ಬೆಂಗಳೂರು, ಮೇ.22 www.bengaluruwire.com: ಯಾವುದೇ ಕ್ಷೇತ್ರದಲ್ಲಿ ಸಾಧನೆ ಮಾಡಬೇಕಾದರೆ ತಾಳ್ಮೆ, ಸಮಾಧಾನ ಹಾಗೂ ಇತರರ ಮಾತನ್ನು ಕೇಳಿಸಿಕೊಳ್ಳುವ ವ್ಯವಧಾನ ಇರಬೇಕು. ಈ ಮೂರೂ ಅತ್ಯಮೂಲ್ಯ ಗುಣಗಳನ್ನು ನಾನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಂದ ರೂಢಿಸಿಕೊಂಡಿದ್ದೇನೆ ಎಂದು ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರರಾದ ಕೆ.ವಿ.ಪ್ರಭಾಕರ್ (ಕೆವಿಪಿ) ತಿಳಿಸಿದರು.
ನಗರದ ಕೆ.ಜಿ.ರಸ್ತೆಯ ಕಂದಾಯ ಭವನದಲ್ಲಿರುವ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ (ಕೆಯುಡಬ್ಲ್ಯೂಜೆ) ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ‘ಮಾಧ್ಯಮ-ಸಂವಾದ’ ಹಾಗೂ ಸನ್ಮಾನ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ತಮ್ಮ ವೃತ್ತಿ ಬದುಕಿನ ನೆನಪುಗಳನ್ನು ಮೆಲುಕು ಹಾಕಿದರು.
ಸಿದ್ದರಾಮಯ್ಯ ಅವರೊಂದಿಗೆ 13 ವರ್ಷಗಳ ಪಯಣ
”2013ರಲ್ಲಿ ನಾನು ಕನ್ನಡಪ್ರಭ ಪತ್ರಿಕೆಯಲ್ಲಿದ್ದಾಗ ಮಾಜಿ ಶಾಸಕ ರಾಮಚಂದ್ರಪ್ಪನವರ ಕರೆ ಮೇರೆಗೆ, ಅಂದಿನ ಸಂಪಾದಕರಾಗಿದ್ದ ವಿಶ್ವೇಶ್ವರ ಭಟ್ ಅವರ ಅನುಮತಿ ಪಡೆದು ಸಿಎಂ ಸಿದ್ದರಾಮಯ್ಯ ಅವರನ್ನು ಭೇಟಿಯಾದೆ. ನನ್ನನ್ನು ನೋಡಿದ ತಕ್ಷಣ ‘ಪತ್ರಿಕೆ ಬಿಡು, ನಮ್ಮೊಂದಿಗೆ ಬಂದು ಮಾಧ್ಯಮ ನಿರ್ವಹಣೆ ಮಾಡು’ ಎಂದು ಸಿಎಂ ಸೂಚಿಸಿದರು. ಅಂದಿನಿಂದ ಇಂದಿನವರೆಗೆ ಅಧಿಕಾರ ಇದ್ದಾಗಲೂ, ಇಲ್ಲದಿದ್ದಾಗಲೂ ಅವರ ನೆರಳಾಗಿ 13 ವರ್ಷಗಳನ್ನು ಕಳೆದಿದ್ದೇನೆ,” ಎಂದು ಪ್ರಭಾಕರ್ ಸ್ಮರಿಸಿದರು.

ಸಂವಾದದ ಪ್ರಮುಖ ಅಂಶಗಳು:
ತಾಳ್ಮೆಯ ಪಾಠ: ಸಿಎಂ ಅವರಿಂದ ಕಲಿಯಲು ಸಾಕಷ್ಟು ಅವಕಾಶ ಸಿಕ್ಕಿದೆ. ಕೋಲಾರದ ಜನತೆ, ರಾಜ್ಯದ ಪತ್ರಕರ್ತರು ಹಾಗೂ ಸಿಎಂ ಸಿದ್ದರಾಮಯ್ಯ ಅವರನ್ನು ನನ್ನ ಜೀವನದಲ್ಲಿ ಮರೆಯಲು ಸಾಧ್ಯವಿಲ್ಲ.
ಕಷ್ಟ ಕಾಲದ ಸಾಥ್: ಹಿರಿಯ ಪತ್ರಕರ್ತ ದಿನೇಶ್ ಅಮೀನ್ ಮಟ್ಟು ಅವರ ಮಾರ್ಗದರ್ಶನದಲ್ಲಿ ಕೆಲಸ ಆರಂಭಿಸಿದೆ. ಸಿದ್ದರಾಮಯ್ಯನವರು ಅಧಿಕಾರದಲ್ಲಿ ಇಲ್ಲದಿದ್ದಾಗಲೂ ಕಷ್ಟ-ಸುಖಗಳಲ್ಲಿ ಅವರೊಂದಿಗೇ ನಿಂತೆ.

ಬಸ್ ಪಾಸ್, ಆರೋಗ್ಯ ಸಂಜೀವಿನಿ: ಶೀಘ್ರದಲ್ಲೇ ಗುಡ್ ನ್ಯೂಸ್:
ಮಾಧ್ಯಮ ಸಲಹೆಗಾರನಾಗಿ ಪತ್ರಕರ್ತರಿಗೆ ಏನಾದರೂ ಕೊಡುಗೆ ನೀಡಬೇಕೆಂಬ ಹಂಬಲ ನನ್ನದಾಗಿತ್ತು. ಪತ್ರಕರ್ತರಿಗೆ ಉಚಿತ ಬಸ್ ಪಾಸ್ ಸೌಲಭ್ಯ ಹಾಗೂ ಸಿಎಂ ಆರೋಗ್ಯ ಸಂಜೀವಿನಿ ಯೋಜನೆ ರೂಪಿಸುವಲ್ಲಿ ಶ್ರಮಿಸಿದ್ದು ನನಗೆ ಆತ್ಮತೃಪ್ತಿ ತಂದಿದೆ. “ಆರೋಗ್ಯ ಸಂಜೀವಿನಿ ಯೋಜನೆಯಲ್ಲಿರುವ ಕಠಿಣ ಷರತ್ತುಗಳನ್ನು ಸಡಿಲಗೊಳಿಸಿ, ಎಲ್ಲರಿಗೂ ಲಭ್ಯವಾಗುವಂತೆ ಮಾಡಲು ಪ್ರಯತ್ನ ನಡೆಯುತ್ತಿದ್ದು, ಒಂದೇ ವಾರದಲ್ಲಿ ಗುಡ್ ನ್ಯೂಸ್ ಬರಲಿದೆ,” ಎಂದು ಅವರು ಭರವಸೆ ನೀಡಿದರು.
ನಾನು ಲಿಫ್ಟ್ನಲ್ಲಿ ಬಂದವನಲ್ಲ, ಸೈಕಲ್ ತುಳಿದು ಬಂದವನು:
ತಮ್ಮ ಕಷ್ಟದ ದಿನಗಳನ್ನು ನೆನಪಿಸಿಕೊಂಡ ಕೆವಿಪಿ, “ನಾನು ನೇರವಾಗಿ ಲಿಫ್ಟ್ ಹತ್ತಿಕೊಂಡು ಬಂದು ಈ ಸ್ಥಾನಕ್ಕೇರಿದವನಲ್ಲ. ಒಂದೊಂದೇ ಮೆಟ್ಟಿಲು ಹತ್ತಿ ಬಂದವನು. ಆರಂಭದಲ್ಲಿ ‘ಕೋಲಾರವಾಣಿ’ ಪತ್ರಿಕೆಯಲ್ಲಿ ಸೈಕಲ್ ಮೇಲೆ ಪೇಪರ್ ಪೇರಿಸಿಕೊಂಡು ವಿತರಿಸುವ ಕೆಲಸ ಮಾಡಿದ್ದೇನೆ. ಆ ಪರಿವಾರದಲ್ಲಿ ಊಟ ಮಾಡಿ ಬೆಳೆದಿದ್ದೇನೆ. ಬೆಂಗಳೂರಿಗೆ ಬರಲು ಕಾರಣರಾದ ವಾಸುದೇವ ಹೊಳ್ಳ, ಮಂಜುನಾಥ್, ಗೋಪಿನಾಥ್ ಅವರ ಪ್ರೀತಿಯನ್ನು ಎಂದಿಗೂ ಮರೆಯಲಾರೆ,” ಎಂದು ಭಾವುಕರಾದರು.
ಮಾಧ್ಯಮ ಸ್ವಾತಂತ್ರ್ಯಕ್ಕೆ ಸದಾ ಗೌರವ:
ವಿದ್ಯುನ್ಮಾನ ಮಾಧ್ಯಮಗಳಲ್ಲಿ ಸಿಎಂ ವಿರುದ್ಧ ಟೀಕೆಗಳು ಅಥವಾ ನಕಾರಾತ್ಮಕ ಸುದ್ದಿಗಳು ಪ್ರಸಾರವಾದರೂ ನಾವೆಂದೂ ಅದನ್ನು ತಡೆಯುವ (ಬ್ಲಾಕ್ ಮಾಡುವ) ಕೆಲಸ ಮಾಡಿಲ್ಲ. “ಸಿಎಂ ಆಗಲಿ, ನಾನಾಗಲೀ ಮಾಧ್ಯಮ ಸ್ವಾತಂತ್ರ್ಯವನ್ನು ಎಂದಿಗೂ ಪ್ರಶ್ನಿಸಿಲ್ಲ. ನನಗೆ ತಿಳಿದಷ್ಟು ವಾಸ್ತವವನ್ನು ಪತ್ರಕರ್ತರಿಗೆ ಮನವರಿಕೆ ಮಾಡಿಕೊಡುವ ಪ್ರಯತ್ನವನ್ನಷ್ಟೇ ಮಾಡುತ್ತೇನೆ,” ಎಂದು ಸ್ಪಷ್ಟಪಡಿಸಿದರು.
ಗರ್ವ, ದರ್ಪ ತೋರದ ಕೆವಿಪಿ: ಶಿವಾನಂದ ತಗಡೂರು ಪ್ರಶಂಸೆ:
ಕಾರ್ಯಕ್ರಮದಲ್ಲಿ ಆಶಯ ನುಡಿಗಳನ್ನಾಡಿದ ಕೆಯುಡಬ್ಲ್ಯೂಜೆ ರಾಜ್ಯಾಧ್ಯಕ್ಷ ಶಿವಾನಂದ ತಗಡೂರು, “ಸಾಮಾನ್ಯ ಪತ್ರಕರ್ತನೊಬ್ಬ ವಿಧಾನಸೌಧದ ಕುರ್ಚಿಯಲ್ಲಿ ಕುಳಿತಿರುವುದೇ ನಮಗೆಲ್ಲರಿಗೂ ಹೆಮ್ಮೆ. ಮೂರು ವರ್ಷಗಳ ಅಧಿಕಾರಾವಧಿಯಲ್ಲಿ ಕೆವಿಪಿ ಅವರು ಎಂದಿಗೂ ಗರ್ವ, ದರ್ಪ ತೋರಿಲ್ಲ. ಪತ್ರಕರ್ತರ ಕಷ್ಟಗಳನ್ನು ತಾಯ್ತನದ ಪ್ರೀತಿಯಿಂದ ಆಲಿಸುವ ಗುಣ ಅವರಲ್ಲಿದೆ,” ಎಂದು ಶ್ಲಾಘಿಸಿದರು.
ಕರ್ನಾಟಕ ಮಾಧ್ಯಮ ಅಕಾಡೆಮಿ ಅಧ್ಯಕ್ಷೆ ಆಯಿಷಾ ಖಾನಂ ಮಾತನಾಡಿ, “ಸೈಕಲ್ ಮೇಲೆ ಪೇಪರ್ ಹಂಚುತ್ತಿದ್ದ ವ್ಯಕ್ತಿ ಇಂದು ಸಿಎಂ ಮಾಧ್ಯಮ ಸಲಹೆಗಾರರಾಗಿರುವುದು ಸಣ್ಣ ಸಾಧನೆಯಲ್ಲ. ಅವರು ಪತ್ರಕರ್ತರಿಗೆ ಸಾಕಷ್ಟು ಅವಕಾಶಗಳನ್ನು ಕಲ್ಪಿಸಿಕೊಟ್ಟಿದ್ದಾರೆ,” ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಸಂವಾದಕ್ಕೂ ಮುನ್ನ ಪಂಕಜ ಅವರು ದ.ರಾ.ಬೇಂದ್ರೆ ಅವರ ‘ಬಾರೋ ಸಾಧನ ಕೇರಿಗೆ’ ಗೀತೆ ಹಾಡಿದರು. ಕೆಯುಡಬ್ಲ್ಯೂಜೆ ಪ್ರಧಾನ ಕಾರ್ಯದರ್ಶಿ ಜೆ.ಸಿ.ಲೋಕೇಶ್, ರಾಜ್ಯ ಸಮಿತಿ ಸದಸ್ಯ ರವಿಕುಮಾರ್ ಟೆಲೆಕ್ಸ್, ಖಜಾಂಚಿ ವಾಸುದೇವ ಹೊಳ್ಳ, ಬಿಯುಡಬ್ಲ್ಯುಜೆ ಅಧ್ಯಕ್ಷರಾದ ಸೋಮೇಖರ್ ಗಾಂಧಿ ಹಾಗೂ ಬೆಂಗಳೂರು ನಗರ ಘಟಕದ ಪದಾಧಿಕಾರಿಗಳು, ಕಾರ್ಯಕಾರಿ ಸಮಿತಿ ಸದಸ್ಯರು ಸೇರಿದಂತೆ ರಾಜ್ಯದ ವಿವಿಧ ಜಿಲ್ಲೆಗಳಿಂದ ಆಗಮಿಸಿದ್ದ ಹಿರಿಯ ಸಂಪಾದಕರು, ವರದಿಗಾರರು ಉಪಸ್ಥಿತರಿದ್ದರು.



















