ಬೆಂಗಳೂರು, ಏ.22 www.bengaluruwire.com: ರಾಜ್ಯದಲ್ಲಿ ಕೃಷಿ ಜಮೀನನ್ನು ಕೃಷಿಯೇತರ ಉದ್ದೇಶಗಳಿಗೆ ಪರಿವರ್ತಿಸುವ ಪ್ರಕ್ರಿಯೆಯಲ್ಲಿ ಪಾರದರ್ಶಕತೆ ತರಲು ರಾಜ್ಯ ಸರ್ಕಾರ ಮಹತ್ವದ ಹೆಜ್ಜೆ ಇರಿಸಿದೆ.
ಅಫಿಡವಿಟ್ ಆಧಾರಿತ ಭೂಪರಿವರ್ತನೆ ಅರ್ಜಿಗಳನ್ನು ನಿಗದಿತ 30 ದಿನಗಳ ಕಾಲಮಿತಿಯೊಳಗೆ ವಿಲೇವಾರಿ ಮಾಡುವುದನ್ನು ಕಡ್ಡಾಯಗೊಳಿಸಿ ಕಂದಾಯ ಆಯುಕ್ತರು ಆದೇಶ ಹೊರಡಿಸಿದ್ದಾರೆ.
ಹೊಸ ನಿಯಮದ ಅನ್ವಯ ಏನು ಬದಲಾವಣೆ?:
ಕರ್ನಾಟಕ ಭೂ ಕಂದಾಯ ಕಾಯ್ದೆ 1964ರ ಕಲಂ 95 ಹಾಗೂ 1966ರ ನಿಯಮಾವಳಿಗಳಿಗೆ ತಿದ್ದುಪಡಿ ತರಲಾಗಿದ್ದು, ಡಿಸೆಂಬರ್ 23, 2025 ರಿಂದಲೇ ಈ ಹೊಸ ನಿಯಮ ಜಾರಿಗೆ ಬಂದಿದೆ. ಮಾಸ್ಟರ್ ಪ್ಲಾನ್ ವ್ಯಾಪ್ತಿಯ ಹೊರಗಿರುವ ಜಮೀನುಗಳಿಗೆ ಸಲ್ಲಿಕೆಯಾಗುವ ಅರ್ಜಿಗಳ ಮೇಲೆ ಜಿಲ್ಲಾಧಿಕಾರಿಗಳು 30 ದಿನಗಳ ಒಳಗಾಗಿ ಅಂತಿಮ ತೀರ್ಮಾನ ಕೈಗೊಳ್ಳಬೇಕಾಗುತ್ತದೆ.

ಅಧಿಕಾರಿಗಳ ವಿಳಂಬಕ್ಕೆ ದಂಡ: ಸ್ವಯಂಚಾಲಿತ ಅನುಮೋದನೆ:
ಒಂದು ವೇಳೆ ನಿಗದಿತ 30 ದಿನಗಳಲ್ಲಿ ಜಿಲ್ಲಾಧಿಕಾರಿಗಳು ಯಾವುದೇ ನಿರ್ಧಾರ ಪ್ರಕಟಿಸದಿದ್ದರೆ, ಅದನ್ನು ‘ಪರಿಭಾವಿತ ಭೂಪರಿವರ್ತನೆ’ (Deemed Conversion) ಎಂದು ಪರಿಗಣಿಸಲಾಗುತ್ತದೆ. ಅರ್ಜಿದಾರರು ನಿಗದಿತ ಶುಲ್ಕ ಪಾವತಿಸಿದ ತಕ್ಷಣ, ತಂತ್ರಾಂಶದ ಮೂಲಕವೇ ಸ್ವಯಂಚಾಲಿತವಾಗಿ ಭೂಪರಿವರ್ತನೆ ಆದೇಶ ಸೃಜನೆಯಾಗಲಿದೆ.
ಸಮಯ ಹಂಚಿಕೆ ಹೀಗಿದೆ:
ತಹಶೀಲ್ದಾರ್/ಅರಣ್ಯ ಇಲಾಖೆ ಅಭಿಪ್ರಾಯ:15 ದಿನಗಳು.
ಜಿಲ್ಲಾಧಿಕಾರಿ ಕಛೇರಿ ವಿಷಯ ನಿರ್ವಾಹಕರು: 05 ದಿನಗಳು.
ಅಪರ ಜಿಲ್ಲಾಧಿಕಾರಿಗಳು (ADC): 05 ದಿನಗಳು.
ಜಿಲ್ಲಾಧಿಕಾರಿಗಳು (DC): 05 ದಿನಗಳು.
ಒಟ್ಟು 30 ಕೆಲಸದ ದಿನಗಳ ಈ ಗಡುವನ್ನು ಮೀರಿದಲ್ಲಿ, ಅರ್ಜಿ ನೇರವಾಗಿ ಅರ್ಜಿದಾರರ ಲಾಗಿನ್‌ಗೆ ಶುಲ್ಕ ಪಾವತಿಗಾಗಿ ವರ್ಗಾವಣೆಯಾಗುತ್ತದೆ. ಭ್ರಷ್ಟಾಚಾರಕ್ಕೆ ಕಡಿವಾಣ ಹಾಕಲು ಮತ್ತು ಜನಸಾಮಾನ್ಯರಿಗೆ ಕಚೇರಿ ಅಲೆದಾಟ ತಪ್ಪಿಸಲು ಈ ತಂತ್ರಜ್ಞಾನ ಆಧಾರಿತ ವ್ಯವಸ್ಥೆಯನ್ನು ಜಾರಿಗೆ ತರಲಾಗಿದೆ ಎಂದು ಕಂದಾಯ ಆಯುಕ್ತೆ ಮೀನಾ ನಾಗರಾಜ್ ತಿಳಿಸಿದ್ದಾರೆ.






















