ವಾಷಿಂಗ್ಟನ್, ಏ.26 www.bengaluruwire.com: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತು ಪ್ರಥಮ ಮಹಿಳೆ ಮೆಲಾನಿಯಾ ಟ್ರಂಪ್ ಅವರು ಶನಿವಾರ ರಾತ್ರಿ ವಾಷಿಂಗ್ಟನ್‌ನಲ್ಲಿ ನಡೆದ ಶ್ವೇತಭವನದ ವರದಿಗಾರರ ಔತಣಕೂಟದ (White House Correspondents’ Dinner) ವೇಳೆ ನಡೆದ ಗುಂಡಿನ ದಾಳಿಯಿಂದ ಕೂದಲೆಳೆ ಅಂತರದಲ್ಲಿ ಪಾರಾಗಿದ್ದಾರೆ.
ಘಟನೆಯ ಬೆನ್ನಲ್ಲೇ ಭದ್ರತಾ ಪಡೆಗಳು ಅಧ್ಯಕ್ಷರನ್ನು ಸುರಕ್ಷಿತವಾಗಿ ಸ್ಥಳಾಂತರಿಸಿದ್ದು, ಸಶಸ್ತ್ರ ದುಷ್ಕರ್ಮಿಯನ್ನು ವಶಕ್ಕೆ ಪಡೆದಿವೆ.
ವಾಷಿಂಗ್ಟನ್ ಹಿಲ್ಟನ್ ಹೋಟೆಲ್‌ನಲ್ಲಿ ವಾರ್ಷಿಕ ಪತ್ರಿಕಾ ಗಾಲಾ ಕಾರ್ಯಕ್ರಮ ನಡೆಯುತ್ತಿದ್ದಾಗ ಈ “ಶೂಟಿಂಗ್ ಇನ್ಸಿಡೆಂಟ್” ಸಂಭವಿಸಿದೆ ಎಂದು ಯುಎಸ್ ಸೀಕ್ರೆಟ್ ಸರ್ವಿಸ್ ಖಚಿತಪಡಿಸಿದೆ. ಕ್ಯಾಲಿಫೋರ್ನಿಯಾದ ಟೊರೆನ್ಸ್ ನಿವಾಸಿ 31 ವರ್ಷದ ಕೋಲ್ ಟೊಮಾಸ್ ಅಲೆನ್ ಎಂಬಾತನೇ ದಾಳಿ ನಡೆಸಿದ ಶಂಕಿತ ಎಂದು ಗುರುತಿಸಲಾಗಿದೆ. ಈತನ ಬಳಿ ಶಾರ್ಟ್ ಗನ್, ಹ್ಯಾಂಡ್ ಗನ್ ಮತ್ತು ಹಲವಾರು ಚಾಕುಗಳಿದ್ದವು ಎಂದು ಬಿಬಿಸಿ ವರದಿ ಮಾಡಿದೆ.
ಭದ್ರತಾ ಸಿಬ್ಬಂದಿಯ ಮೇಲೆ ಗುಂಡಿನ ದಾಳಿ:


ಚೆಕ್‌ಪಾಯಿಂಟ್ ಬಳಿ ನುಗ್ಗಿದ ಶಂಕಿತ ಅಲೆನ್, ಭದ್ರತಾ ಸಿಬ್ಬಂದಿಯ ಮೇಲೆ ಗುಂಡು ಹಾರಿಸಿದ್ದಾನೆ. ಹತ್ತಿರದ ಅಂತರದಿಂದ ಗುಂಡು ತಗುಲಿದರೂ ಸಹ, ಬುಲೆಟ್ ಪ್ರೂಫ್ ಜಾಕೆಟ್ ಧರಿಸಿದ್ದ ಕಾರಣ ಸೀಕ್ರೆಟ್ ಸರ್ವಿಸ್ ಏಜೆಂಟ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಕೂಡಲೇ ಕಾರ್ಯಪ್ರವೃತ್ತರಾದ ಇತರ ಅಧಿಕಾರಿಗಳು ಶಂಕಿತನನ್ನು ಹೋಟೆಲ್ ನೆಲದ ಮೇಲೆ ಕೆಡವಿ ಬೇಡಿ ತೊಡಗಿಸಿದ್ದಾರೆ.
ಮೆಲಾನಿಯಾ ಆಘಾತಕ್ಕೊಳಗಾಗಿದ್ದಾರೆ – ಟ್ರಂಪ್:
ಘಟನೆಯ ನಂತರ ಶ್ವೇತಭವನದಿಂದ ದೇಶವನ್ನುದ್ದೇಶಿಸಿ ಮಾತನಾಡಿದ ಟ್ರಂಪ್, “ದಾಳಿಕೋರ ಒಬ್ಬ ಅತ್ಯಂತ ಅಸ್ವಸ್ಥ ವ್ಯಕ್ತಿ ಮತ್ತು ಕ್ರಿಮಿನಲ್” ಎಂದು ಕರೆದಿದ್ದಾರೆ. ಈ ಘಟನೆಯಿಂದ ಪತ್ನಿ ಮೆಲಾನಿಯಾ ಅವರು ತೀವ್ರ ಆಘಾತಕ್ಕೊಳಗಾಗಿದ್ದಾರೆ ಎಂದು ತಿಳಿಸಿದ ಟ್ರಂಪ್, ಪ್ರಾಣದ ಹಂಗು ತೊರೆದು ಹೋರಾಡಿದ ಭದ್ರತಾ ಏಜೆಂಟ್‌ಗಳನ್ನು ಶ್ಲಾಘಿಸಿದರು. ಅಲ್ಲದೆ, ಜವಾಬ್ದಾರಿಯುತವಾಗಿ ವರದಿ ಮಾಡಿದ ಮಾಧ್ಯಮಗಳಿಗೆ ಧನ್ಯವಾದ ಅರ್ಪಿಸಿದರು.
ಮುಂದೂಡಲ್ಪಟ್ಟ ಕಾರ್ಯಕ್ರಮ:
ದಾಳಿಯ ಹಿನ್ನೆಲೆಯಲ್ಲಿ ಕಾರ್ಯಕ್ರಮವನ್ನು ಅರ್ಧಕ್ಕೇ ನಿಲ್ಲಿಸಿ, ಟ್ರಂಪ್ ಸೇರಿದಂತೆ ಆರೋಗ್ಯ ಕಾರ್ಯದರ್ಶಿ ರಾಬರ್ಟ್ ಎಫ್ ಕೆನಡಿ ಜೂನಿಯರ್ ಮತ್ತು ರಕ್ಷಣಾ ಕಾರ್ಯದರ್ಶಿ ಪೀಟ್ ಹೆಗ್ಸೆತ್ ಅವರನ್ನು ಸುರಕ್ಷಿತವಾಗಿ ಹೊರತರಲಾಯಿತು. “ಶೋ ಮುಂದುವರಿಯಲಿ” ಎಂದು ಟ್ರಂಪ್ ಬಯಸಿದ್ದರೂ, ಕಾನೂನು ಸುವ್ಯವಸ್ಥೆಯ ದೃಷ್ಟಿಯಿಂದ ಕಾರ್ಯಕ್ರಮವನ್ನು ಮುಂದೂಡಲಾಗಿದೆ. ಮುಂದಿನ ದಿನಗಳಲ್ಲಿ “ಇನ್ನಷ್ಟು ದೊಡ್ಡದಾಗಿ ಮತ್ತು ಉತ್ತಮವಾಗಿ” ಈ ಕಾರ್ಯಕ್ರಮವನ್ನು ಆಯೋಜಿಸಲಾಗುವುದು ಎಂದು ಟ್ರಂಪ್ ಭರವಸೆ ನೀಡಿದ್ದಾರೆ.
ಸದ್ಯ ಶಂಕಿತ ಅಲೆನ್ ಮೇಲೆ ಫೆಡರಲ್ ಅಧಿಕಾರಿಗಳ ಮೇಲೆ ಹಲ್ಲೆ ಮತ್ತು ಮಾರಕಾಸ್ತ್ರ ಬಳಕೆಯ ಆರೋಪ ಹೊರಿಸಲಾಗಿದ್ದು, ಸೋಮವಾರ ನ್ಯಾಯಾಲಯಕ್ಕೆ ಹಾಜರುಪಡಿಸಲಾಗುವುದು. ಎಫ್‌ಬಿಐ ಈ ಬಗ್ಗೆ ಹೆಚ್ಚಿನ ತನಿಖೆ ನಡೆಸುತ್ತಿದೆ. (News & Photo Courtesy: BBC)





















