ಬೆಂಗಳೂರು, ಮೇ.20 www.bengaluruwire.com: ರಾಜ್ಯದ ಹುಲಿ ಸಂರಕ್ಷಿತ ಪ್ರದೇಶಗಳು ಹಾಗೂ ವನ್ಯಜೀವಿಧಾಮಗಳಲ್ಲಿ ನಡೆಯುವ ಸಫಾರಿಗಳಲ್ಲಿ ಇನ್ನು ಮುಂದೆ ತೆರೆದ ಕ್ಯಾಂಪರ್ ವಾಹನಗಳನ್ನು ಬಳಸುವಂತಿಲ್ಲ.
ಪ್ರವಾಸಿಗರ ಸುರಕ್ಷತೆಯ ದೃಷ್ಟಿಯಿಂದ ತೆರೆದ ವಾಹನಗಳ ಬದಲಿಗೆ ಸಂಪೂರ್ಣ ಸುರಕ್ಷಿತವಾದ ಬಸ್ ಅಥವಾ ಕಬ್ಬಿಣದ ಸರಳು, ಒಡೆಯದ ಗಾಜು ಅಳವಡಿಸಿದ ವಾಹನಗಳನ್ನು ಮಾತ್ರ ಬಳಸುವಂತೆ ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ ಬಿ. ಖಂಡ್ರೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.
ಇತ್ತೀಚೆಗೆ ದುಬಾರೆ ಆನೆ ಶಿಬಿರದಲ್ಲಿ ಎರಡು ಸಾಕಾನೆಗಳ ನಡುವಿನ ಕಾಳಗದ ವೇಳೆ ಪ್ರವಾಸಿ ಮಹಿಳೆಯೊಬ್ಬರು ಮೃತಪಟ್ಟ ಆಘಾತಕಾರಿ ಘಟನೆ ನಡೆದಿತ್ತು. ಈ ಹಿನ್ನೆಲೆಯಲ್ಲಿ ಎಚ್ಚೆತ್ತುಕೊಂಡಿರುವ ಅರಣ್ಯ ಇಲಾಖೆ, ಸಫಾರಿಗಳಲ್ಲಿ ಪ್ರವಾಸಿಗರ ಸುರಕ್ಷತೆಗೆ ಹೆಚ್ಚಿನ ಆದ್ಯತೆ ನೀಡುವಂತೆ ಮುಖ್ಯ ವನ್ಯಜೀವಿ ಪರಿಪಾಲಕರಿಗೆ ಸ್ಪಷ್ಟ ನಿರ್ದೇಶನ ರವಾನಿಸಿದೆ.
ಸಫಾರಿ ವಾಹನಗಳಿಗೆ ಹೊಸ ನಿಯಮಗಳು

ರಾಜ್ಯದ ಬಂಡೀಪುರ, ನಾಗರಹೊಳೆ, ಕಾಳಿ, ಬಿಳಿಗಿರಿರಂಗನಬೆಟ್ಟ (BRT) ಮತ್ತು ಭದ್ರಾ ಹುಲಿ ಸಂರಕ್ಷಿತ ಪ್ರದೇಶಗಳಲ್ಲದೆ, ಮಲೆ ಮಹದೇಶ್ವರ ಬೆಟ್ಟ, ದಾಂಡೇಲಿ, ಕೆ.ಗುಡಿ ಸೇರಿದಂತೆ ವಿವಿಧ ವನ್ಯಜೀವಿಧಾಮಗಳಿಗೆ ದೇಶ-ವಿದೇಶಗಳಿಂದ ಲಕ್ಷಾಂತರ ಪ್ರವಾಸಿಗರು ಆಗಮಿಸುತ್ತಾರೆ. ಇದುವರೆಗೆ ವನ್ಯಮೃಗಗಳು ಸಫಾರಿ ವಾಹನಗಳ ಮೇಲೆ ದಾಳಿ ಮಾಡಿದ ಯಾವುದೇ ಪ್ರಮುಖ ಘಟನೆಗಳು ವರದಿಯಾಗಿಲ್ಲ. ಆದರೂ, ಯಾವುದೇ ಅನಾಹುತ ಸಂಭವಿಸುವ ಮುನ್ನವೇ ಮುನ್ನೆಚ್ಚರಿಕಾ ಕ್ರಮ ಕೈಗೊಳ್ಳುವುದು ಅಗತ್ಯ ಎಂದು ಸಚಿವರು ತಿಳಿಸಿದ್ದಾರೆ.
ಸುರಕ್ಷಿತ ಬಸ್‌ಗಳಿಗೆ ಆದ್ಯತೆ: ಇನ್ನು ಮುಂದೆ ಸಫಾರಿಗೆ ತೆರೆದ ವಾಹನಗಳ (Open Campers) ಬದಲು ಸಂಪೂರ್ಣ ಮುಚ್ಚಿರುವ ಸುರಕ್ಷಿತ ಬಸ್‌ಗಳಿಗೆ ಹೆಚ್ಚಿನ ಆದ್ಯತೆ ನೀಡಬೇಕು.
ಕ್ಯಾಂಪರ್‌ಗಳಿಗೆ ಭದ್ರತೆ: ಹಾಲಿ ಬಳಕೆಯಲ್ಲಿರುವ ಜೀಪ್ ಹಾಗೂ ಕ್ಯಾಂಪರ್ ವಾಹನಗಳಿಗೆ ಕಡ್ಡಾಯವಾಗಿ ಕಬ್ಬಿಣದ ಸರಳುಗಳಿಂದ ಕೂಡಿದ ಜಾಲರಿ ಅಥವಾ ಒಡೆಯಲಾಗದ ಗಾಜು (Unbreakable glass) ಅಳವಡಿಸಬೇಕು.
ಅರಣ್ಯದಲ್ಲಿ ಇಳಿಯುವಂತಿಲ್ಲ: ಸಫಾರಿ ಸಂದರ್ಭದಲ್ಲಿ ಯಾವುದೇ ಕಾರಣಕ್ಕೂ ಪ್ರವಾಸಿಗರು ವಾಹನದಿಂದ ಅರಣ್ಯದೊಳಗೆ ಇಳಿಯಲು ಅವಕಾಶ ನೀಡುವಂತಿಲ್ಲ.
ಆಂಬ್ಯುಲೆನ್ಸ್ ಹಾಗೂ ಪ್ರಥಮ ಚಿಕಿತ್ಸೆ ಕಡ್ಡಾಯ
ಕೇವಲ ವಾಹನಗಳ ಸುರಕ್ಷತೆ ಮಾತ್ರವಲ್ಲದೆ, ತುರ್ತು ವೈದ್ಯಕೀಯ ನೆರವಿನ ಬಗ್ಗೆಯೂ ಸರ್ಕಾರ ಗಮನಹರಿಸಿದೆ. ಪ್ರತಿ ಸಫಾರಿ ವಾಹನದಲ್ಲಿ ಕಡ್ಡಾಯವಾಗಿ ‘ಪ್ರಥಮ ಚಿಕಿತ್ಸಾ ಕಿಟ್’ (First Aid Kit) ಇರಲೇಬೇಕು. ಜೊತೆಗೆ, ಸಫಾರಿ ಕೇಂದ್ರಗಳು ಹಾಗೂ ಆನೆ ಶಿಬಿರಗಳ ಸಮೀಪದಲ್ಲಿ ಸದಾ ಆಂಬ್ಯುಲೆನ್ಸ್ ವಾಹನ ಲಭ್ಯವಿರುವಂತೆ ಖಾತ್ರಿಪಡಿಸಿಕೊಳ್ಳಬೇಕು ಎಂದು ಅಧಿಕಾರಿಗಳಿಗೆ ಸಚಿವ ಈಶ್ವರ ಖಂಡ್ರೆ ಸೂಚಿಸಿದ್ದಾರೆ.





















