ಬೆಂಗಳೂರು, ಏ.26 www.bengaluruwire.com: ಜನಸೇವೆಯಲ್ಲಿ ನಿರಂತರವಾಗಿ ತೊಡಗಿಸಿಕೊಂಡಿರುವ ಕರ್ನಾಟಕ ಆಡಳಿತ ಸೇವೆ (ಕೆ.ಎ.ಎಸ್.) ಅಧಿಕಾರಿಗಳ ಸಂಘದ ನವೀಕರಿಸಿದ ಕಟ್ಟಡ ಹಾಗೂ ನೂತನವಾಗಿ ನಿರ್ಮಿಸಲಾದ ಹೆಚ್ಚುವರಿ ಕೊಠಡಿಗಳ ಉದ್ಘಾಟನಾ ಸಮಾರಂಭವು ನಾಳೆ (ಏ.27) ನಡೆಯಲಿದೆ.
ಬೆಂಗಳೂರಿನ ಇನ್ಫೆಂಟ್ರಿ ರಸ್ತೆಯಲ್ಲಿರುವ ಸಂಘದ ಆವರಣದಲ್ಲಿ ಸಂಜೆ 4.00 ಗಂಟೆಗೆ ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.

ನವೀಕರಿಸಿದ ಭವ್ಯ ಕಟ್ಟಡವನ್ನು ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ಅವರು ಉದ್ಘಾಟಿಸಲಿದ್ದಾರೆ. ಇದೇ ಸಂದರ್ಭದಲ್ಲಿ ಸನ್ಮಾನ್ಯ ಉಪ ಮುಖ್ಯಮಂತ್ರಿಗಳಾದ ಡಿ.ಕೆ. ಶಿವಕುಮಾರ್ ಅವರು ವಿಶೇಷ ಸ್ಮರಣ ಸಂಚಿಕೆಯನ್ನು ಬಿಡುಗಡೆ ಮಾಡಲಿದ್ದಾರೆ.
ಕಾರ್ಯಕ್ರಮದಲ್ಲಿ ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ, ಕಂದಾಯ ಸಚಿವ ಕೃಷ್ಣ ಬೈರೇಗೌಡ, ನಗರಾಭಿವೃದ್ಧಿ ಸಚಿವ ಬಿ.ಎಸ್. ಸುರೇಶ, ಗ್ರಾಮೀಣಾಭಿವೃದ್ಧಿ ಹಾಗೂ ಐಟಿ-ಬಿಟಿ ಸಚಿವ ಪ್ರಿಯಾಂಕ್ ಖರ್ಗೆ ಸೇರಿದಂತೆ ಸರ್ಕಾರದ ಮುಖ್ಯ ಕಾರ್ಯದರ್ಶಿಗಳು ಹಾಗೂ ಹಿರಿಯ ಅಧಿಕಾರಿಗಳು ಭಾಗವಹಿಸಲಿದ್ದಾರೆ.

ಸಂಜೆ ಸಾಂಸ್ಕೃತಿಕ ಸೌರಭ:
ಉದ್ಘಾಟನಾ ಸಮಾರಂಭದ ಅಂಗವಾಗಿ ಅಂದು ಸಂಜೆ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ಖ್ಯಾತ ಹಿನ್ನೆಲೆ ಗಾಯಕಿ ಅನುರಾಧ ಭಟ್ ಮತ್ತು ತಂಡದವರಿಂದ ಸುಮಧುರ ಸಂಗೀತ ಕಛೇರಿ ನಡೆಯಲಿದೆ ಎಂದು ಸಂಘದ ಅಧ್ಯಕ್ಷರಾದ ಬಿ. ಶಿವಸ್ವಾಮಿ ಹಾಗೂ ಕಾರ್ಯದರ್ಶಿ ಸಿ.ಎಲ್. ಶಿವಕುಮಾರ್ ಅವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.





















