ಬೆಂಗಳೂರು, ಮೇ.20 www.bengaluruwire.com: ದಕ್ಷಿಣ ಭಾರತದ ಪ್ರಯಾಣಿಕರಿಗೆ, ಅದರಲ್ಲೂ ವಿಶೇಷವಾಗಿ ಸಿಲಿಕಾನ್ ಸಿಟಿ ಬೆಂಗಳೂರಿಗರಿಗೆ ‘ಸ್ವಿಸ್ ಇಂಟರ್ನ್ಯಾಷನಲ್ ಏರ್ಲೈನ್ಸ್’ (SWISS) ಭರ್ಜರಿ ಸುದ್ದಿ ನೀಡಿದೆ.
ಭಾರತ ಮತ್ತು ಸ್ವಿಟ್ಜರ್ಲ್ಯಾಂಡ್ ನಡುವಿನ ವಾಯುಯಾನ ಸಂಪರ್ಕವನ್ನು ಮತ್ತಷ್ಟು ವಿಸ್ತರಿಸುವ ಉದ್ದೇಶದಿಂದ, ಬೆಂಗಳೂರು ಮತ್ತು ಸ್ವಿಟ್ಜರ್ಲ್ಯಾಂಡ್ನ ಪ್ರಮುಖ ಆರ್ಥಿಕ ಕೇಂದ್ರ ‘ಜ್ಯೂರಿಕ್’ ನಡುವೆ ಹೊಸ ನೇರ ವಿಮಾನ ಸೇವೆಯನ್ನು ಆರಂಭಿಸುವುದಾಗಿ ಸಂಸ್ಥೆ ಅಧಿಕೃತವಾಗಿ ಘೋಷಿಸಿದೆ.
ಬರುವ 2026ರ ಅಕ್ಟೋಬರ್ನಿಂದ ಈ ಹೊಸ ಮಾರ್ಗದಲ್ಲಿ ವಿಮಾನ ಹಾರಾಟ ಶುರುವಾಗಲಿದೆ. ವಾರದಲ್ಲಿ ಐದು ದಿನ ಈ ಸೇವೆ ಲಭ್ಯವಿರಲಿದ್ದು, ಮಂಗಳವಾರದಿಂದ ದಕ್ಷಿಣ ಭಾರತದ ಪ್ರಯಾಣಿಕರು ಜ್ಯೂರಿಕ್ ನಗರವನ್ನು ಸುಲಭವಾಗಿ ತಲುಪಬಹುದಾಗಿದೆ. ಅಲ್ಲದೆ, ಮಾತೃ ಸಂಸ್ಥೆ ಲುಫ್ತಾನ್ಸಾ ಸಮೂಹದ (Lufthansa Group) ಬೃಹತ್ ವಿಮಾನಜಾಲದ ಮೂಲಕ ಯುರೋಪ್ ಮತ್ತು ಉತ್ತರ ಅಮೆರಿಕಾದ ನೂರಾರು ನಗರಗಳಿಗೆ ಸುಲಭವಾಗಿ ಕನೆಕ್ಟಿಂಗ್ ಫ್ಲೈಟ್ ಪಡೆಯಲು ಇದು ನೆರವಾಗಲಿದೆ.
ಬೆಂಗಳೂರನ್ನೇ ಆಯ್ದುಕೊಂಡಿದ್ದೇಕೆ ಸ್ವಿಸ್ ಏರ್ಲೈನ್ಸ್?

ಭಾರತದಲ್ಲಿ ಸ್ವಿಸ್ ಏರ್ಲೈನ್ಸ್ನ ಕಾರ್ಯಾಚರಣೆಗೆ ಬೆಂಗಳೂರು ಈಗ ಹೊಸ ತಾಣವಾಗಿ ಸೇರ್ಪಡೆಯಾಗಿದೆ. ಕಾರ್ಪೊರೇಟ್ ವಲಯದ ಪ್ರಯಾಣಿಕರು, ಐಟಿ ತಂತ್ರಜ್ಞರು, ಪ್ರೀಮಿಯಂ ಪ್ರವಾಸಿಗರು ಮತ್ತು ಯುರೋಪ್-ಅಮೆರಿಕಾಗಳಲ್ಲಿ ನೆಲೆಸಿರುವ ಅನಿವಾಸಿ ಭಾರತೀಯರಿಂದ ವಿಮಾನಯಾನಕ್ಕೆ ದಿನೇ ದಿನೇ ಬೇಡಿಕೆ ಹೆಚ್ಚುತ್ತಿದೆ. ಈ ಬೇಡಿಕೆಯನ್ನು ಸಮರ್ಥವಾಗಿ ಪೂರೈಸಲು ಈ ಹೊಸ ಮಾರ್ಗವನ್ನು ಪರಿಚಯಿಸಲಾಗಿದೆ.
ಹೊಸ ವಿಮಾನ ಸೇವೆಯ ಕುರಿತು ಮಾತನಾಡಿದ ಲುಫ್ತಾನ್ಸಾ ಗ್ರೂಪ್ನ ದಕ್ಷಿಣ ಏಷ್ಯಾ ವಿಭಾಗದ ಹಿರಿಯ ನಿರ್ದೇಶಕ ಕೆವಿನ್ ಮಾರ್ಕೆಟ್ಟೆ, “ಭಾರತವು ಲುಫ್ತಾನ್ಸಾ ಗ್ರೂಪ್ಗೆ ಅತ್ಯಂತ ಪ್ರಮುಖ ಮಾರುಕಟ್ಟೆಯಾಗಿದೆ. ಜಾಗತಿಕ ಟೆಕ್ ಹಬ್ ಆಗಿರುವ ಬೆಂಗಳೂರಿನಿಂದ ಸ್ವಿಸ್ ಏರ್ಲೈನ್ಸ್ ಸೇವೆ ಆರಂಭಿಸುತ್ತಿರುವುದು ನಮಗೆ ಅತೀವ ಸಂತಸ ತಂದಿದೆ. ಜರ್ಮನಿಯ ಫ್ರಾಂಕ್ಫರ್ಟ್ ಮತ್ತು ಮ್ಯೂನಿಕ್ ನಗರಗಳ ಬಳಿಕ, ಬೆಂಗಳೂರಿನಿಂದ ಲುಫ್ತಾನ್ಸಾ ಗ್ರೂಪ್ನ ಮೂರನೇ ಪ್ರಮುಖ ಮಾರ್ಗ ಇದಾಗಲಿದೆ. ಪ್ರಯಾಣಿಕರು ‘ಫಸ್ಟ್ ಕ್ಲಾಸ್’ ಸೇರಿದಂತೆ ಅತ್ಯುತ್ತಮ ಮಟ್ಟದ ಸ್ವಿಸ್ ಆತಿಥ್ಯದ ಅನುಭವ ಪಡೆಯಲಿದ್ದಾರೆ,” ಎಂದು ಹರ್ಷ ವ್ಯಕ್ತಪಡಿಸಿದರು.
ದೇಶದ 78 ನಗರಗಳಿಗೆ ಕನೆಕ್ಟಿವಿಟಿ ಲಾಭ
ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ (BIAL) ಮುಖ್ಯ ಕಾರ್ಯಾಚರಣಾಧಿಕಾರಿ ಗಿರೀಶ್ ನಾಯರ್ ಪ್ರತಿಕ್ರಿಯಿಸಿ, “ಭಾರತದ ಸಿಲಿಕಾನ್ ಸಿಟಿಯನ್ನು ಜಾಗತಿಕ ಆರ್ಥಿಕ ಕೇಂದ್ರವಾದ ಜ್ಯೂರಿಕ್ ಜೊತೆ ಬೆಸೆಯುವ ಈ ಸೇವೆ, ನಮ್ಮ ಮಾರುಕಟ್ಟೆಯ ಸಾಮರ್ಥ್ಯಕ್ಕೆ ಹಿಡಿದ ಕನ್ನಡಿಯಾಗಿದೆ. ಬೆಂಗಳೂರು ವಿಮಾನ ನಿಲ್ದಾಣದಿಂದ ದೇಶದ 78 ನಗರಗಳಿಗೆ ನೇರ ಸಂಪರ್ಕ ಇರುವುದರಿಂದ, ಟಯರ್-2 ಹಾಗೂ ಟಯರ್-3 ನಗರಗಳಿಂದ ಬರುವವರಿಗೂ ಕೇವಲ ಒಂದೇ ಟಿಕೆಟ್ನಲ್ಲಿ ಯುರೋಪ್ಗೆ ಸುಲಭ ಸಂಪರ್ಕ ಸಿಗಲಿದೆ,” ಎಂದು ವಿವರಿಸಿದರು.
ಪ್ರಯಾಣಿಕರಿಗೆ ಏನೆಲ್ಲಾ ಸೌಲಭ್ಯಗಳಿವೆ?
ಬೆಂಗಳೂರು-ಜ್ಯೂರಿಕ್ ನಡುವಿನ ಈ ವಿಮಾನದಲ್ಲಿ ಪ್ರಯಾಣಿಕರು ಫಸ್ಟ್ ಕ್ಲಾಸ್, ಬಿಸಿನೆಸ್ ಕ್ಲಾಸ್ ಹಾಗೂ ಎಕಾನಮಿ ಕ್ಲಾಸ್ ಸೇವೆಗಳನ್ನು ಆಯ್ಕೆ ಮಾಡಿಕೊಳ್ಳಬಹುದು. ಅತ್ಯುತ್ತಮ ಊಟ, ಪ್ರೀಮಿಯಂ ಲೌಂಜ್ ಸೇರಿದಂತೆ ಜಾಗತಿಕ ಮಟ್ಟದ ಆತಿಥ್ಯವನ್ನು ಸಂಸ್ಥೆ ನೀಡಲಿದೆ.
ಹೊಸ ಮಾರ್ಗದ ಟಿಕೆಟ್ ಬುಕ್ಕಿಂಗ್ ಇಂದಿನಿಂದಲೇ ಸ್ವಿಸ್ ಸಂಸ್ಥೆಯ ಅಧಿಕೃತ ವೆಬ್ಸೈಟ್ ಹಾಗೂ ಟ್ರಾವೆಲ್ ಏಜೆನ್ಸಿಗಳ ಮೂಲಕ ಲಭ್ಯವಿದೆ ಎಂದು ಕೆಐಎಎಲ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.























