆ ಮತ್ತಷ್ಟು ಬಲ ನೀಡಿದೆ.

ರಾಜ್ಯಸಭೆಯಲ್ಲಿ ಕೇಂದ್ರದ ಉತ್ತರ:
ಜುಲೈ 27, 2026 ರಂದು ರಾಜ್ಯಸಭೆಯ ಪ್ರಶ್ನೋತ್ತರ ಅವಧಿಯಲ್ಲಿ ತಮಿಳುನಾಡಿನ ಸಂಸದ ಡಾ. ಅನ್ಬುಮಣಿ ರಾಮದಾಸ್ ಅವರು ಕಾವೇರಿ ನದಿಗೆ ಅಡ್ಡಲಾಗಿ ಯಾವುದೇ ರಚನೆ ನಿರ್ಮಿಸಲು ಕೆಳ ಹರಿವಿನ ರಾಜ್ಯಗಳ ಒಪ್ಪಿಗೆ ಪಡೆಯಬೇಕೆಂಬ 2018 ರ ಸುಪ್ರೀಂ ಕೋರ್ಟ್ ಆದೇಶದ ಬಗ್ಗೆ ಮತ್ತು ಮೇಕೆದಾಟು ಯೋಜನೆಗೆ ಕರ್ನಾಟಕ ಒಪ್ಪಿಗೆ ಪಡೆದಿದೆಯೇ ಎಂದು ಪ್ರಶ್ನಿಸಿದ್ದರು. ಇದಕ್ಕೆ ಜಲಶಕ್ತಿ ಖಾತೆ ರಾಜ್ಯ ಸಚಿವ ರಾಜ್ ಭೂಷಣ್ ಚೌಧರಿ ಅವರು ಲಿಖಿತ ಉತ್ತರ ನೀಡಿದ್ದಾರೆ.

”16.02.2018 ರ ಸುಪ್ರೀಂ ಕೋರ್ಟ್ ತೀರ್ಪಿನ ಪ್ರಕಾರ, ಕಾವೇರಿ ನದಿಗೆ ಅಡ್ಡಲಾಗಿ ಯಾವುದೇ ರಚನೆಯನ್ನು ನಿರ್ಮಿಸಲು ಕರ್ನಾಟಕವು ತಮಿಳುನಾಡು, ಕೇರಳ ಮತ್ತು ಪುದುಚೇರಿಯಂತಹ ಇತರ ರಾಜ್ಯಗಳ ಒಪ್ಪಿಗೆಯನ್ನು ಪಡೆಯಬೇಕು ಎಂಬ ಉಲ್ಲೇಖ ಎಲ್ಲೂ ಇಲ್ಲ” ಎಂದು ಸಚಿವರು ತಮ್ಮ ಉತ್ತರದಲ್ಲಿ (meke.pdf) ಸ್ಪಷ್ಟವಾಗಿ ತಿಳಿಸಿದ್ದಾರೆ.
ಕಾವೇರಿ ಜಲ ವಿವಾದ ನ್ಯಾಯಾಧಿಕರಣದ (CWDT) 2007 ರ ತೀರ್ಪಿನ 18 ನೇ ಷರತ್ತನ್ನು ಸುಪ್ರೀಂ ಕೋರ್ಟ್ ಎತ್ತಿಹಿಡಿದಿದೆ. ಇದರ ಅನ್ವಯ, ನ್ಯಾಯಾಧಿಕರಣದ ಆದೇಶಕ್ಕೆ ವಿರುದ್ಧವಾಗಿರದೇ, ತನ್ನ ಗಡಿಯೊಳಗೆ ನೀರಿನ ಬಳಕೆಯನ್ನು ನಿಯಂತ್ರಿಸುವ ಅಥವಾ ಅದರ ಪ್ರಯೋಜನವನ್ನು ಪಡೆಯುವ ಯಾವುದೇ ರಾಜ್ಯದ ಹಕ್ಕನ್ನು ಈ ತೀರ್ಪು ನಿರ್ಬಂಧಿಸುವುದಿಲ್ಲ ಎಂಬುದನ್ನು ಸುಪ್ರೀಂ ಕೋರ್ಟ್ ಪುನರುಚ್ಚರಿಸಿದೆ ಎಂದು ಕೇಂದ್ರ ಸರ್ಕಾರ ಸದನಕ್ಕೆ ಮಾಹಿತಿ ನೀಡಿದೆ.
ಯೋಜನೆಯ ಪ್ರಸ್ತುತ ಸ್ಥಿತಿ:
ಕರ್ನಾಟಕ ಸರ್ಕಾರವು 2019 ರಲ್ಲಿ ಸಲ್ಲಿಸಿದ್ದ ಮೇಕೆದಾಟು ಸಮತೋಲನ ಜಲಾಶಯ ಮತ್ತು ಕುಡಿಯುವ ನೀರಿನ ಯೋಜನೆಯ ವಿವರವಾದ ಯೋಜನಾ ವರದಿಯನ್ನು (DPR) ಪ್ರಾಧಿಕಾರಕ್ಕೆ ಹಿಂದಿರುಗಿಸಲಾಗಿದೆ. ಸಿಡಬ್ಲ್ಯುಡಿಟಿ (CWDT) ತೀರ್ಪು ಮತ್ತು ಅಸ್ತಿತ್ವದಲ್ಲಿರುವ ಕೇಂದ್ರ ಜಲ ಆಯೋಗದ (CWC) ಮಾರ್ಗಸೂಚಿಗಳ ಅನ್ವಯ ಪರಿಷ್ಕೃತ ಡಿಪಿಆರ್ ಸಲ್ಲಿಸುವಂತೆ ಸೂಚಿಸಲಾಗಿದೆ ಎಂದು ಕೇಂದ್ರ ಸರ್ಕಾರ ಮಾಹಿತಿ ನೀಡಿದೆ.
ಒಟ್ಟಾರೆಯಾಗಿ, ಮೇಕೆದಾಟು ಯೋಜನೆ ವಿಚಾರದಲ್ಲಿ ಕೇಂದ್ರದ ಈ ಲಿಖಿತ ಹೇಳಿಕೆ ತಮಿಳುನಾಡಿನ ಆಕ್ಷೇಪಗಳಿಗೆ ಬ್ರೇಕ್ ಹಾಕಿದ್ದು, ಯೋಜನೆಗೆ ಶೀಘ್ರ ಅನುಮತಿ ಸಿಗುವ ನಿಟ್ಟಿನಲ್ಲಿ ಕರ್ನಾಟಕದ ಹೋರಾಟಕ್ಕೆ ಆನೆಬಲ ತಂದಿದೆ.




















