ನವದೆಹಲಿ, ಮೇ.24 www.bengaluruwire.com : ಕೇಂದ್ರ ಗೃಹ ಸಚಿವಾಲಯದ (MHA) ಅಡಿಯಲ್ಲಿ ಕಾರ್ಯನಿರ್ವಹಿಸುವ ‘ಭಾರತೀಯ ಸೈಬರ್ ಅಪರಾಧ ಸಮನ್ವಯ ಕೇಂದ್ರ’ (I4C) ಹಾಗೂ ‘ನ್ಯಾಷನಲ್ ಸೈಬರ್ ಕ್ರೈಮ್ ಥ್ರೆಟ್ ಅನಾಲಿಟಿಕ್ಸ್ ಯೂನಿಟ್’ (NCTAU) ಆಪಲ್ ಐಫೋನ್ ಬಳಕೆದಾರರಿಗೆ ಪ್ರಮುಖ ಎಚ್ಚರಿಕೆಯನ್ನು ರವಾನಿಸಿದೆ.
ಕಳೆದುಹೋದ ಅಥವಾ ಕಳುವಾದ ಐಫೋನ್ಗಳನ್ನೇ ಗುರಿಯಾಗಿಸಿಕೊಂಡು ಸೈಬರ್ ವಂಚಕರು ಫಿಶಿಂಗ್ (Phishing) ಜಾಲ ಬೀಸುತ್ತಿದ್ದಾರೆ ಎಂದು ಮೇ 5, 2026 ರಂದು ಬಿಡುಗಡೆಯಾದ ವರದಿ ತಿಳಿಸಿದೆ.
ಹೇಗೆ ನಡೆಯುತ್ತೆ ವಂಚನೆ?
ಸೈಬರ್ ವಂಚಕರು, ಕಳೆದುಹೋದ ಫೋನ್ ಹೊಂದಿರುವ ವ್ಯಕ್ತಿಗಳಿಗೆ ಆಪಲ್ ಸಪೋರ್ಟ್ (Apple Support) ಅಥವಾ “ಫೈಂಡ್ ಮೈ ಡಿವೈಸ್” ಹೆಸರಿನಲ್ಲಿ ನಕಲಿ ಎಸ್ಎಂಎಸ್ (SMS) ಕಳುಹಿಸುತ್ತಾರೆ.

”ನಿಮ್ಮ ಕಳೆದುಹೋದ ಫೋನ್ ತಾತ್ಕಾಲಿಕವಾಗಿ ಸ್ವಿಚ್ ಆನ್ ಆಗಿದೆ” ಅಥವಾ ಲೊಕೇಶನ್ ಪತ್ತೆಯಾಗಿದೆ ಎಂದು ನಂಬಿಸಿ, ಮೆಸೇಜ್ನಲ್ಲಿ ಒಂದು ಫಿಶಿಂಗ್ ಲಿಂಕ್ ನೀಡಲಾಗಿರುತ್ತದೆ.
ಬಳಕೆದಾರರು ಈ ಲಿಂಕ್ ಕ್ಲಿಕ್ ಮಾಡಿದ ತಕ್ಷಣ, ಅಸಲಿ ಆಪಲ್ ವೆಬ್ಸೈಟ್ನಂತೆಯೇ ಕಾಣುವ ನಕಲಿ ಪೋರ್ಟಲ್ಗೆ ಹೋಗುತ್ತಾರೆ.
ಅಲ್ಲಿ ಬಳಕೆದಾರರ ಆಪಲ್ ಐಡಿ (Apple ID), ಪಾಸ್ವರ್ಡ್ ಹಾಗೂ ಆಪಲ್ ಕಳುಹಿಸುವ ಒಟಿಪಿ (OTP) ದಾಖಲಿಸುವಂತೆ ಸೂಚಿಸಲಾಗುತ್ತದೆ.
ಪರಿಣಾಮವೇನು?
ಒಮ್ಮೆ ನೀವು ಒಟಿಪಿ ಮತ್ತು ಪಾಸ್ವರ್ಡ್ ನೀಡಿದರೆ, ವಂಚಕರು ನಿಮ್ಮ ಆಪಲ್ ಖಾತೆಯ ಸಂಪೂರ್ಣ ನಿಯಂತ್ರಣವನ್ನು ಪಡೆದುಕೊಳ್ಳುತ್ತಾರೆ.
ತಕ್ಷಣವೇ ಕಳುವಾದ ಐಫೋನ್ ಅನ್ನು ನಿಮ್ಮ ಖಾತೆಯಿಂದ ತೆಗೆದುಹಾಕಿ, ‘Find My iPhone’ ಫೀಚರ್ ಅನ್ನು ನಿಷ್ಕ್ರಿಯಗೊಳಿಸುತ್ತಾರೆ.
ಯಾವುದೇ ನಿರ್ಬಂಧಗಳಿಲ್ಲದೆ ಆ ಫೋನ್ ಅನ್ನು ಸುಲಭವಾಗಿ ಬೇರೆಯವರಿಗೆ ಮಾರಾಟ ಮಾಡಲು ಅಥವಾ ಮರುಬಳಕೆ ಮಾಡಲು ಇದು ವಂಚಕರಿಗೆ ದಾರಿ ಮಾಡಿಕೊಡುತ್ತದೆ.
ತೆಗೆದುಕೊಳ್ಳಬೇಕಾದ ಮುನ್ನೆಚ್ಚರಿಕಾ ಕ್ರಮಗಳು:
ಎಸ್ಎಂಎಸ್ ಮೂಲಕ ಬರುವ ಯಾವುದೇ ಅಪರಿಚಿತ ಲಿಂಕ್ಗಳನ್ನು ಕ್ಲಿಕ್ ಮಾಡಬೇಡಿ ಮತ್ತು ಲಾಗಿನ್ ವಿವರಗಳನ್ನು ನೀಡುವ ಮುನ್ನ ಯುಆರ್ಎಲ್ (URL) ಅನ್ನು ಎಚ್ಚರಿಕೆಯಿಂದ ಪರಿಶೀಲಿಸಿ.
ಯಾವುದೇ ಪರಿಶೀಲನೆ ಇಲ್ಲದ ವೆಬ್ಸೈಟ್ಗಳಲ್ಲಿ ನಿಮ್ಮ ಒಟಿಪಿ (OTP) ನಮೂದಿಸಬೇಡಿ ಹಾಗೂ ಇತರರೊಂದಿಗೆ ಹಂಚಿಕೊಳ್ಳಬೇಡಿ.
ಫೋನ್ ಕಳೆದುಹೋದರೆ, ‘ಫೈಂಡ್ ಮೈ ಡಿವೈಸ್’ ಸೇವೆಗಾಗಿ ಅಧಿಕೃತ https://www.icloud.com/find ವೆಬ್ಸೈಟ್ ಅನ್ನು ಮಾತ್ರ ಬಳಸಿ.
ಯಾವಾಗಲೂ ಟು-ಫ್ಯಾಕ್ಟರ್ ಆಥೆಂಟಿಕೇಶನ್ (2FA) ಸಕ್ರಿಯಗೊಳಿಸಿ ಹಾಗೂ ಬಲಿಷ್ಠ ಪಾಸ್ವರ್ಡ್ ಬಳಸಿ.ಸೈಬರ್ ವಂಚನೆಗೆ ಒಳಗಾದರೆ ಅಥವಾ ಫಿಶಿಂಗ್ ಪ್ರಯತ್ನಗಳು ಕಂಡುಬಂದರೆ ತಕ್ಷಣವೇ https://cybercrime.gov.in/ ಪೋರ್ಟಲ್ನಲ್ಲಿ ದೂರು ದಾಖಲಿಸಿ ಅಥವಾ 1930 ಸಹಾಯವಾಣಿಗೆ ಕರೆ ಮಾಡಿ.



















