ಬೆಂಗಳೂರು, ಮೇ.19 www.bengaluruwire.com: ರಾಜ್ಯದಲ್ಲಿ 2015ರಿಂದ ಜಾರಿಯಲ್ಲಿರುವ ಕಡ್ಡಾಯ ಕನ್ನಡ ಭಾಷಾ ಕಲಿಕಾ ಕಾಯ್ದೆಗೆ ಸಿಬಿಎಸ್ಇ (CBSE) ಮಂಡಳಿ ತಣ್ಣೀರೆರಚಿದ್ದು, ಈ ಕೂಡಲೇ ಕೇಂದ್ರದ ಮೇಲೆ ಒತ್ತಡ ಹೇರಿ ಆದೇಶವನ್ನು ಹಿಂಪಡೆಯುವಂತೆ ರಾಜ್ಯ ಸರ್ಕಾರ ಮಾಡಬೇಕು ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಡಾ. ಪುರುಷೋತ್ತಮ ಬಿಳಿಮಲೆ ಆಗ್ರಹಿಸಿದ್ದಾರೆ.
ಶಿಕ್ಷಣವು ಸಂವಿಧಾನದ ಸಮವರ್ತಿ ಪಟ್ಟಿಯಲ್ಲಿದ್ದರೂ, ರಾಜ್ಯ ಸರ್ಕಾರವನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೆ ಸಿಬಿಎಸ್ಇ ಮಂಡಳಿಯು 2026ರ ಮೇ 15ರಂದು ತನ್ನ ಅಧೀನದ ಶಾಲಾ ಮುಖ್ಯಸ್ಥರಿಗೆ ನೀಡಿರುವ ಸೂಚನೆಯು ಆಕ್ಷೇಪಾರ್ಹವಾಗಿದೆ. ಈ ಕುರಿತು ಶಾಲಾ ಶಿಕ್ಷಣ ಸಚಿವ ಮಧು ಬಂಗಾರಪ್ಪನವರಿಗೆ ಪತ್ರ ಬರೆದಿರುವ ಅವರು, ನಿರಾಕ್ಷೇಪಣಾ ಪತ್ರ (ಎನ್.ಒ.ಸಿ) ನೀಡಿಕೆ ನಿಯಮಗಳನ್ನು ಸಮಗ್ರವಾಗಿ ಪರಿಷ್ಕರಿಸುವಂತೆ ಒತ್ತಾಯಿಸಿದ್ದಾರೆ.
ಭಾಷಾ ಕಾನೂನು ದುರ್ಬಲಗೊಳಿಸುವ ಯತ್ನ:
ಕನ್ನಡ ಭಾಷಾ ಕಲಿಕಾ ಕಾಯ್ದೆಯನ್ವಯ ರಾಜ್ಯದ ಎಲ್ಲ ಶಿಕ್ಷಣ ಸಂಸ್ಥೆಗಳಲ್ಲಿ ಕನ್ನಡವನ್ನು ಪ್ರಥಮ ಅಥವಾ ದ್ವಿತೀಯ ಭಾಷೆಯಾಗಿ ಆಯ್ಕೆ ಮಾಡಿಕೊಳ್ಳುವುದು ಕಡ್ಡಾಯವಾಗಿದೆ. ಆದರೆ ಸಿಬಿಎಸ್ಇ ಶಾಲೆಗಳು ಹೆಚ್ಚುತ್ತಿರುವ ಈ ಸಂದರ್ಭದಲ್ಲಿ, ಒಮ್ಮೆ ಎನ್.ಒ.ಸಿ ನೀಡಿದ ಬಳಿಕ ಶಿಕ್ಷಣ ಇಲಾಖೆಯ ನಿಯಂತ್ರಣ ಸೀಮಿತವಾಗುತ್ತಿದೆ. ಇದನ್ನು ದುರ್ಬಳಕೆ ಮಾಡಿಕೊಂಡು ರಾಜ್ಯದ ಭಾಷಾ ಕಾನೂನುಗಳನ್ನು ದುರ್ಬಲಗೊಳಿಸುವ ಮಂಡಳಿಯ ಏಕಪಕ್ಷೀಯ ನಿರ್ಣಯ ಸ್ವೀಕಾರಾರ್ಹವಲ್ಲ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಸರ್ಕಾರಕ್ಕೆ ಡಾ. ಬಿಳಿಮಲೆ ನೀಡಿದ ಪ್ರಮುಖ 5 ಸಲಹೆಗಳು:
ಕನ್ನಡ ಕಡ್ಡಾಯಗೊಳಿಸಿ: ಸಿಬಿಎಸ್ಇ ಶಾಲೆಗಳು ಪ್ರಥಮ ಅಥವಾ ದ್ವಿತೀಯ ಭಾಷೆಯಾಗಿ ಕನ್ನಡವನ್ನು ಬದಿಗಿಡುವ ವ್ಯವಸ್ಥೆಗೆ ಕೂಡಲೇ ಕಡಿವಾಣ ಹಾಕಬೇಕು. ಆರ್ 1/ ಆರ್ 2 (R1/R2) ವಿಷಯ ಕಡ್ಡಾಯವಾಗಿ ಕನ್ನಡವೇ ಆಗಿರಬೇಕು.
ಎನ್.ಒ.ಸಿ ವಾರ್ಷಿಕ ನವೀಕರಣ: ರಾಜ್ಯ ಸರ್ಕಾರವು ನೀಡುವ ಎನ್.ಒ.ಸಿ ವ್ಯವಸ್ಥೆಯನ್ನು ವಾರ್ಷಿಕ ನವೀಕರಣಕ್ಕೆ ಒಳಪಡಿಸಬೇಕು. ಕನ್ನಡ ಬೋಧನೆ, ಶಿಕ್ಷಕರ ನೇಮಕಾತಿ ಮತ್ತು ಭಾಷಾ ಅನುಷ್ಠಾನದ ವರದಿ ಆಧಾರದ ಮೇಲೆಯೇ ನವೀಕರಣ ಮಾಡಬೇಕು.
ಎನ್.ಒ.ಸಿ ರದ್ದು ಅಧಿಕಾರ: ಕನ್ನಡ ಅನುಷ್ಠಾನದಲ್ಲಿ ಯಾವುದೇ ರೀತಿಯ ಲೋಪ ಕಂಡುಬಂದಲ್ಲಿ, ಶಾಲೆಯ ನಿರಾಕ್ಷೇಪಣಾ ಪ್ರಮಾಣ ಪತ್ರವನ್ನು ರದ್ದುಪಡಿಸುವ ಪರಮಾಧಿಕಾರವನ್ನು ರಾಜ್ಯ ಸರ್ಕಾರ ಕಾಯ್ದಿರಿಸಿಕೊಳ್ಳಬೇಕು.
ಅರ್ಹ ಕನ್ನಡ ಶಿಕ್ಷಕರ ನೇಮಕ: ಎಲ್ಲ ಸಿ.ಬಿ.ಎಸ್.ಇ ಶಾಲೆಗಳಲ್ಲಿ ಕೇವಲ ಪಠ್ಯಕ್ರಮದಲ್ಲಿ ಕನ್ನಡ ಸೇರಿಸುವುದಷ್ಟೇ ಅಲ್ಲ, ಅದನ್ನು ಸಮರ್ಪಕವಾಗಿ ಬೋಧಿಸಲು ಅರ್ಹ ಕನ್ನಡ ಶಿಕ್ಷಕರ ನೇಮಕಾತಿಯನ್ನು ಕಡ್ಡಾಯಗೊಳಿಸಬೇಕು.
ಕಠಿಣ ಕಾನೂನು ಕ್ರಮ: ಭಾಷಾ ನೀತಿಯನ್ನು ಉಲ್ಲಂಘಿಸುವ ಶಿಕ್ಷಣ ಸಂಸ್ಥೆಗಳ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಲು ಸದನ ಸಮಿತಿ ಅಥವಾ ತಜ್ಞರ ಸಮಿತಿಯನ್ನು ರಚಿಸಿ, ಅದರ ಶಿಫಾರಸ್ಸುಗಳನ್ನು ಜಾರಿಗೆ ತರಬೇಕು.
ಕರ್ನಾಟಕದಲ್ಲಿ ಓದುವ ಪ್ರತಿಯೊಂದು ವಿದ್ಯಾರ್ಥಿಯು ಕನ್ನಡದೊಂದಿಗೆ ಬಾಂಧವ್ಯ ಹೊಂದುವುದು ಅತ್ಯಗತ್ಯ. ಹೀಗಾಗಿ ಕನ್ನಡದ ಹಿತಾಸಕ್ತಿಗೆ ವಿರುದ್ಧವಾಗಿರುವ ಯಾವುದೇ ಕ್ರಮದ ಎದುರು ರಾಜ್ಯ ಸರ್ಕಾರವು ದೃಢ ನಿಲುವು ತಾಳಬೇಕು ಎಂದು ಡಾ. ಪುರುಷೋತ್ತಮ ಬಿಳಿಮಲೆ ಸ್ಪಷ್ಟಪಡಿಸಿದ್ದಾರೆ.






















