ಬೆಂಗಳೂರು, ಜು.24 www.bengaluruwire.com: ಪರಿಸರ ಸ್ನೇಹಿ ಎಲೆಕ್ಟ್ರಿಕ್ ವಾಹನಗಳ (EV) ಬಳಕೆಯನ್ನು ಉತ್ತೇಜಿಸುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರದ ‘ಪಿಎಂ ಇ-ಡ್ರೈವ್’ (PM E-Drive) ಯೋಜನೆಯನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸಲು ಬೆಸ್ಕಾಂ (BESCOM) ಮುಂದಾಗಿದೆ.
ಈ ಯೋಜನೆಯ ಕ್ಯಾಟಗರಿ-ಸಿ ಅಡಿಯಲ್ಲಿ ರಾಜ್ಯದಾದ್ಯಂತ ಸಾರ್ವಜನಿಕ ಇವಿ ಚಾರ್ಜಿಂಗ್ ಕೇಂದ್ರಗಳನ್ನು (Public EV Charging Stations) ಸ್ಥಾಪಿಸುವ ಸಂಬಂಧ ಚಾರ್ಜ್ ಪಾಯಿಂಟ್ ಅಪರೇಟರ್‌ಗಳ (CPO) ಜೊತೆ ಜುಲೈ 27ರ ಸೋಮವಾರದಂದು ಬೆಸ್ಕಾಂ ಸಮಾಲೋಚನಾ ಸಭೆಯನ್ನು ಆಯೋಜಿಸಿದೆ.
ರಾಜ್ಯದಲ್ಲಿ ಇವಿ ಬಳಕೆದಾರರಿಗೆ ಅಗತ್ಯವಿರುವ ಮೂಲಭೂತ ಸೌಲಭ್ಯಗಳನ್ನು ಒದಗಿಸಲು ಬೆಸ್ಕಾಂ ನೋಡಲ್ ಏಜೆನ್ಸಿಯಾಗಿ (State Nodal Agency) ಕಾರ್ಯನಿರ್ವಹಿಸುತ್ತಿದೆ. ಎಲೆಕ್ಟ್ರಿಕ್ ವಾಹನಗಳ ಸಂಖ್ಯೆ ಹೆಚ್ಚುತ್ತಿರುವ ಪ್ರಸ್ತುತ ಸಂದರ್ಭದಲ್ಲಿ, ಚಾರ್ಜಿಂಗ್ ಕೇಂದ್ರಗಳ ಕೊರತೆಯನ್ನು ನೀಗಿಸುವುದು ಈ ಸಭೆಯ ಪ್ರಮುಖ ಉದ್ದೇಶವಾಗಿದೆ.
ಸಭೆಯ ವಿವರಗಳು:

ಸಾರ್ವಜನಿಕ ಚಾರ್ಜಿಂಗ್ ಕೇಂದ್ರಗಳ ಸ್ಥಾಪನೆ, ಸವಾಲುಗಳು ಮತ್ತು ಮುಂದಿನ ಹೆಜ್ಜೆಗಳ ಕುರಿತು ಸಿಪಿಒಗಳ ಜೊತೆ ವಿಸ್ತೃತ ಚರ್ಚೆ ನಡೆಯಲಿದೆ. ಈ ಸಭೆಯು ಜುಲೈ 27 (ಸೋಮವಾರ) ಬೆಳಗ್ಗೆ 11:00 ಗಂಟೆಗೆ ಕೆ.ಆರ್. ವೃತ್ತದಲ್ಲಿರುವ ಬೆಸ್ಕಾಂ ನಿಗಮ ಕಚೇರಿಯ ‘ಬೆಳಕು ಭವನ’ದ ಮೂರನೇ ಮಹಡಿಯಲ್ಲಿ ಜರುಗಲಿದೆ.
ಎಲೆಕ್ಟ್ರಿಕ್ ವಾಹನ ಕ್ಷೇತ್ರದ ಅಭಿವೃದ್ಧಿಯಲ್ಲಿ ಆಸಕ್ತಿ ಹೊಂದಿರುವ ಹಾಗೂ ಮೂಲಸೌಕರ್ಯ ಕಲ್ಪಿಸುವ ನಿಟ್ಟಿನಲ್ಲಿ ಕಾರ್ಯನಿರ್ವಹಿಸುತ್ತಿರುವ ಎಲ್ಲಾ ಆಸಕ್ತ ಚಾರ್ಜ್ ಪಾಯಿಂಟ್ ಅಪರೇಟರ್‌ಗಳು (CPOs) ಈ ಸಭೆಯಲ್ಲಿ ಕಡ್ಡಾಯವಾಗಿ ಭಾಗವಹಿಸುವಂತೆ ಬೆಸ್ಕಾಂ ಮನವಿ ಮಾಡಿದೆ. ಇವಿ ಚಾರ್ಜಿಂಗ್ ನೆಟ್‌ವರ್ಕ್ ವಿಸ್ತರಣೆಗೆ ಸಂಬಂಧಿಸಿದಂತೆ ಅಗತ್ಯ ಸಲಹೆ-ಸೂಚನೆಗಳನ್ನು ನೀಡಲು ಈ ವೇದಿಕೆ ಮುಕ್ತವಾಗಿದೆ.






















