ಬೆಂಗಳೂರು, ಮೇ.23 www.bengaluruwire.com: ಮುಂಗಾರು ಪ್ರವೇಶಕ್ಕೂ ಮುನ್ನವೇ ಸಂಭಾವ್ಯ ಪ್ರವಾಹ ಹಾಗೂ ಮಳೆ ಹಾನಿ ತಡೆಗಟ್ಟುವ ನಿಟ್ಟಿನಲ್ಲಿ, ಬೆಂಗಳೂರು ಪೂರ್ವ ಹಾಗೂ ಕೇಂದ್ರ ನಗರ ಪಾಲಿಕೆಗಳು ಪೂರ್ವಸಿದ್ಧತಾ ಕಾಮಗಾರಿಗಳನ್ನು ಕೈಗೆತ್ತಿಕೊಂಡಿವೆ.
ಗೆದ್ದಲಹಳ್ಳಿಯಲ್ಲಿ ಬಾಕಿ ಉಳಿದಿರುವ ರೈಲ್ವೆ ವೆಂಟ್ ಕಾಮಗಾರಿಯನ್ನು ಮೇ ಮಾಸಾಂತ್ಯದೊಳಗೆ ಪೂರ್ಣಗೊಳಿಸುವಂತೆ ಪೂರ್ವ ನಗರ ಪಾಲಿಕೆ ಆಯುಕ್ತರಾದ ರಮೇಶ್ ಡಿ.ಎಸ್. ಗಡುವು ನೀಡಿದ್ದರೆ, ಇತ್ತ ಕೇಂದ್ರ ನಗರ ಪಾಲಿಕೆ ವ್ಯಾಪ್ತಿಯಲ್ಲಿ ಅಪಾಯಕಾರಿ ಮರಗಳ ತೆರವು ಕಾರ್ಯಾಚರಣೆ ಭರದಿಂದ ಸಾಗಿದೆ.
ಮೇ 31ರ ಡೆಡ್‌ಲೈನ್: ತ್ವರಿತಗತಿಯಲ್ಲಿ ಬಾಕ್ಸ್ ಪುಶಿಂಗ್ ಕಾಮಗಾರಿ
ಪೂರ್ವ ನಗರ ಪಾಲಿಕೆ ವ್ಯಾಪ್ತಿಯ ಗೆದ್ದಲಹಳ್ಳಿ ಸಾಯಿ ಲೇಔಟ್ ಪ್ರದೇಶದಲ್ಲಿ ನಡೆಯುತ್ತಿರುವ ರೈಲ್ವೆ ವೆಂಟ್ ಕಾಮಗಾರಿ ಹಾಗೂ ಮಳೆ ನೀರು ಕಾಲುವೆ ನಿರ್ವಹಣೆ ಕುರಿತು ಆಯುಕ್ತರಾದ ರಮೇಶ್ ಡಿ.ಎಸ್. ಅವರು ಶನಿವಾರ ಸ್ಥಳ ಪರಿಶೀಲನೆ ನಡೆಸಿದರು.

ಈ ವೇಳೆ ಮಾತನಾಡಿದ ಅವರು, “ರೈಲ್ವೆ ವೆಂಟ್ ಕಾಮಗಾರಿಯ ಭಾಗವಾಗಿ ಬಾಕಿ ಉಳಿದಿರುವ ಸುಮಾರು 12 ಮೀಟರ್ ಬಾಕ್ಸ್ ಪುಶಿಂಗ್ (Box Pushing) ಕಾರ್ಯವನ್ನು ಮೇ 31ರೊಳಗೆ ಕಡ್ಡಾಯವಾಗಿ ಪೂರ್ಣಗೊಳಿಸಬೇಕು,” ಎಂದು ಕಾರ್ಯಪಾಲಕ ಅಭಿಯಂತರರಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು. ಈ ಕಾಮಗಾರಿ ಪೂರ್ಣಗೊಂಡ ತಕ್ಷಣವೇ ರಿಟೈನಿಂಗ್ ವಾಲ್ ನಿರ್ಮಿಸಿ, ಮಳೆ ನೀರು ಸರಾಗವಾಗಿ ಹರಿಯಲು ಅನುವು ಮಾಡಿಕೊಟ್ಟರೆ ಸುತ್ತಮುತ್ತಲ ಪ್ರದೇಶದ ನೆರೆ ಹಾವಳಿಗೆ ಶಾಶ್ವತ ಪರಿಹಾರ ಸಿಗಲಿದೆ ಎಂದು ವಿವರಿಸಿದರು.
ಯುದ್ಧೋಪಾದಿಯಲ್ಲಿ ರಾಜಕಾಲುವೆ ಹೂಳು ತೆರವು
ಗೆದ್ದಲಹಳ್ಳಿ ಬಳಿಯ ರಾಜಕಾಲುವೆಯಲ್ಲಿ ನಡೆಯುತ್ತಿರುವ ವಾರ್ಷಿಕ ಹೂಳು ತೆರವು ಹಾಗೂ ಸ್ವಚ್ಛತಾ ಕಾರ್ಯಗಳನ್ನು ಪರಿಶೀಲಿಸಿದ ಆಯುಕ್ತರು, ಪ್ರಮುಖ ರಸ್ತೆಗಳ ಎರಡೂ ಬದಿಗಳಿಂದ ಕಾಲುವೆಗೆ ಸಂಪರ್ಕ ಕಲ್ಪಿಸುವ ಚರಂಡಿಗಳನ್ನು ಸಂಪೂರ್ಣವಾಗಿ ಸ್ವಚ್ಛಗೊಳಿಸುವಂತೆ ಅಧಿಕಾರಿಗಳಿಗೆ ನಿರ್ದೇಶಿಸಿದರು.
ಸರ್ವಜ್ಞನಗರ ಗಡಿಭಾಗದಲ್ಲಿ ಸಮನ್ವಯ: ಪೂರ್ವ ನಗರ ಪಾಲಿಕೆಗೆ ಹೊಂದಿಕೊಂಡಿರುವ ಸರ್ವಜ್ಞನಗರ ವಿಧಾನಸಭಾ ಕ್ಷೇತ್ರದ ಗಡಿಯ ಮೇಲ್ಭಾಗದ ಕಾಲುವೆಯಿಂದಲೂ ನೀರು ಹರಿದು ಬರುವುದರಿಂದ, ಮೇಲ್ಭಾಗದ ಹೂಳು ಕೆಳಗೆ ಬಂದು ಪ್ರವಾಹ ಸೃಷ್ಟಿಯಾಗುವ ಅಪಾಯವಿರುತ್ತದೆ. ಹೀಗಾಗಿ, ಅಲ್ಲಿನ ಅಧಿಕಾರಿಗಳೊಂದಿಗೆ ಸೂಕ್ತ ಸಮನ್ವಯ ಸಾಧಿಸಿ ಕಾಲುವೆ ನಿರ್ವಹಣೆ ಪೂರ್ಣಗೊಳಿಸಲು ಸೂಚಿಸಲಾಗಿದೆ.
ಸ್ಥಳ ಪರಿಶೀಲನೆ ವೇಳೆ ಕಾರ್ಯಪಾಲಕ ಅಭಿಯಂತರರಾದ ರಾಘವೇಂದ್ರ ಬಿ.ಎನ್., ಹಾಗೂ ಸಹಾಯಕ ಕಾರ್ಯಪಾಲಕ ಅಭಿಯಂತರರು ಹಾಜರಿದ್ದರು.
ಕೇಂದ್ರ ನಗರ ಪಾಲಿಕೆ: ಅಪಾಯಕಾರಿ ಮರಗಳ ತೆರವು ಕಾರ್ಯಾಚರಣೆ
ಇನ್ನೊಂದೆಡೆ, ಮಳೆ-ಗಾಳಿಗೆ ಉರುಳಿಬೀಳುವ ಮರಗಳಿಂದ ಸಾರ್ವಜನಿಕರಿಗೆ ಹಾಗೂ ವಾಹನ ಸವಾರರಿಗೆ ಆಗಬಹುದಾದ ಅಪಾಯವನ್ನು ತಪ್ಪಿಸಲು ಬೆಂಗಳೂರು ಕೇಂದ್ರ ನಗರ ಪಾಲಿಕೆ ಮುಂದಾಗಿದೆ. ಆಯುಕ್ತರಾದ ಶ್ರೀ ರಾಜೇಂದ್ರ ಚೋಳನ್ ರವರ ಕಟ್ಟುನಿಟ್ಟಿನ ಆದೇಶದ ಮೇರೆಗೆ, ವ್ಯಾಪ್ತಿಯಾದ್ಯಂತ ಅಪಾಯಕಾರಿ ಮರಗಳು, ಒಣಗಿದ ರೆಂಬೆ-ಕೊಂಬೆಗಳು ಹಾಗೂ ಈಗಾಗಲೇ ಬಿದ್ದಿರುವ ಮರಗಳ ತೆರವು ಕಾರ್ಯಾಚರಣೆ ಚುರುಕಿನಿಂದ ಸಾಗಿದೆ.
ಸಾರ್ವಜನಿಕರ ಸುರಕ್ಷತೆಯ ದೃಷ್ಟಿಯಿಂದ ಇಂದಿರಾನಗರದ ಸಿಎಂಎಚ್ (CMH) ರಸ್ತೆ, ಶ್ರೀರಾಮ ದೇವಸ್ಥಾನ ರಸ್ತೆಯ ಅಯ್ಯಪ್ಪ ದೇವಸ್ಥಾನದ ಬಳಿ, ನ್ಯೂ ತಿಪ್ಪಸಂದ್ರ ಸೇರಿದಂತೆ ವಿವಿಧ ಪ್ರಮುಖ ಸ್ಥಳಗಳಲ್ಲಿ ಅಪಾಯಕಾರಿಯಾಗಿದ್ದ ಮರಗಳ ರೆಂಬೆಗಳನ್ನು ಯಶಸ್ವಿಯಾಗಿ ತೆರವುಗೊಳಿಸಲಾಗಿದೆ.


















