ಬೆಂಗಳೂರು, ಏ.26 www.bengaluruwire.com: ವಯಸ್ಸಾಗುತ್ತಿದ್ದಂತೆ ಮರೆವು ಅಥವಾ ಮೆದುಳಿನ ಕಾರ್ಯಕ್ಷಮತೆ ಕಡಿಮೆಯಾಗುವುದು ಸಹಜ. ಆದರೆ, ದೀರ್ಘಕಾಲದ ಧ್ಯಾನದ ಮೂಲಕ ಮೆದುಳಿನ ಕೋಶಗಳನ್ನು ಚೈತನ್ಯಗೊಳಿಸಬಹುದು ಮತ್ತು ಮೆದುಳಿಗೆ ಸಂಬಂಧಿಸಿದ ಕಾಯಿಲೆಗಳನ್ನು ತಡೆಯಬಹುದು ಎಂದು ಬೆಂಗಳೂರಿನ ಭಾರತೀಯ ವಿಜ್ಞಾನ ಸಂಸ್ಥೆಯ (IISc) ವಿಜ್ಞಾನಿಗಳು ಇತ್ತೀಚಿನ ಅಧ್ಯಯನದಲ್ಲಿ ಸಾಬೀತುಪಡಿಸಿದ್ದಾರೆ.
ಏನಿದು ಸಂಶೋಧನೆ?:
ಐಐಎಸ್‌ಸಿಯ ಸೆಂಟರ್ ಫಾರ್ ನ್ಯೂರೋಸೈನ್ಸ್‌ನ ಸುಪ್ರತಿಮ್ ರೇ ಅವರ ನೇತೃತ್ವದಲ್ಲಿ ನಡೆದ ಈ ಸಂಶೋಧನೆಯಲ್ಲಿ ‘ಬ್ರಹ್ಮಕುಮಾರಿ’ ಪದ್ಧತಿಯ ರಾಜಯೋಗ ಧ್ಯಾನ ಮಾಡುವವರನ್ನು ಅಧ್ಯಯನಕ್ಕೆ ಒಳಪಡಿಸಲಾಯಿತು. ಸುಮಾರು 10,000 ಗಂಟೆಗಳಿಗೂ ಹೆಚ್ಚು ಕಾಲ ಧ್ಯಾನ ಮಾಡಿದ ಅನುಭವಿಗಳನ್ನು ಮತ್ತು ಸಾಮಾನ್ಯ ಜನರನ್ನು ಹೋಲಿಕೆ ಮಾಡಿದಾಗ ಅಚ್ಚರಿಯ ಫಲಿತಾಂಶಗಳು ಹೊರಬಂದಿವೆ.
ಗಾಮಾ ಅಲೆಗಳ ಮ್ಯಾಜಿಕ್:

ನಮ್ಮ ಮೆದುಳಿನಲ್ಲಿ ಉತ್ಪತ್ತಿಯಾಗುವ ‘ಗಾಮಾ’ (Gamma Waves) ಎಂಬ ಹೆಚ್ಚಿನ ಆವರ್ತನದ ಅಲೆಗಳು ನಮ್ಮ ಏಕಾಗ್ರತೆ ಮತ್ತು ಜ್ಞಾಪಕ ಶಕ್ತಿಗೆ ಅತಿ ಮುಖ್ಯ. ವಯಸ್ಸಾದಂತೆ ಈ ಅಲೆಗಳ ತೀವ್ರತೆ ಕಡಿಮೆಯಾಗುತ್ತಾ ಹೋಗುತ್ತದೆ. ಆದರೆ, ದೀರ್ಘಕಾಲದ ಧ್ಯಾನ ಮಾಡುವವರಲ್ಲಿ ಈ ಗಾಮಾ ಅಲೆಗಳು ಸಾಮಾನ್ಯರಿಗಿಂತ ಬಹಳ ಪ್ರಬಲವಾಗಿರುವುದು ಕಂಡುಬಂದಿದೆ. ಇದು ಮೆದುಳಿನ ಕಾರ್ಯಕ್ಷಮತೆಯನ್ನು ದೀರ್ಘಕಾಲ ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ.
ಮರೆವಿನ ಕಾಯಿಲೆಗೆ ರಾಮಬಾಣ:
ಸಾಮಾನ್ಯವಾಗಿ ವಯಸ್ಸಾದಂತೆ ಅಥವಾ ಮರೆವಿನ ಕಾಯಿಲೆ (ಆಲ್ಝೈಮೈರ್) ಬಂದಾಗ ಮೆದುಳಿನ ಸರ್ಕ್ಯೂಟ್‌ಗಳು ದುರ್ಬಲಗೊಳ್ಳುತ್ತವೆ. ಆದರೆ, ಧ್ಯಾನ ಮಾಡುವವರ ಮೆದುಳಿನಲ್ಲಿ ಈ ಸರ್ಕ್ಯೂಟ್‌ಗಳು ಹೆಚ್ಚು ಸದೃಢವಾಗಿರುತ್ತವೆ ಎಂದು ಸಂಶೋಧಕರು ತಿಳಿಸಿದ್ದಾರೆ.
ಕಣ್ಣು ಬಿಟ್ಟು ಮಾಡುವ ರಾಜಯೋಗ ಧ್ಯಾನವು ಮೆದುಳಿನ ದೃಶ್ಯ ಕೇಂದ್ರಗಳನ್ನು (Visual Cortex) ಪ್ರಚೋದಿಸುವ ಮೂಲಕ ಈ ಬದಲಾವಣೆ ತರುತ್ತದೆ ಎಂದು ವರದಿಯಲ್ಲಿ ವಿವರಿಸಲಾಗಿದೆ.






















