ಬೆಂಗಳೂರು, ಏ.21 www.bengaluruwire.com: ನಗರದ ಅತ್ಯಂತ ಕಿಕ್ಕಿರಿದ ವಾಹನ ಸಂಚಾರದ ಪ್ರದೇಶಗಳಲ್ಲಿ ಒಂದಾದ ಹೊರ ವರ್ತುಲ ರಸ್ತೆಯ ಇಬ್ಲೂರು ಜಂಕ್ಷನ್‌ನಲ್ಲಿ ಸಂಚಾರ ದಟ್ಟಣೆ ಕಡಿಮೆ ಮಾಡಲು ಹೆಚ್ಚುವರಿ ಮೇಲ್ಸೇತುವೆ ನಿರ್ಮಿಸಲು ಗ್ರೇಟರ್ ಬೆಂಗಳೂರು ಪ್ರಾಧಿಕಾರ (ಜಿಬಿಎ) ನಿರ್ಧರಿಸಿದೆ.
ಈ ಸಂಬಂಧ ಕೂಡಲೇ ವಿಸ್ತೃತ ಯೋಜನಾ ವರದಿ (DPR) ಸಿದ್ಧಪಡಿಸುವಂತೆ ಜಿಬಿಎ ಮುಖ್ಯ ಆಯುಕ್ತರಾದ ಮಹೇಶ್ವರ್ ರಾವ್ ಅವರು ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.
ಜಿಬಿಎ ಕೇಂದ್ರ ಕಚೇರಿಯಲ್ಲಿ ನಡೆದ ‘ಸುರಕ್ಷಾ-75’ ಜಂಕ್ಷನ್ ಅಭಿವೃದ್ಧಿ ಹಾಗೂ ವೈಟ್ ಟಾಪಿಂಗ್ ಕಾಮಗಾರಿಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದ ಅವರು, ಇಬ್ಲೂರು ಜಂಕ್ಷನ್‌ನಲ್ಲಿ ಹೆಚ್ಚುವರಿ ಮೇಲ್ಸೇತುವೆ ನಿರ್ಮಾಣದ ಅನಿವಾರ್ಯತೆಯನ್ನು ಒತ್ತಿ ಹೇಳಿದರು.
ತ್ವರಿತ ಕಾಮಗಾರಿಗೆ ನಿರ್ದೇಶನ:

“ಇಬ್ಲೂರು ಜಂಕ್ಷನ್ ಬಳಿ ಹೆಚ್ಚುವರಿ ಮೇಲ್ಸೇತುವೆ ನಿರ್ಮಿಸಿದರೆ ಸಂಚಾರ ದಟ್ಟಣೆಗೆ ಶಾಶ್ವತ ಪರಿಹಾರ ಸಿಗಲಿದೆ. ಈ ನಿಟ್ಟಿನಲ್ಲಿ ಕಾಲಮಿತಿಯೊಳಗೆ ಸಮಗ್ರ ಯೋಜನೆ ರೂಪಿಸಬೇಕು. ಅಲ್ಲದೆ, ಜಂಕ್ಷನ್ ಸುತ್ತಮುತ್ತಲಿರುವ ಖಾಲಿ ಜಾಗವನ್ನು ಪಾಲಿಕೆ ವಶಕ್ಕೆ ಪಡೆದು, ಸಂಚಾರ ಸುಗಮಗೊಳಿಸಲು ಅಗತ್ಯ ಕ್ರಮ ಕೈಗೊಳ್ಳಬೇಕು” ಎಂದು ಅವರು ತಿಳಿಸಿದರು.
ಸುರಕ್ಷಾ-75 ಯೋಜನೆಗೆ ವೇಗ:
ನಗರದ ಆಯ್ದ 75 ಜಂಕ್ಷನ್‌ಗಳನ್ನು ಅಭಿವೃದ್ಧಿಪಡಿಸುವ ‘ಸುರಕ್ಷಾ-75’ ಯೋಜನೆಯಡಿ ಈಗಾಗಲೇ 32 ಜಂಕ್ಷನ್‌ಗಳ ವಿನ್ಯಾಸವನ್ನು ಸಂಚಾರಿ ಪೊಲೀಸರೊಂದಿಗೆ ಸಮನ್ವಯ ಸಾಧಿಸಿ ಅಂತಿಮಗೊಳಿಸಲಾಗಿದೆ. ಈ ಪೈಕಿ 10 ಜಂಕ್ಷನ್‌ಗಳಲ್ಲಿ ಕಾಮಗಾರಿ ಆರಂಭವಾಗಿದ್ದು, ಉಳಿದ ಕಡೆಗಳಲ್ಲಿ ಮೆಟ್ರೋ ಮತ್ತು ಬೆಸ್ಕಾಂ ಅಧಿಕಾರಿಗಳೊಂದಿಗೆ ಜಂಟಿ ಪರಿಶೀಲನೆ ನಡೆಸಿ ಕೆಲಸ ಆರಂಭಿಸಲು ಸೂಚಿಸಲಾಗಿದೆ.
ವೈಟ್ ಟಾಪಿಂಗ್ ವಿಳಂಬಕ್ಕೆ ಕಡಿವಾಣ:
ನಗರದ ವಿವಿಧೆಡೆ ನಡೆಯುತ್ತಿರುವ ವೈಟ್ ಟಾಪಿಂಗ್ ಕಾಮಗಾರಿಗಳಿಗೆ ಜಲಮಂಡಳಿ ಪೈಪ್‌ಲೈನ್ ಅಥವಾ ಸಂಚಾರಿ ಪೊಲೀಸರ ಅನುಮತಿ ವಿಳಂಬವಾಗುತ್ತಿರುವುದನ್ನು ಗಮನಿಸಿದ ಆಯುಕ್ತರು, ಕೂಡಲೇ ಈ ಸಮಸ್ಯೆಗಳನ್ನು ಬಗೆಹರಿಸಿ ಕಾಲಮಿತಿಯೊಳಗೆ ಕಾಮಗಾರಿ ಪೂರ್ಣಗೊಳಿಸಬೇಕು ಎಂದು ಅಧಿಕಾರಿಗಳಿಗೆ ತಾಕೀತು ಮಾಡಿದರು.
ಸಭೆಯಲ್ಲಿ ನಗರ ಪಾಲಿಕೆ ಆಯುಕ್ತರಾದ ಪೊಮ್ಮಲ ಸುನೀಲ್ ಕುಮಾರ್, ಕೆ.ಎನ್. ರಮೇಶ್, ಡಾ. ರಾಜೇಂದ್ರ ಕೆ.ವಿ. ಸೇರಿದಂತೆ ಬಿ-ಸ್ಮೈಲ್, ಜಲಮಂಡಳಿ ಮತ್ತು ಮೆಟ್ರೋ ಇಲಾಖೆಯ ಉನ್ನತ ಅಧಿಕಾರಿಗಳು ಉಪಸ್ಥಿತರಿದ್ದರು.






















